ADVERTISEMENT

ದಿನದ ಸೂಕ್ತಿ: ಕಸ್ತೂರಿಯ ಪರಿಮಳ

ಎಸ್.ಸೂರ್ಯಪ್ರಕಾಶ ಪಂಡಿತ್
Published 13 ಸೆಪ್ಟೆಂಬರ್ 2021, 3:21 IST
Last Updated 13 ಸೆಪ್ಟೆಂಬರ್ 2021, 3:21 IST
ಪರಿಮಳ
ಪರಿಮಳ   

ಯದಿ ಸಂತಿ ಗುಣಾಃ ಪುಂಸಾಃ ವಿಕಸಂತ್ಯೇವ ತೇ ಸ್ವಯಮ್‌ ।

ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಮನುಷ್ಯನಿಗೆ ಗುಣವಿದ್ದರೆ ಅದು ತಾನಾಗಿಯೇ ಬೆಳಕಿಗೆ ಬರುತ್ತದೆ. ಇದು ಹೇಗೆಂದರೆ, ನಮ್ಮ ಬಳಿ ಕಸ್ತೂರಿ ಇದ್ದರೆ ಅದರ ಪರಿಮಳ ತಾನಾಗಿಯೇ ಹರಡುತ್ತದೆ; ಹೀಗಲ್ಲದೆ ಇರದ ಕಸ್ತೂರಿಯನ್ನು ಇದೆ ಎಂದು ನಾವು ಶಪಥ ಮಾಡಿದ ಮಾತ್ರಕ್ಕೆ ಪರಿಮಳ ಬರುವುದಿಲ್ಲ.’

ಇಂದು ನಮ್ಮ ಬಗ್ಗೆ ನಾವೇ ಏನೇನೂ ಸರ್ಟಿಫಿಕೇಟ್‌ಗಳನ್ನು ಕೊಟ್ಟುಕೊಳ್ಳುತ್ತಿರುತ್ತೇವೆ. ನಾನು ಒಳ್ಳೆಯವನು, ನಾನು ಪರೋಪಕಾರಿ, ನಾನು ರಾಷ್ಟ್ರಭಕ್ತ, ನಾನು ಧರ್ಮಾತ್ಮ, ನಾನು ಬುದ್ಧಿವಂತ, ನಾನು ಸಭ್ಯ, ನಾನು ಕವಿ, ನಾನು ಸಹೃದಯ – ಹೀಗೆ ಏನೇನೋ ಗುಣಗಳನ್ನು ನಮ್ಮ ಮೇಲೆ ನಾವೇ ಆರೋಪಿಸಿಕೊಳ್ಳುತ್ತಿರುತ್ತೇವೆ. ಸುಭಾಷಿತ ಕೇಳುತ್ತಿದೆ, ನಿಜವಾಗಿಯೂ ನೀವು ಇಷ್ಟೆಲ್ಲ ಗುಣವಂತರಾಗಿದ್ದರೆ ಅದನ್ನು ನೀವಾಗಿಯೇ ಒತ್ತಿ ಒತ್ತಿ ಹೇಳಬೇಕಿಲ್ಲ; ಅವು ಸಹಜವಾಗಿ ಯಾವಾಗ ಪ್ರಕಟವಾಗಬೇಕು ಆಗ ಪ್ರಕಟವಾಗುತ್ತವೆ; ಆ ಮೂಲಕ ಜನರ ಗಮನಕ್ಕೂ ಬರುತ್ತವೆ. ಹೀಗಲ್ಲದೆ, ನಿಮ್ಮಲ್ಲಿರದ ಗುಣಗಳ ಬಗ್ಗೆ ನೀವು ಎಷ್ಟೋ ದೊಡ್ಡ ದನಿಯಲ್ಲಿ ಪ್ರಚಾರ ಮಾಡಿದರೂ ಆ ಗುಣಗಳು ನಿಮ್ಮಲ್ಲಿ ಬಂದು ಸೇರುವುದೂ ಇಲ್ಲ, ಜನರೂ ನಿಮ್ಮಲ್ಲಿ ಆ ಗುಣಗಳು ಇವೆ ಎಂದು ನಂಬುವುದಿಲ್ಲ.

ಸುಭಾಷಿತ ಇದನ್ನು ಒಂದು ಉದಾಹರಣೆಯ ಮೂಲಕ ಹೇಳುತ್ತಿದೆ.

ನಮ್ಮ ಬಳಿ ಕಸ್ತೂರಿ ಇದೆ ಎಂದಿಟ್ಟುಕೊಳ್ಳಿ. ಆಗ ನಮ್ಮಲ್ಲಿ ಕಸ್ತೂರಿ ಇದೆ ಎಂದು ನಾವು ಪ್ರತ್ಯೇಕವಾಗಿ ಘೋಷಣೆ ಮಾಡಬೇಕಿಲ್ಲ. ಸಹಜವಾಗಿಯೇ ಕಸ್ತೂರಿಯ ಪರಿಮಳ ಎಲ್ಲ ದಿಕ್ಕುಗಳಿಗೂ ಹರಡುತ್ತದೆ. ನೀವು ಮುಚ್ಚಿಟ್ಟುಕೊಳ್ಳಬೇಕೆಂದು ಪ್ರಯತ್ನಿಸಿದರೂ ಪರಿಮಳವನ್ನು ಮುಚ್ಚಿಡಲು ಸಾಧ್ಯವಾಗದಷ್ಟೆ. ಹೀಗೆಯೇ ನಮ್ಮಲ್ಲಿ ಒಳ್ಳೆಯ ಗುಣಗಳು ಇದ್ದರೆ ನಾವೇನೂ ಅವನ್ನು ಘೋಷಿಸಿಕೊಳ್ಳಬೇಕಾಗಿಲ್ಲ; ಸಹಜವಾಗಿಯೇ ಅವು ಪ್ರಕಟವಾಗುತ್ತವೆ. ನಮ್ಮಲ್ಲಿ ಇಲ್ಲದ ಗುಣಗಳ ಬಗ್ಗೆ ನಾವು ಆಣೆ, ಪ್ರಮಾಣ, ಶಪಥ ಮಾಡಿ ಹೇಳಿದರೂ ಜನರು ನಂಬುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.