ADVERTISEMENT

ಪೊಲೀಸ್‌ ಬ್ಯಾಂಡ್‌ ಸಂಗೀತಕ್ಕೆ ಧರೆಗಿಳಿದ ಮಳೆ

ವರುಣನ ಅಬ್ಬರದ ನಡುವೆಯೂ ಕದಲದ ಜನ, ನಿಲ್ಲದ ಸಂಗೀತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 20:05 IST
Last Updated 14 ಅಕ್ಟೋಬರ್ 2018, 20:05 IST
ಅರಮನೆಯ ಆವರಣದಲ್ಲಿ ಭಾನುವಾರ ಪೊಲೀಸ್‌ ಬ್ಯಾಂಡ್‌ ತಂಡವು ಸಂಗೀತ ನುಡಿಸುತ್ತ ಬಂದಾಗ ಇವರ ಹಿಂದೆ ದೀಪಾಲಂಕಾರದಿಂದ ಅರಮನೆ ಕಂಗೊಳಿಸಿದ್ದು ಹೀಗೆ
ಅರಮನೆಯ ಆವರಣದಲ್ಲಿ ಭಾನುವಾರ ಪೊಲೀಸ್‌ ಬ್ಯಾಂಡ್‌ ತಂಡವು ಸಂಗೀತ ನುಡಿಸುತ್ತ ಬಂದಾಗ ಇವರ ಹಿಂದೆ ದೀಪಾಲಂಕಾರದಿಂದ ಅರಮನೆ ಕಂಗೊಳಿಸಿದ್ದು ಹೀಗೆ   

ಮೈಸೂರು: ಮಳೆ ಬಾರದಿದ್ದಾಗ ಹಳ್ಳಿಗಳಲ್ಲಿ ಕುಮಾರವ್ಯಾಸ ಭಾರತ ವಾಚಿಸುತ್ತಿದ್ದರು. ಇಲ್ಲವೇ ಮತ್ತಾವುದೋ ಸಂಗೀತದ ಪ್ರಾಧಾನ್ಯವಳ್ಳ ಕಥನವೊಂದನ್ನು ಹಾಡಿಸುತ್ತಿದ್ದರು. ಆಗ ಅದರ ಮಧ್ಯದಲ್ಲೇ ಮಳೆ ಬಂದ ಉದಾಹರಣೆಗಳು ಸಾಕಷ್ಟಿವೆ. ಇಂಥದ್ದೊಂದು ಅಪರೂಪದ ಕ್ಷಣಕ್ಕೆ ಅರಮನೆ ವೇದಿಕೆಯಲ್ಲಿ ಭಾನುವಾರ ನಡೆದ ಪೊಲೀಸ್ ಬ್ಯಾಂಡ್ ಸಮೂಹ ವಾದ್ಯಮೇಳ ಸಾಕ್ಷಿಯಾಯಿತು.

ರಾಜ್ಯದ ಒಟ್ಟು 36 ತಂಡಗಳು ಇದರಲ್ಲಿ ಭಾಗವಹಿಸಿದ್ದವು. 500ಕ್ಕೂ ಹೆಚ್ಚಿನ ಸಂಗೀತಕಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಾವಿರಾರು ಮಂದಿ ಈ ವಾದ್ಯಗೋಷ್ಠಿಯನ್ನು ಆಲಿಸಿದರು. ಈ ರಸನಿಮಿಷ ಕಾಣಲೆಂದೋ ಏನೋ ದಸರಾ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಳೆ ಅರಮನೆ ಹಾಗೂ ಅದರ ಅಸುಪಾಸಿನಲ್ಲಿ ಧರೆಗಿಳಿಯಿತು.

ಮಳೆ ಹನಿಗಳಿಗೆ ವಿಚಲಿತರಾಗದ ವಾದ್ಯ ವೃಂದವರು ನಿಗದಿತ ಕಾರ್ಯಕ್ರಮ ಪಟ್ಟಿಯಂತೆ ಮಳೆಯಲ್ಲಿ ನನೆಯುತ್ತಲೇ ಪ್ರಸ್ತುತಪಡಿಸಿದರು. ಇವರ ಸಂಗೀತ ಸುಧೆಯನ್ನು ಗಂಟೆಗಟ್ಟಲೆ ಕಾಲ ಕೇಳಿದ ಜನಸಮುದಾಯ ಸ್ವಲ್ಪವೂ ಕದಲದೆ ಕುರ್ಚಿಗಳನ್ನು ತಲೆಯ ಮೇಲಿಟ್ಟುಕೊಂಡು ನಿಂತುಕೊಂಡೆ ಸಂಗೀತವನ್ನು ಆಸ್ವಾದಿಸಿದರು. ಸುರಿದ ಮಳೆಯಿಂದ ರಸಭಂಗವಾಗಲಿಲ್ಲ.

ADVERTISEMENT

‘ರಾಯಲ್ ಫ್ಯಾನ್‌ ಫೇರ್‌’ನಿಂದ ವಾದ್ಯಗೋಷ್ಠಿ ಆರಂಭವಾಯಿತು. ಗಂಗೋತ್ರಿ, ಜನರಲ್ ಸಲ್ಯೂಟ್, ಭಾರತ್‌ ಕೀ ಜವಾನ್ ನಂತರ ‘ಪ್ರಸನ್ನ ಗಣಪತೇ’ ಜಯಚಾಮರಾಜ ಒಡೆಯರ್ ಅವರ ದೇವಿ ಕಮಲಾಂಬಿಕೆಯ ರಾಗಮಾಲಿಕೆಗಳನ್ನು ನುಡಿಸಲಾಯಿತು. ತ್ಯಾಗರಾಜರ ಪ್ರಸಿದ್ಧ ಕೃತಿಯಾದ ಸದಾಮತಿಂ ಗೀತೆ ಗಂಭೀರವಾಣಿರಾಗ, ಆದಿತಾಳದಲ್ಲಿ ಮೂಡಿಬಂದದ್ದು ಮನಸೂರೆಗೊಂಡಿತು.

ಕೇವಲ ಕರ್ನಾಟಕದ್ದು ಮಾತ್ರವಲ್ಲ ಪಾಶ್ಚಾತ್ಯ ಗೀತೆಗಳ ರಾಗಗಳೂ ಮನಸೆಳೆದವು. ‘ಸ್ಪೀಕ್ ಸಾಫ್ಲಿ ಲವ್’, ಬಾನಿ ಅವರ ‘ಭಾಮಾ ಮಾಮಾ’, ‘ಈದ್‌ ಷರೀನ್‌ ಮತ್ತು ಟೈಟಾನಿಕ್‌' ಗೀತೆಗಳು ಸಂಗೀತಕ್ಕೆ ಗಡಿಗಳಿಲ್ಲ ಎಂಬುದನ್ನು ಋಜುವಾತುಪಡಿಸಿದವು. ಮುತ್ತಯ್ಯ ಭಾಗವತರ ‘ನೋಟ್ಟುಸ್ವರ’ದ ಕರ್ನಾಟಕ ಮತ್ತು ಇಂಗ್ಲೀಷ್ ಬ್ಯಾಂಡ್‌ನ ಜುಗಲ್‌ಬಂದಿಯಂತೂ ರಸಗವಳವಾಗಿ ಪರಿಣಮಿಸಿತು.

ಗೃಹಸಚಿವ ಡಾ.ಜಿ.ಪರಮೇಶ್ವರ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಈ ಕ್ಷಣಕ್ಕೆ ಸಾಕ್ಷಿಯಾದರು.

**

148 ವರ್ಷದ ಪಿಯಾನೊಗೆ ಮರುಜೀವ!

148 ವರ್ಷ ಹಳೆಯ ಪಿಯಾನೊಗೆ ಮರುಜೀವ ನೀಡಿ ಅದರಿಂದ ಸಂಗೀತ ಹೊಮ್ಮಿಸಿದ್ದು ಈ ಬಾರಿ ಪೊಲೀಸ್ ಬ್ಯಾಂಡ್‌ನ ವಿಶೇಷ ಎನಿಸಿತ್ತು. 1870ರಲ್ಲಿ ಮೈಸೂರು ಅರಸರು ಖರೀದಿಸಿದ್ದ ಪಿಯಾನೊವನ್ನು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ದುರಸ್ತಿಗೊಳಿಸಿದ್ದರಿಂದ ಇದು ಸಾಧ್ಯವಾಯಿತು.

ಇದರಿಂದ ಹೊಮ್ಮಿದ ‘ಅನ್‌ಟಿಲ್‌ ದಿ ಲಾಸ್ಟ್‌ ಮೂಮೆಂಟ್’, ‘ಮೇಡ್ಲಿ ಆಫ್ ಯಾನ್ನಿ’, ಫರ್‌ ಎಲಿಸಾ ಗೀತೆಗಳು ಮನಸೂರೆಗೊಂಡವು. ಪಿಯಾನೊ ಮತ್ತು ವಯಲಿನ್‌ನಲ್ಲಿ ನುಡಿಸಿದ ‘ನಾಸ್ಟೊಲಿಗಾ’ ವಿಶಿಷ್ಟವಾಗಿತ್ತು. ಪಿಯಾನೊ, ವಯಲೀನ್, ಮ್ಯಾಂಡೊಲಿನ್, ಮೃದಂಗ ಸೇರಿದಂತೆ 5 ವಾದ್ಯಗಳಲ್ಲಿ ನುಡಿಸಿದ ‘ರಾಗರಂಗ್‌’ ಅಂತೂ ಸಂಗೀತ ಸುಧೆಯನ್ನು ಶೋತೃಗಳಿಗೆ ಉಣಬಡಿಸಿತು.

**

ಪೊಲೀಸ್ ಬ್ಯಾಂಡ್‌ನ ಪದಕ ವಿಜೇತರು

ಮೈಸೂರು: ಬಿಗ್‌ಬ್ಯಾಂಡ್ ವಿಭಾಗದಲ್ಲಿ ಬೆಂಗಳೂರಿನ ನಗರ ಸಶಸ್ತ್ರ ಮೀಸಲು ಪಡೆ ಪ್ರಥಮ, ಮೈಸೂರಿನ 5ನೇ ಕರ್ನಾಟಕ ರಾಜ್ಯ ಮೀಸಲು ಪಡೆ ದ್ವಿತೀಯ, ಮೀಡಿಯಂ ಬ್ಯಾಂಡ್ ವಿಭಾಗದಲ್ಲಿ ಶಿವಮೊಗ್ಗದ 8ನೇ ಕರ್ನಾಟಕ ರಾಜ್ಯ ಮೀಸಲು ಪಡೆ ಪ್ರಥಮ, ಮಂಗಳೂರಿನ 7ನೇ ಕರ್ನಾಟಕ ರಾಜ್ಯ ಮೀಸಲು ಪಡೆ ದ್ವಿತೀಯ, ಸ್ಮಾಲ್ ಬ್ಯಾಂಡ್‌ ವಿಭಾಗದಲ್ಲಿ ಕಾರವಾರದ ಜಿಲ್ಲಾ ಮೀಸಲು ಪಡೆ ಪ್ರಥಮ, ಬಾಗಲಕೋಟೆ ಜಿಲ್ಲಾ ಮೀಸಲು ಪಡೆ ದ್ವಿತೀಯ, ವಿಶೇಷ ಬಹುಮಾನ ಪೈಪ್‌ಬ್ಯಾಂಡ್ ವಿಭಾಗದಲ್ಲಿ ಕರ್ನಾಟಕ ಮೀಸಲು ಪಡೆಯ 1ನೇ ಪಡೆ ಪ್ರಥಮ, ಮಂಡ್ಯದ ಜಿಲ್ಲಾ ಮೀಸಲು ಪಡೆ ದ್ವಿತೀಯ ಬಹುಮಾನ ಗಳಿಸಿತು.

**

ಮಳೆಯ ನಡುವೆ ಗಾನಸುಧೆ

ಮೈಸೂರು: ಬೀಳುತ್ತಿದ್ದ ಮಳೆಯ ನಡುವೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾಯನಮೋಡಿ ಜನರನ್ನು ರಂಜಿಸಿತು. ಮಳೆ ಮತ್ತು ಗಾಯನ ಜುಗಲ್‌ಬಂದಿಯಂತೆ ಕಂಡು ಬಂದ ಅಪರೂಪದ ಕ್ಷಣದಲ್ಲಿ ಹಲವು ಹಾಡುಗಳು ರಂಜಿಸಿದವು. ‘ಕೂರಕ್‌ ಕುಕ್ಕರಹಳ್ಳಿ ಕೆರೆ’, ‘ಈ ಸಂಜೆಯ ಬೆಳದಿಂಗಳ ...‘, ‘ರಾ... ರಾ...ಸರಸಕ್ಕೆ ಬಾರಾ’, ‘ಶಾರದೆಯೇ ದಯೆ ತೋರಿದೆ’... ಸೇರಿದಂತೆ ಹಲವು ಹಾಡುಗಳು ಮನಸೂರೆಗೊಂಡವು.

ಶ್ರೀಧರ್‌ ಜೈನ್‌ ಮತ್ತು ತಂಡದವರು ಪ್ರಸ್ತುತಪಡಿಸಿದ ನೃತ್ಯರೂಪಕವೂ ಜನರನ್ನು ಸೆಳೆಯಿತು. ಕಾರ್ಯಕ್ರಮ ಮುಗಿಯುವವರೆಗೂ ಮಳೆ ಬೀಳುತ್ತಲೇ ಇತ್ತು. ಮಳೆಯನ್ನು ನೆನೆಯುತ್ತಲೇ ಜನರು ಸಾಂಸ್ಕೃತಿಕ ಕಾರ್ಯಕ್ರಮದ ರಸದೌತಣವನ್ನು ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.