ADVERTISEMENT

ದಿನದ ಸೂಕ್ತಿ: ನಮ್ಮನ್ನು ನಮ್ಮಿಂದಲೇ ಕಾಪಾಡಿಕೊಳ್ಳಬೇಕು

ಎಸ್.ಸೂರ್ಯಪ್ರಕಾಶ ಪಂಡಿತ್
Published 29 ಸೆಪ್ಟೆಂಬರ್ 2021, 5:10 IST
Last Updated 29 ಸೆಪ್ಟೆಂಬರ್ 2021, 5:10 IST
ಸಾಧನೆ
ಸಾಧನೆ   

ನಿತ್ಯಂ ಕ್ರೋಧಾತ್ತಪೋ ರಕ್ಷೇತ್‌ ಧರ್ಮಂ ರಕ್ಷೇಚ್ಚ ಮತ್ಸರಾತ್‌ ।

ವಿದ್ಯಾಂ ಮಾನಾಪಮಾನಾಭ್ಯಾತ್ಮಾನಂ ತು ಪ್ರಮಾದತಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕ್ರೋಧ ಉಂಟಾಗದಂತೆ ತಪಸ್ಸನ್ನೂ, ಹೊಟ್ಟೆಕಿಚ್ಚಿನಿಂದ ಧರ್ಮವನ್ನೂ ರಕ್ಷಿಸಿಕೊಳ್ಳಬೇಕು. ಮಾನ–ಅಪಮಾನಗಳಿಗೆ ಜಗ್ಗದೆ ವಿದ್ಯೆಯನ್ನು ಸಂಗ್ರಹಿಸಿ ಉಳಿಸಿಕೊಳ್ಳಬೇಕು. ತಪ್ಪು ದಾರಿಯನ್ನು ತುಳಿಯದಂತೆ ತನ್ನ ಆತ್ಮವನ್ನು ಕಾಪಾಡಿಕೊಳ್ಳಬೇಕು.’

ಈ ಸುಭಾಷಿತ ಸರಳವಾಗಿಯೇ ಅರ್ಥವಾಗುವಂತಿದೆ.

ಪ್ರತಿ ಕೆಲಸದ ಹಿಂದೆಯೂ ಅದರ ಗುರಿಯೊಂದು ಇದ್ದೇ ಇರುತ್ತದೆ. ಗುರಿಯನ್ನು ಮರೆತು ಮಾಡಿದ ಕೆಲಸ ಸಫಲವಾಗದು ಎಂದು ಸುಭಾಷಿತ ಸೂಚಿಸುತ್ತಿದೆ.

ತಪಸ್ಸಿನ ಮೊದಲ ಹಂತವೇ ಕೋಪವನ್ನು ಕಳೆದುಕೊಳ್ಳುವುದು. ಹೀಗಾಗಿ ಕ್ರೋಧದಿಂದ ತಪಸ್ಸನ್ನು ಕಾಪಾಡಿಕೊಳ್ಳಬೇಕು. ಧರ್ಮ ಎಂದರೆ ಎಲ್ಲರನ್ನೂ ಸಮಾನವಾಗಿ ಕಾಣುವಂಥ ಮನೋಧರ್ಮ. ಎಲ್ಲರನ್ನೂ ಸಮಾನವಾಗಿ ಕಂಡಾಗ ಯಾರ ಬಗ್ಗೆಯಾದರೂ ಹೊಟ್ಟೆಕಿಚ್ಚು ಹೇಗೆ ಕಾಣಿಸಿಕೊಂಡೀತು? ವಿದ್ಯೆಯನ್ನು ಸಂಪಾದಿಸಬೇಕಾದರೆ ಮಾನ–ಅಪಮಾನಗಳನ್ನು ಬಿಡಬೇಕು ಎಂದು ಸುಭಾಷಿತ ಹೇಳುತ್ತಿದೆ. ಕಲಿಕೆಯ ಮೊದಲ ಹೆಜ್ಜೆಯೇ ‘ನನಗೆ ಗೊತ್ತಿಲ್ಲ‘ ಎಂಬುದರಿಂದ ಆರಂಭವಾಗಬೇಕು. ಹೀಗೆ ಹೇಳಲು ನಮ್ಮ ಅಹಂಕಾರ ಅಡ್ಡಬರಬಾರದು. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಆತ್ಮ ಎಂದರೆ ನಮ್ಮ ಶ್ರೇಯಸ್ಸಿನ ಸಂಕೇತ. ಅದನ್ನು ಉಳಿಸಿಕೊಳ್ಳುವ ದಾರಿ ಎಂದರೆ ನಾವು ತಪ್ಪು ದಾರಿಯಲ್ಲಿ ಹೆಜ್ಜೆ ಹಾಕದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.