ADVERTISEMENT

ಕುಂದಾನಗರಿಯಲ್ಲಿ ನವರಾತ್ರಿ ವಿಶೇಷಗಳು: ಭಕ್ತಿಗೆ ‘ದೌಡ್’, ಮನರಂಜನೆಗೆ ‘ದಾಂಡಿಯಾ’

ಎಂ.ಮಹೇಶ
Published 14 ಅಕ್ಟೋಬರ್ 2018, 9:15 IST
Last Updated 14 ಅಕ್ಟೋಬರ್ 2018, 9:15 IST
ಬೆಳಗಾವಿಯಲ್ಲಿ ಭಾನುವಾರ ನಡೆದ ದುರ್ಗಾಮಾತಾ ದೌಡ್‌ನ ನೋಟ
ಬೆಳಗಾವಿಯಲ್ಲಿ ಭಾನುವಾರ ನಡೆದ ದುರ್ಗಾಮಾತಾ ದೌಡ್‌ನ ನೋಟ   

ಬೆಳಗಾವಿ: ಕುಂದಾನಗರಿಯಲ್ಲಿ ನವರಾತ್ರಿಯನ್ನು ಸಂಭ್ರಮ–ಸಡಗರದಿಂದ ಆಚರಿಸಲಾಗುತ್ತಿದೆ. ದೇಶಭಕ್ತಿ ಮೇಳೈಸುವ ‘ದುರ್ಗಾಮಾತಾ ದೌಡ್‌’ ಕಾರ್ಯಕ್ರಮವನ್ನು ಬೆಳಿಗ್ಗೆ, ಮನರಂಜನೆಗಾಗಿ ದಾಂಡಿಯಾ ನೃತ್ಯ ಕಾರ್ಯಕ್ರಮಗಳನ್ನು ರಾತ್ರಿ ಆಯಾ ಬಡಾವಣೆಗಳಲ್ಲಿ ಆಯೋಜಿಸಲಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಜೃಂಭಣೆಯಿಂದ ಆಚರಣೆಗಳು ನಡೆಯುತ್ತಿವೆ.

ಭಕ್ತಿಯನ್ನು ಸಾರುವ ಹಾಗೂ ಸಾಂಸ್ಕೃತಿಕ ವೈಭವದ ವಾತಾವರಣ ನಿರ್ಮಾಣ ಮಾಡುವ ಈ ಕಾರ್ಯಕ್ರಮಗಳಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಭಾರತಾಂಬೆ, ಛತ್ರಪತಿ ಶಿವಾಜಿ ಪರವಾದ ಘೋಷಣೆಗಳು ಮೊಳಗುತ್ತಿವೆ. ಈ ಎಲ್ಲ ಆಚರಣೆಗಳಿಗೆ ವಿಜಯದಶಮಿಯ ದಿನವಾದ ಅ. 19ರಂದು ತೆರೆ ಬೀಳಲಿದೆ.

ಹೆಚ್ಚಿನ ಕಡೆ ಪ್ರತಿಷ್ಠಾಪನೆ:

ADVERTISEMENT

ನವರಾತ್ರಿ ಆಚರಣೆ ವರ್ಷದಿಂದ ವರ್ಷಕ್ಕೆ ಕಳೆಕಟ್ಟುತ್ತಿದೆ. ನಗರದಲ್ಲಿ ಹೋದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರದೇಶಗಳಲ್ಲಿ ಶಕ್ತಿದೇವತೆ ದುರ್ಗಾಮಾತೆಯನ್ನು ಆಕರ್ಷಕವಾಗಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಆ ಸ್ಥಳದಲ್ಲಿ ಸಂಜೆಯಿಂದಲೇ ದಾಂಡಿಯಾ ನೃತ್ಯ ಸಂಭ್ರಮ ಮೆರುಗು ನೀಡುತ್ತದೆ. ಆಯಾ ಬಡಾವಣೆಯ ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಶಿಸ್ತುಬದ್ಧ ಕೋಲಾಟ ಗಮನಸೆಳೆಯುತ್ತದೆ.

ಬಡಾವಣೆಯ ಮುಖಂಡರು, ಹಿರಿಯರು ದೌಡ್‌ ಆಯೋಜಿಸುತ್ತಾರೆ. ಸ್ಥಳೀಯರು ನಿಗದಿತ ಬಡಾವಣೆಯ ರಸ್ತೆಗಳನ್ನು ಹಿಂದಿನ ದಿನವೇ ಸ್ವಚ್ಛಗೊಳಿಸಿ, ರಂಗೋಲಿಗಳನ್ನು ಬಿಡಿಸಿ ಸಿಂಗರಿಸುತ್ತಾರೆ. ಹೂವಿನ ದಳಗಳನ್ನು ಹಾಕಿ ಅಲಂಕರಿಸಲಾಗುತ್ತದೆ. ರಸ್ತೆಯ ಮೇಲೆ ಕೇಸರಿ ಬಾವುಟಗಳು, ಬಟ್ಟೆಗಳನ್ನು ಕಟ್ಟಲಾಗುತ್ತದೆ. ಶಿವಾಜಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.

ಸಂಸ್ಕೃತಿ ತಿಳಿಸಲು:

ಮರು ದಿನ ಬೆಳಿಗ್ಗೆ, ಈ ರಸ್ತೆಗಳಲ್ಲಿ ಸ್ಥಳೀಯ ಯುವಕರು, ಮಕ್ಕಳು ಬಿಳಿ ಬಟ್ಟೆ ತೊಟ್ಟು, ಗಾಂಧಿ ಟೋಪಿ ಹಾಕಿಕೊಂಡು, ಸೊಂಟಕ್ಕೆ ಕೇಸರಿ ಶಾಲು, ತಲೆಗೆ ರುಮಾಲು ಕಟ್ಟಿಕೊಂಡು, ಕೇಸರಿ ಬಾವುಟಗಳನ್ನು ಹಿಡಿದು ಬರಿಗಾಲಿನಲ್ಲಿ ಶ್ರದ್ಧಾಭಕ್ತಿಯಿಂದ ಓಡುತ್ತಾರೆ. ದೇಶಭಕ್ತಿ ಗೀತೆಗಳನ್ನು ಹಾಡುತ್ತಾರೆ. ಶಿವಾಜಿ ಮಹಾರಾಜರ ಸಾಹಸಗಾಥೆಗಳನ್ನು ಪರಿಚಯಿಸಲಾಗುತ್ತದೆ. ಕೆಲವರು ಕತ್ತಿಗಳನ್ನು ಹಿಡಿದು ‘ದೌಡ್‌’ನಲ್ಲಿ ಪಾಲ್ಗೊಳ್ಳುತ್ತಾರೆ. ಸ್ಥಳೀಯರು ಪುಷ್ಪ ಮಳೆಗರೆದು ಅವರನ್ನು ಸ್ವಾಗತಿಸುತ್ತಾರೆ.

‘ಇಂದಿನ ‍ಪೀಳಿಗೆಯವರಿಗೆ ಹಿಂದೂ ಸಂಸ್ಕೃತಿ ಪರಿಚಯಿಸುವುದು, ದೇಶಭಕ್ತಿ ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದು ಹಿರಿಯರು ತಿಳಿಸಿದರು.

ಸಂಸ್ಕೃತಿ ಮೇಳೈಸುವ ಕಾರ್ಯಕ್ರಮ:

ದೌಡ್‌ನಲ್ಲಿ ಪಾಲ್ಗೊಳ್ಳುವವರು ಮಾರ್ಗ ಮಧ್ಯದಲ್ಲಿ ಸಿಗುವ ದೇಗುಲಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಬಹುತೇಕ ಬಡಾವಣೆಗಳಲ್ಲಿ ನವರಾತ್ರಿಯ ಒಂದು ದಿನ, ಸ್ಥಳೀಯರು ಅಲ್ಲಿನ ಮಕ್ಕಳಿಗೆ ಆಟೋಟ ಮತ್ತಿತರ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ. ಭಾನುವಾರ ಶಹಾಪುರದ ಅಂಬಾಮಾತಾ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ದೌಡ್ ನಡೆಯಿತು. ಶಾಹುನಗರದ ದುರ್ಗಾಮಾತಾ ಗಲ್ಲಿ, ಶಿವಾಜಿ ಗಲ್ಲಿಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು.

ಕನ್ನಡ–ಮರಾಠಿ ಸಂಸ್ಕೃತಿ ಸಂಸ್ಕೃತಿ ಮೇಳೈಸಿರುವ ಈ ಆಚರಣೆಯಲ್ಲಿ ಉಭಯ ಭಾಷಿಕರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. 1995–96ರಲ್ಲಿ ಮೊದಲಿಗೆ ಶಿವಪ್ರೇಮಿ ಕಾರ್ಯಕರ್ತರು ದುರ್ಗಾಮಾತಾ ದೌಡ್ ಆಚರಣೆ ಆರಂಭಿಸಿದರು. 25 ಭಕ್ತರಿಂದ ಆರಂಭವಾದ ದೌಡ್‌ನಲ್ಲಿ ಪ್ರಸ್ತುತ 30ಸಾವಿರಕ್ಕೂ ಹೆಚ್ಚು ಮಂದಿ ಹೆಜ್ಜೆ ಹಾಕುತ್ತಿದ್ದಾರೆ. ಬಹುತೇಕ ಬಡಾವಣೆಗಳಿಗೆ ವಿಸ್ತರಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.