ADVERTISEMENT

ದಿನದ ಸೂಕ್ತಿ: ನಡತೆಯೇ ಸಂಪತ್ತು

ಎಸ್.ಸೂರ್ಯಪ್ರಕಾಶ ಪಂಡಿತ್
Published 18 ಸೆಪ್ಟೆಂಬರ್ 2020, 2:33 IST
Last Updated 18 ಸೆಪ್ಟೆಂಬರ್ 2020, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿದೇಶೇಷು ಧನಂ ವಿದ್ಯಾ ವ್ಯಸನೇಷು ಧನಂ ಮತಿಃ ।

ಪರಲೋಕೇ ಧನಂ ಧರ್ಮಃ ಶೀಲಂ ಸರ್ವತ್ರ ಸದ್ಧನಮ್ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ವಿದೇಶದಲ್ಲಿದ್ದಾಗ ವಿದ್ಯೆಯೇ ಹಣ; ದುಃಖದಲ್ಲಿದ್ದಾಗ ಬುದ್ಧಿಯೇ ಹಣ; ಪರಲೋಕದಲ್ಲಿ ಧರ್ಮವೇ ಹಣ; ಆದರೆ ಶೀಲವೇ ಎಲ್ಲೆಲ್ಲೂ ಸಲ್ಲುವ ಹಣ.‘

ಹಣ ಇಲ್ಲದೇ ನಮ್ಮ ಜೀವನವೇ ನಡೆಯದು ಎಂಬ ನಿರ್ಧಾರಕ್ಕೆ ನಾವು ತಲಪಿ ತುಂಬ ವರ್ಷಗಳೇ ಆಗಿವೆ. ಹೀಗಾಗಿಯೇ ನಾವೆಲ್ಲ ಹಣದ ಹಿಂದೆ ಓಡುತ್ತಿರುವುದು. ಹಣವನ್ನು ಸಂಪಾದಿಸಲು ಏನು ಅನ್ಯಾಯ–ಅಕ್ರಮ ಮಾಡಿದರೂ ಪರವಾಗಿಲ್ಲ; ಹಣವನ್ನು ಸಂಪಾದಿಸಬೇಕು ಅಷ್ಟೆ – ಎನ್ನುವಂಥ ನಿಲವು ನಮ್ಮದು. ಒಮ್ಮೆ ನಮ್ಮಲ್ಲಿ ಹಣದ ರಾಶಿ ಇದ್ದರೆ ನಾವು ಎಂಥ ತಪ್ಪಿನಿಂದಲೂ ಪಾರಾಗಬಹುದು; ಸಮಾಜದಲ್ಲಿ ನಮಗೆ ಗಣ್ಯಸ್ಥಾನ ಹಣದಿಂದಲೇ ಸಿಗುತ್ತದೆ – ಹೀಗೆಲ್ಲ ಯೋಚನೆಗಳು ನಮ್ಮ ತಪ್ಪುಗಳಿಗೆ ಸಮರ್ಥನೆಯನ್ನೂ ಒದಗಿಸುತ್ತಿದೆ.

ಹಣ ಬೇಕು ನಿಜ; ಅದು ಇಲ್ಲದೆ ನಮ್ಮ ಜೀವನ ನಡೆಯದು ಎಂಬುದು ಪೂರ್ಣ ಸುಳ್ಳೂ ಅಲ್ಲ. ಆದರೆ ಹಣ ಎಂದರೇನು? ಇದು ಇಲ್ಲಿರುವ ಪ್ರಶ್ನೆ.

ನಾವು ಬ್ಯಾಂಕ್‌ನಲ್ಲಿ ಕೂಡಿಟ್ಟಿರುವ ದುಡ್ಡು ಮಾತ್ರವೇ ನಿಜವಾದ ಹಣ–ಸಂಪತ್ತು ಎಂಬ ತಿಳಿವಳಿಕೆ ನಮ್ಮದು. ಈ ಹಣದಿಂದಲೇ ನಮ್ಮ ಜೀವನ ಸುಖಮಯವೂ ಸಂತೋಷಮಯವೂ ಆಗಿರುತ್ತದೆ ಎಂಬ ತಪ್ಪು ನಂಬಿಕೆಯಲ್ಲಿ ಬದುಕುತ್ತಿದ್ದೇವೆ. ಸುಭಾಷಿತ ಇಲ್ಲಿ ಹೇಳುತ್ತಿರುವುದು ಇದನ್ನೇ. ಬ್ಯಾಂಕ್‌ನಲ್ಲಿಟ್ಟಿರುವ ಹಣವನ್ನು ಹೊರತು ಪಡಿಸಿಯೂ ನಮ್ಮ ಜೊತೆಯಲ್ಲಿರುವ ಹಣದ ಮೂಲಗಳು ಯಾವುವು ಎಂಬುದನ್ನೂ ಅದು ಇಲ್ಲಿ ಹೇಳುತ್ತಿದೆ.

ವಿದೇಶದಲ್ಲಿದ್ದಾಗ ನಾವು ಕಲಿತಿರುವ ವಿದ್ಯೆಯೇ ಹಣವಾಗುತ್ತದೆ. ಹೌದು, ಬೇರೆ ಊರುಗಳಿಗೆ ಹೋದರೂ ನಮಗೆ ಇದರ ಅನುಭವವಾಗುತ್ತದೆ. ನಾವು ಕಲಿತಿರುವ ವಿದ್ಯೆಯೇ – ಅದು ಭಾಷೆಯ ರೂಪದಲ್ಲಾಗಬಹುದು ಅಥವಾ ನಾವು ಪಡೆದಿರುವ ವಿಷಯತಜ್ಞತೆ ಇರಬಹುದು – ಅದೇ ಬೇರೆ ಊರಿನಲ್ಲಿ ನಮ್ಮ ನೆರವಿಗೆ ಬರುವಂಥದ್ದು.

ನಾವು ದುಃಖದಲ್ಲಿದ್ದಾಗ ಬ್ಯಾಂಕ್‌ನಲ್ಲಿರುವ ನಮ್ಮ ಹಣ ನಮ್ಮನ್ನು ದುಃಖದಿಂದ ಪಾರುಮಾಡುವುದಿಲ್ಲ. ನಮ್ಮ ಬುದ್ಧಿಯೇ ನಮ್ಮನ್ನು ಆ ದುಃಖದ ಸನ್ನಿವೇಶದಿಂದ ಪಾರುಮಾಡಬಲ್ಲದು. ದುಃಖದಲ್ಲಿದ್ದಾಗ ನಮ್ಮ ಬುದ್ಧಿಯೇ ನಮಗೆ ಶ್ರೀರಕ್ಷೆ.

ನಮ್ಮಲ್ಲಿ ಪರಲೋಕದ ಕಲ್ಪನೆಯೂ ಉಂಟು; ಪುನರ್ಜನ್ಮದ ಕಲ್ಪನೆಯೂ ಉಂಟು. ನಾವು ಈ ಲೋಕದಲ್ಲಿ ಮಾಡಿರುವ ಧರ್ಮ–ಅಧರ್ಮದ ಕಾರ್ಯಗಳೇ ನಮ್ಮ ಪರಲೋಕವಾಸದ ಸ್ಥಿತಿಯನ್ನು ನಿರ್ಧರಿಸುತ್ತದೆ ಎನ್ನುವುದು ನಮ್ಮ ಶಾಸ್ತ್ರಗಳಲ್ಲಿರುವ ಒಕ್ಕಣೆ. ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ಬ್ಯಾಂಕ್‌ನಲ್ಲಿಟ್ಟಿರುವ ಹಣ ಇರಬಹುದು, ಜೇಬಿನಲ್ಲಿರುವ ಹಣ ಇರಬಹುದು ಅಥವಾ ಮೇಲೆ ಕಾಣಿಸಿರುವ ಹಣವಲ್ಲದ ಹಣದ ರೂಪಗಳಿರಬಹುದು – ಇವೆಲ್ಲವೂ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ, ನಿರ್ದಿಷ್ಟ ದೇಶದಲ್ಲಿ ಮಾತ್ರ ಚಲಾವಣೆಯಲ್ಲಿರುವಂಥವು; ಆದರೆ ಶೀಲ ಎನ್ನುವುದು ಎಲ್ಲ ಸಮಯದಲ್ಲೂ ಎಲ್ಲ ಸ್ಥಳದಲ್ಲೂ ಸಲ್ಲುವ ಹಣ ಎಂದು ಸುಭಾಷಿತ ಘೋಷಿಸುತ್ತಿದೆ.

ಶಿಲ ಎಂದರೆ ನಮ್ಮ ನಡೆವಳಿಕೆ. ಅದನ್ನು ಜೋಪಾನದಿಂದ ಕಾಪಾಡಿಕೊಳ್ಳಬೇಕು. ಏಕೆಂದರೆ ಅದು ಎಲ್ಲ ಕಾಲಕ್ಕೂ ಎಲ್ಲ ದೇಶದಲ್ಲೂ ಸಲ್ಲುವ ಸಂಪತ್ತು. ಇದನ್ನು ಮರೆಯದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.