ADVERTISEMENT

ದಿನದ ಸೂಕ್ತಿ: ಒಳ್ಳೆಯತನಕ್ಕೆ ಎಂದಿಗೂ ಬೆಲೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಅಕ್ಟೋಬರ್ 2020, 1:37 IST
Last Updated 5 ಅಕ್ಟೋಬರ್ 2020, 1:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುಣೇಷು ಯತ್ನಃ ಪುರುಷೇಣ ಕಾರ್ಯೋ

ನ ಕಿಂಚಿದಪ್ರಾಪ್ಯತಮಂ ಗುಣಾನಾಮ್‌ ।

ಗುಣಪ್ರಕರ್ಷಾದುಡುಪೇನ ಶಂಭೋಃ

ADVERTISEMENT

ಅಲಂಘ್ಯಮುಲ್ಲಂಘಿತಮುತ್ತಮಾಂಗಮ್‌ ।।

ಇದರ ತಾತ್ಪರ್ಯ ಹೀಗೆ:

‘ಯಾರೇ ಆಗಲಿ ಹೆಚ್ಚು ಗುಣಗಳನ್ನು ಸಂಪಾದಿಸಬೇಕು; ಗುಣಗಳಿಂದ ಸಾಧ್ಯವಾಗದ ಕೆಲಸವಿಲ್ಲ. ಚಂದ್ರನು ತನ್ನ ಹೊಳಪು ಮೊದಲಾದ ಗುಣಗಳಿಂದ ಯಾರೂ ಮೀರಲಾಗದ ಈಶ್ವರನ ತಲೆಯನ್ನೇ ಹತ್ತಿ ಕುಳಿತನು.’

ಒಳ್ಳೆಯ ಗುಣಗಳಿಗೆ ದಕ್ಕುವ ಉನ್ನತಿಯನ್ನು ಕುರಿತು ಸುಭಾಷಿತ ಮಾತನಾಡುತ್ತಿದೆ.

ಒಳ್ಳೆಯತನಕ್ಕೆ ಎಂದಿಗೂ ಮಾನ್ಯತೆ ಇದ್ದೇ ಇರುತ್ತದೆ. ಅದು ಸದ್ಯಕ್ಕೆ ಫಲವನ್ನು ಕೊಡದಿರಬಹುದು; ಒಳ್ಳೆಯತನದಿಂದ ನಾವು ಸಾಕಷ್ಟು ತೊಂದರೆಯನ್ನೂ ಅನುಭವಿಸಬೇಕಾಗಿಬರಬಹುದು. ಆದರೆ ಖಂಡಿತವಾಗಿಯೂ ಅದಕ್ಕೆ ದೊರೆಯಬೇಕಾದ ಯೋಗ್ಯ ಮನ್ನಣೆ ದೊರೆಯುತ್ತದೆ.

ಇಲ್ಲಿ ಸುಭಾಷಿತವು ಚಂದ್ರನ ಉದಾಹಣೆಯನ್ನು ತೆಗೆದುಕೊಂಡಿದೆ. ಚಂದ್ರನಿಗೆ ಹಲವು ಗುಣಗಳಿವೆ. ಅವನು ತಂಪು, ಜೊತೆಗೆ ಅವನು ರಾತ್ರಿಯಲ್ಲಿ ಹೊಳೆಯುತ್ತಾನೆ. ಹೀಗೆ ಹಲವು ಗುಣಗಳನ್ನು ಅವನು ಮೈಗೂಡಿಸಿಕೊಂಡಿರುವುದರಿಂದ ಅವನಿಗೆ ಒಳ್ಳೆಯ ಪ್ರಶಸ್ತಿಯೂ ಸಿಕ್ಕಿದೆ; ಅವನ ಗುಣಗಳಿಗೆ ಮನಸೋತು ಸಾಕ್ಷಾತ್‌ ಶಿವನೇ ಅವನಿಗೆ ತನ್ನ ತಲೆಯ ಮೇಲೆ ಸ್ಥಾನವನ್ನು ಕೊಟ್ಟಿದ್ದಾನೆ; ಈ ಸ್ಥಾನದಿಂದ ಯಾರೂ ಅವನನ್ನು ಇಳಿಸಲು ಆಗುವುದೇ ಇಲ್ಲ.

ನಮಗೆ ಜೀವನದಲ್ಲಿ ಕೆಲವೊಮ್ಮೆ ಬೇಸರವಾಗುತ್ತದೆ; ಆಗ ಕುಗ್ಗುವುದೂ ಉಂಟು. ಒಳ್ಳೆಯತನಕ್ಕೆ ಬೆಲೆಯೇ ಇಲ್ಲ ಎಂದು ಕೊರಗುತ್ತೇವೆ. ಆದರೆ ಎಂಥ ಸಂದರ್ಭದಲ್ಲೂ ನಾವು ಒಳ್ಳೆಯ ಗುಣಗಳಿಂದ ವಿಮುಖರಾಗಬಾರದು ಎನ್ನುತ್ತಿದೆ ಸುಭಾಷಿತ.

ಹೌದು, ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ತುಂಬ ಕಷ್ಟ. ಆದರೆ ಕೆಟ್ಟತನಕ್ಕೆ ಆಕರ್ಷಣೆಯ ಬಲ ಹೆಚ್ಚು; ರುಚಿಯೂ ಹೆಚ್ಚು. ಆದರೆ ಕೆಟ್ಟ ಗುಣಗಳಿಂದ ಕೆಟ್ಟ ಪರಿಣಾಮಗಳೇ ಉಂಟಾಗುತ್ತವೆ. ದಿಟ, ಆರಂಭದಲ್ಲಿ ಕೆಟ್ಟಗುಣಗಳು ಅವು ನಮಗೆ ಒಳ್ಳೆಯದನ್ನೇ ಮಾಡುತ್ತಿದೆ ಎಂಬಂಥ ಭ್ರಾಂತಿಯನ್ನು ಉಂಟುಮಾಡುತ್ತವೆ. ನಾವು ಇಂಥ ಆಮಿಷಗಳನ್ನು ಗೆದ್ದು, ಒಳ್ಳೆಯ ಗುಣಗಳ ಕಡೆಗೇ ನಮ್ಮ ಮನಸ್ಸನ್ನು ಕೇಂದ್ರಿಕರಿಸಿಕೊಳ್ಳಬೇಕು. ನಿಧಾನವಾದರೂ ಒಳ್ಳೆಯ ಗುಣಗಳಿಗೆ ಸಿಗುವ ಸ್ಥಾನ ಶಾಶ್ವತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.