ADVERTISEMENT

ದಿನದ ಸೂಕ್ತಿ | ನಮ್ಮ ದಿಟವಾದ ಭೂಷಣ

ಎಸ್.ಸೂರ್ಯಪ್ರಕಾಶ ಪಂಡಿತ್
Published 24 ಜೂನ್ 2020, 5:46 IST
Last Updated 24 ಜೂನ್ 2020, 5:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನರಸ್ಯಾಭರಣಂ ರೂಪಂ ರೂಪಸ್ಯಾಭರಣಂ ಗುಣಃ।

ಗುಣಸ್ಯಾಭರಣಂ ಜ್ಞಾನಂ ಜ್ಞಾನಸ್ಯಾಭರಣಂ ಕ್ಷಮಾ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಮನುಷ್ಯನಿಗೆ ರೂಪವೇ ಭೂಷಣ; ರೂಪಕ್ಕೆ ಗುಣವೇ ಭೂಷಣ; ಗುಣಕ್ಕೆ ಜ್ಞಾನವೇ ಭೂಷಣ; ಜ್ಞಾನಕ್ಕೆ ಕ್ಷಮೆಯೇ ಭೂಷಣ.

ನಮ್ಮ ಕಾಲದ ವಿದ್ಯಮಾನವೊಂದನ್ನು ಉದಾಹರಣೆಯಾಗಿ ತೆಗೆದುಕೊಂಡು ಈ ಸುಭಾಷಿತದ ಸ್ವಾರಸ್ಯವನ್ನು ಸವಿಯೋಣ.

ನಮ್ಮ ಫೇಸ್‌ಬುಕ್‌ ಅಕೌಂಟಿನಲ್ಲಿ ವಿಹರಿಸುತ್ತಿದ್ದೇವೆ; ಹೀಗೆ ಸುತ್ತುತ್ತಿರಬೇಕಾದರೆ ಇದ್ದಕ್ಕಿದ್ದಂತೆ ನಮ್ಮ ಬೆರಳು ಒಂದು ವಾಲ್‌ ಬಳಿ ನಿಲ್ಲುತ್ತದೆ; ‘ಡಿಪಿ‘ಯನ್ನು ನೋಡುತ್ತೇವೆ; ’ಎಷ್ಟೊಂದು ಚೆನ್ನಾಗಿದ್ದಾನೆ/ಳೆ‘ ಎಂದೆನಿಸುತ್ತದೆ. ಅವನನ್ನು/ಅವಳನ್ನು ಫ್ರೆಂಡ್‌ ಮಾಡಿಕೊಳ್ಳೋಣ – ಎಂದು ಮನಸ್ಸು ಬಯಸುತ್ತದೆ. ಫ್ರೆಂಡ್‌ ರಿಕ್ವೆಸ್ಟನ್ನು ಕಳುಹಿಸುತ್ತೇವೆ. ಅವನಿಗೆ/ಅವಳಿಗೆ ನಮ್ಮ ಫೋಟೋ ನೋಡಿ ’ಅಯ್ಯೋ‘ ಎನಿಸಿಯೋ, ’ಅಹಾ‘ ಎನಿಸಿಯೋ, ಅಂತೂ ನಮ್ಮ ’ಕೋರಿಕೆ‘ಗೆ ಒಪ್ಪಿಗೆ ಸಿಗುತ್ತದೆ. ಈಗ ನಾವು ಮತ್ತು ಆ ಸುಂದರ/ಸುಂದರಿ ’ಫ್ರೆಂಡ್ಸ್‌‘!

ಇಬ್ಬರ ನಡುವೆ ಒಂದಷ್ಟು ದಿನ ಮೆಸೆಜ್‌–ಫೋಟೊಗಳು ವಿನಿಮಯವಾಗುತ್ತವೆ; ಲಾಲ್‌ಬಾಗ್‌, ಕಬ್ಬನ್ ಪಾರ್ಕ್‌ ಫೋಟೋಗಳು; ಫ್ಯಾಷನ್‌ ಶೋಗೆ ಮೀಸಲಾಗಿರುವಂಥವು. ಯಾವುದೋ ಒಂದು ಸಂದರ್ಭದಲ್ಲಿ ಆ ಕಡೆಯಿಂದ ಕುಹಕದ ಮಾತೊಂದು ಸ್ಫೋಟವಾಯಿತು – ಎಂದಿಟ್ಟುಕೊಳ್ಳಿ. ’ಬರಿ ನೋಡಲು ಚೆನ್ನಾಗಿದ್ದರೆ ಸಾಕೆ? ಒಂದಷ್ಟು ಒಳ್ಳೆಯ ಬುದ್ಧಿ ಬೇಡ್ವಾ?‘ ಎಂದು ಆಗ ಗೊಣಗಿಕೊಳ್ಳುತ್ತೇವೆ.

ಸರಿ, ರೂಪದ ಜೊತೆಗೆ ಗುಣವೂ ಇದೆ ಎಂದುಕೊಳ್ಳೋಣ. ’ಅವರನ್ನು ನೋಡಿದರೆ ಪಾಪ ಎನಿಸುತ್ತೆ, ಇವರನ್ನು ನೋಡಿದರೆ ಪಾಪ ಎನಿಸುತ್ತೆ‘ – ಹೀಗೆಲ್ಲ ಪರೋಪಕಾರದ ಮಾತುಗಳ ವಿನಿಮಯ ನಡೆಯುತ್ತದೆ. ಒಂದಷ್ಟು ದಿನಗಳು ಆದಮೇಲೆ ’ಅರೆ! ಇದೇನೂ ಸ್ವಲ್ಪವೂ ಬುದ್ಧಿಯನ್ನು ಉಪಯೋಗಿಸದೆ, ಅವರು ಒಳ್ಳೆಯವರು, ಇವರು ಒಳ್ಳೆಯವರು – ಎಂದೆಲ್ಲ ಲೆಕ್ಚರ್‌ ಕೋಡ್ತಾನೆ/ಳೆ ಇವನು/ಳು!‘ ಎಂದು ವಿಮರ್ಶೆ ನಮ್ಮಲ್ಲಿ ಎಚ್ಚರವಾಗುತ್ತದೆ.

’ಅಬ್ಬಾ! ಎಂಥ ಜಡ್ಜ್‌ಮೆಂಟ್‌ ಇವನದ್ದು/ಇವಳದ್ದು! ಅದ್ಭುತ ತರ್ಕ!! ಒಂದು ವಿಷಯವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾನೆ/ಳೆ! ನಿಜಕ್ಕೂ ಬುದ್ಧಿವಂತ/ಳು‘ ಹೀಗೆಲ್ಲ ಪ್ರಶಂಸೆ ಮಾಡುವಂಥ ಬುದ್ಧಿಶಕ್ತಿಯೂ ನಮ್ಮ ಸ್ನೇಹಿತರಲ್ಲಿ ಇದ್ದಿತೆಂದು ಇಟ್ಟುಕೊಳ್ಳೋಣ. ಒಂದಷ್ಟು ದಿನ ಅವರ ವಿಚಾರಪೂರ್ಣ ಸ್ಟೇಟಸ್‌ಗಳನ್ನು ಶೇರ್‌ ಮಾಡಿದ್ದೇ ಮಾಡಿದ್ದು. ’ಎಂಥ ಬುದ್ಧಿವಂಥನ/ಳ ಸ್ನೇಹಭಾಗ್ಯ ಸಿಕ್ಕಿತು‘ ಎಂದು ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು!

ಒಂದು ದಿನ ಇಬ್ಬರೂ ಹೊಟೇಲ್‌ನಲ್ಲಿ ಭೇಟಿಯಾಗಿ ಮಸಾಲೆದೋಸೆಯನ್ನು ತಿಂದು, ಸಿನಿಮಾಗೆ ಹೋಗುವುದು ಎಂದು ತಿರ್ಮಾನಿಸಿಕೊಂಡಿರುತ್ತೇವೆ. ಆದರೆ ನಮಗೆ ಮನೆಯಲ್ಲಿ ಏನೋ ಆಕಸ್ಮಿಕ ಸಮಸ್ಯೆಯೊಂದು ಎದುರಾಯಿತು; ಹೊಟೇಲ್‌ಗೆ ಹೋಗಲು ಆಗಲಿಲ್ಲ. ಆದರೆ ನಮ್ಮ ಸ್ನೇಹಿತ/ತೆ ಅಲ್ಲಿ ಕಾದು ಕಾದು ಕೊನೆಗೆ ಮನೆಗೆ ವಾಪಸ್‌. ಸರಿ, ನಡೆದ ವಿಷಯವನ್ನು ತಿಳಿಸೋಣ ಎಂದು ನಾವು ಅವನಿಗೆ/ಅವಳಿಗೆ ಫೋನ್‌ ಮಾಡುತ್ತೇವೆ; ಫೋನ್‌ ರಿಸೀವ್‌ ಮಾಡುತ್ತಿಲ್ಲ. ಮೆಸೆಜ್‌ ಕಳುಹಿಸೋಣ – ಎಂದು ಫೇಸ್‌ಬುಕ್‌ಗೆ ಹೋದರೆ ಅವನು/ಅವಳು ನಮ್ಮನ್ನು ’ಬ್ಲಾಕ್‌‘ ಮಾಡಿಯಾಗಿದೆ! ’ಅಯ್ಯೋರೆ ಕರ್ಮ! ಸುಮ್ನೆ ಬೊಂಬೆ ತರಹ ಇದ್ದು, ನಾಲ್ಕು ಅಕ್ಷರ ಗೊತ್ತಿದ್ದರಷ್ಟೆ ಸಾಕ? ಏನಾಯಿತು, ಏನು – ಅಂತ ತಿಳಿದುಕೊಳ್ಳುವಷ್ಟು ತಾಳ್ಮೆ, ಸಹನೆ ಬೇಡವಾ? ಏನು ಯಾವತ್ತೂ ಇವನು/ಇವಳು ಎಂದೂ ತಪ್ಪೇ ಮಾಡಿಲ್ವಾ? ಸ್ವಲ್ಪವಾದರೂ ಬೇರೆಯವರ ತಪ್ಪನ್ನು ಅರ್ಥಮಾಡಿಕೊಂಡು ಕ್ಷಮಿಸೋ ಗುಣ ಬೇಡವಾ? ಒಂದು ಸಣ್ಣ ತಪ್ಪಿಗೆ ಇಷ್ಟು ಕೋಪ ಮಾಡಿಕೊಳ್ಳೋದಾ? ಇಂಥವರ ಸಹವಾಸವೇ ಸಾಕಪ್ಪ! ಹುಚ್ಚರು!!‘ ಎಂದು ನಮಗೆ ಅನಿಸುತ್ತದೆ, ಅಲ್ಲವೆ?

ಮನುಷ್ಯರ ನಡುವೆ ಪರಸ್ಪರ ಸ್ನೇಹ ಹೇಗೆ ಹುಟ್ಟುತ್ತದೆ ಹಾಗೂ ಆ ಸ್ನೇಹ ಹೇಗೆ ದೂರವೂ ಆದೀತು – ಎಂಬುದರ ಸುಳಿವನ್ನು ಈ ಸುಭಾಷಿತ ನೀಡುತ್ತಿದೆ. ಜೊತೆಗೆ ಮನುಷ್ಯತ್ವದ ದಿಟವಾದ ಸತ್ತ್ವ ಯಾವುದು – ಎಂಬುದರ ಹುಡುಕಾಟವನ್ನೂ ಮಾಡುವಂತಿದೆ.

ಮೊದಲು ನಾವು ಯಾರನ್ನಾದರೂ ಕಣ್ಣಿನಿಂದ ನೋಡುತ್ತೇವೆ; ಎಂದರೆ ಅವರ ರೂಪ ಮೊದಲಿಗೆ ನಮ್ಮ ಗಮನವನ್ನು ಸೆಳೆಯುತ್ತದೆ; ರೂಪವಂತರ ಸಾಮೀಪ್ಯವನ್ನು ಮನಸ್ಸು ಸಹಜವಾಗಿಯೇ ಹಂಬಲಿಸುತ್ತದೆ. ಆ ವ್ಯಕ್ತಿ ನಮಗೆ ಹತ್ತಿರವಾದಮೇಲೆ ರೂಪದ ಕಡೆಗೆ ಅಷ್ಟಾಗಿ ಗಮನ ಹೋಗದು; ಏಕೆಂದರೆ ಈಗ ಹೊರಗಿನ ಇಂದ್ರಿಯವಾದ ಕಣ್ಣಿಗಿಂತಲೂ ಒಳಗಿನ ಇಂದ್ರಿಯವಾದ ಮನಸ್ಸಿಗೆ ಆ ಸ್ನೇಹದ ಬೇರುಗಳು ಇಳಿದಿರುತ್ತವೆ. ಹೀಗಾಗಿ ಈ ಹಂತದಲ್ಲಿ ನಾವು ಒಳ್ಳೆಯ ಗುಣಗಳನ್ನು ಆ ಸ್ನೇಹದಿಂದ ನಿರೀಕ್ಷಿಸುತ್ತೇವೆ. ಮುಂದಿನ ಹಂತದಲ್ಲಿ ನಮ್ಮ ಮನಸ್ಸನ್ನು ಬುದ್ಧಿಯ ಕೈ ಹಿಡಿಯುತ್ತದೆ. ಒಳ್ಳೆಯತನ ಎಂದರೆ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಲ್ಲವಷ್ಟೆ ಎಂಬ ಎಚ್ಚರ ಮೂಡುತ್ತದೆ. ಆದುದರಿಂದ ಗುಣಗಳ ಜೊತೆಗೆ ಬುದ್ಧಿಯೂ ಇರಬೇಕು ಎಂದು ಆಶಿಸುತ್ತೇವೆ. ಮುಂದಿನ ಹಂತ, ಹೃದಯಸ್ಪಂದನೆ. ಬುದ್ಧಿಯ ನಿಶ್ಚಲತೆಯ ಜೊತೆಗೆ ಅಂತರಂಗದ ಆರ್ದ್ರತೆಯೂ ಬೇಕು. ಇಲ್ಲವಾದಲ್ಲಿ ಮಾನವತೆಯ ಬೀಜ ಅಂಕುರಿಸದು. ಅಂತರಂಗದ ಆರ್ದ್ರತೆ ಎಂದರೆ ಭಾವ–ಬುದ್ಧಿಗಳ ವೈಶಾಲ್ಯ. ಬುದ್ಧಿಯು ತಪ್ಪು ಎಂದು ಗುರುತಿಸಿದ ವಿದ್ಯಮಾನದ ಮೂಲಕಾರಣವನ್ನು ಗ್ರಹಿಸಿ, ತಪ್ಪಿಗೆ ಶಿಕ್ಷೆಯಾಗಿ ಕೊಡಬೇಕಾಗಿರುವ ಬೇವಿನ ಗುಳಿಗೆಯನ್ನು ಜೇನಿನಲ್ಲಿ ಅದ್ದಿ ಕೊಡಲು ಉದ್ಯುಕ್ತವಾಗುವ ಆತ್ಮವಿಸ್ತರಣದ ಒಂದಾನೊಂದು ಎಳೆಯೇ ಕ್ಷಮಾಶೀಲಗುಣ.

ನಮ್ಮ ವ್ಯಕ್ತಿತ್ವದ ದಿಟವಾದ ರೂಪ ಯಾವುದು – ಎಂಬುದನ್ನು ಹುಡುಕಿ ಎಂದು ಸುಭಾಷಿತ ಇಲ್ಲಿ ಆಶಿಸುತ್ತಿರುವುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.