ADVERTISEMENT

ದಿನದ ಸೂಕ್ತಿ | ಒಬ್ಬನೇ ನಿಲ್ಲು

ಎಸ್.ಸೂರ್ಯಪ್ರಕಾಶ ಪಂಡಿತ್
Published 23 ಆಗಸ್ಟ್ 2020, 19:00 IST
Last Updated 23 ಆಗಸ್ಟ್ 2020, 19:00 IST
meditation
meditation   

ಚಲಂತಿ ಗಿರಯಃ ಕಾಮಂ ಯುಗಾಂತಪವನಾಹತಾಃ ।

ಕೃಚ್ಛ್ರೇsಪಿ ನ ಚಲತ್ಯೇವ ಧೀರಾಣಾಂ ನಿಶ್ಚಲಂ ಮನಃ ।।

ಇದರ ತಾತ್ಪರ್ಯ ಹೀಗೆ: ‘ಪ್ರಳಯಮಾರುತಗಳು ಬೀಸಿ ಬಡಿದಾಗ ಬೆಟ್ಟಗಳೂ ಅಲ್ಲಾಡಿಹೋಗುತ್ತವೆ. ಆದರೆ ಎಂಥ ಕಷ್ಟದಲ್ಲಿಯೂ ಧೀರರ ನಿಶ್ಚಲವಾದ ಮನಸ್ಸು ಅಲ್ಲಾಡುವುದಿಲ್ಲ.‘

ADVERTISEMENT

ಈ ಸುಭಾಷಿತದ ಜೊತೆಗೆ ಮಂಕುತಿಮ್ಮನ ಕಗ್ಗದ ಪದ್ಯವೊಂದು ನೆನಪಾಗುತ್ತದೆ:

ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ।।
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।

ಕಷ್ಟಗಳು ಬಂದಾಗಲೇ ನಮ್ಮ ಶಕ್ತಿ ಎಷ್ಟು ಎಂದು ಗೊತ್ತಾಗುವುದು. ನಮಗೆ ಅನಾರೋಗ್ಯ ಬಂದಾಗ ಅದು ಎಷ್ಟು ತಡೆದುಕೊಳ್ಳಬಲ್ಲದು ಎನ್ನುವುದರಿಂದನಮ್ಮ ದೇಹದ ಶಕ್ತಿ ಗೊತ್ತಾಗುವುದು. ಈಗ ಕೋವಿಡ್‌ –19ರ ಸಂದರ್ಭದಲ್ಲಿ ಎಲ್ಲರೂ ಮಾತನಾಡುತ್ತಿರುವುದು ರೋಗನಿರೋಧಕಶಕ್ತಿಯ ಬಗ್ಗೆ. ರೋಗನಿರೋಧಶಕ್ತಿಯೊಂದೇ ಈ ಕಾಯಿಲೆಯನ್ನು ಗೆಲ್ಲಲು ಇರುವ ರಾಮಬಾಣ ಎಂದೆಲ್ಲ ಕೇಳುತ್ತಿರುತ್ತೇವೆ. ಇಂಥ ಶಕ್ತಿ ನಮ್ಮ ಜೀವನಕ್ಕೂ ಅನ್ವಯವಾಗುತ್ತದೆ. ಕಷ್ಟಗಳನ್ನು ಸ್ವೀಕರಿಸಿ, ಎದುರಿಸಿ, ಜಯಿಸುವ ಗುಣ.

ಬಿರುಗಾಳಿ ಬೀಸಿದಾಗ ಮರಗಳ ಶಕ್ತಿ ಎಷ್ಟೆಂದು ಗೊತ್ತಾಗಿಬಿಡುತ್ತದೆ. ಕೆಲವೊಂದು ಮರಗಳು ನೆಲಕ್ಕೆ ಉರುಳುತ್ತವೆ. ಬೇರು ಆಳದಲ್ಲಿರುವ, ಕಾಂಡಗಳನ್ನು ದಷ್ಟಪುಟ್ಟವಾಗಿಟ್ಟುಕೊಂಡಿರುವ ಮರಗಳು ಎಂಥ ಗಾಳಿಗೂ ಜಗ್ಗುವುದಿಲ್ಲ.

ಇಲ್ಲಿ ಸುಭಾಷಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಿದೆ. ಪ್ರಳಯಕಾಲದಲ್ಲಿ ಬೀಸುವ ಗಾಳಿಗೆ ಪರ್ವತಗಳೇ ಉರುಳಿಹೋಗುತ್ತವೆಯಂತೆ. ಆದರೆ ಧೀರರು, ಎಂದರೆ ಧೈರ್ಯವಂತರು ಮಾತ್ರ ಎಂಥ ಕಷ್ಟಪರಂಪರೆಯಲ್ಲೂ ಅಲುಗಾಡದೆ ಸ್ಥಿರವಾಗಿರುತ್ತಾರೆ.

ರಾಮ ಎಂಥ ಸಮಯದಲ್ಲೂ ಧೃತಿಗೆಡಲಿಲ್ಲ; ದ್ರೌಪದಿ ಕೂಡ ಎಷ್ಟೆಲ್ಲ ಕಷ್ಟಗಳೂ ಬಂದರೂ ಧೈರ್ಯವಾಗಿ ಎದುರಿಸಿದಳು. ಕುಂತಿಯೂ ಇದಕ್ಕೆ ಒಳ್ಳೆಯ ಉದಾಹರಣೆ.

ಜೀವನ ಎಂದಮೇಲೆ ಕಷ್ಟಗಳು ಬಂದೇ ಬರುತ್ತವೆ. ಅವನ್ನು ಧೈರ್ಯವಾಗಿ ಎದುರಿಸಲೇ ಬೇಕು. ನಾವು ಕಲಿತಿರುವ ವಿದ್ಯೆ, ನಮ್ಮ ಧೈರ್ಯ–ವಿವೇಕಗಳು ಎಷ್ಟು ಗಟ್ಟಿಯಾಗಿವೆ ಎಂದು ಗೊತ್ತಾಗುವುದೇ ಕಷ್ಟಗಳ ಸಮಯದಲ್ಲಿ.

ಜೀವಸಮರದಲಿ, ಎಂದರೆ ಜೀವನ ಎಂಬ ಯುದ್ಧದಲ್ಲಿ ನೀನೊಬ್ಬನೇ ನಿಲ್ಲತಕ್ಕದ್ದು ಎನ್ನುತ್ತಿದ್ದಾರೆ, ಡಿವಿಜಿ. ಕಷ್ಟಕಾಲದಲ್ಲಿ ಅವರು ನನ್ನ ಜೊತೆಯಲ್ಲಿ ಇಲ್ಲ, ಇವರು ನನ್ನ ಜೊತೆಯಲ್ಲಿ ಇಲ್ಲ – ಎಂದು ಬಯಸದೆ, ಕೊರಗದೆ ನೀನೊಬ್ಬನೇ ನಿನ್ನ ಯುದ್ಧವನ್ನು ಮಾಡು. ಇದೇ ಜೀವನಧರ್ಮಯೋಗ ಎಂದಿದ್ದಾರೆ, ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.