ADVERTISEMENT

ದಿನದ ಸೂಕ್ತಿ: ಜೀವನದಲ್ಲಿ ನಿಜವಾದ ಸ್ನೇಹದ ಲಕ್ಷಣ

ಎಸ್.ಸೂರ್ಯಪ್ರಕಾಶ ಪಂಡಿತ್
Published 21 ಸೆಪ್ಟೆಂಬರ್ 2021, 7:46 IST
Last Updated 21 ಸೆಪ್ಟೆಂಬರ್ 2021, 7:46 IST
ಸ್ನೇಹ
ಸ್ನೇಹ   

ವ್ಯಸನೇ ಕ್ಲಿಶ್ಯಮಾನಂ ಹಿ ಯೋ ಮಿತ್ರಂ ನಾಭಿಪದ್ಯತೇ ।

ಅನುನೀಯ ಯಥಾಶಕ್ತಿಂ ತಂ ನೃಶಂಸಂ ವಿದುರ್ಬುಧಾಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕಷ್ಟದಲ್ಲಿ ಸಿಕ್ಕಿಬಿದ್ದಿರುವ ಮಿತ್ರನಿಗೆ ಸಮಾಧಾನವನ್ನು ಹೇಳಿ, ಅವನಿಗೆ ಯಥಾಶಕ್ತಿ ಸಹಾಯವನ್ನು ನೀಡಬೇಕು. ಹೀಗೆ ಯಾರು ಮಾಡುವುದಿಲ್ಲವೋ ಅಂಥವನನ್ನು ಕ್ರೂರಿ ಎಂದು ವಿದ್ವಾಂಸರು ತಿಳಿಯುತ್ತಾರೆ.’

ನಿಜವಾದ ಸ್ನೇಹದ ಲಕ್ಷಣವನ್ನು ಈ ಸುಭಾಷಿತ ನಿರೂಪಿಸುತ್ತಿದೆ; ಮಹಾಭಾರತದಲ್ಲಿ ಬರುವ ಮಾತು ಇದು.

ಸ್ನೇಹದ ಮುಖ್ಯವಾದ ಗುಣಗಳಲ್ಲಿ ಒಂದು ಕಷ್ಟದಲ್ಲಿದ್ದಾಗ ಸ್ನೇಹಿತನನ್ನು ಕಾಪಾಡುವುದು. ಸ್ನೇಹ ಎಂಬುದು ಅವಕಾಶವಾದವಲ್ಲ, ಅದೊಂದು ಹೊಣೆಗಾರಿಕೆ.

ನಮ್ಮ ಸ್ನೇಹಿತ ಕಷ್ಟದಲ್ಲಿದ್ದಾಗ ಅವನು ನಮ್ಮಲ್ಲಿ ಅದರ ಬಗ್ಗೆ ಹೇಳದೆಯೂ ಇರಬಹುದು. ಆದರೆ ನಾವು ನಿಜವಾದ ಸ್ನೇಹಿತರೇ ಆಗಿದ್ದರೆ ನಮ್ಮ ಸ್ನೇಹಿತ ಕಷ್ಟದಲ್ಲಿದ್ದಾಗ ನಮಗೆ ಆ ಕೂಡಲೇ ಗೊತ್ತಾಗಬೇಕು; ಅವನೇ ಬಾಯಿಬಿಟ್ಟು ಹೇಳಬೇಕಿಲ್ಲ. ಆದರ್ಶ ಸ್ನೇಹದಲ್ಲಿ ಇಂಥ ಪರೇಂಗಿತಪರಿಗ್ರಹಣ ಸಹಜವಾಗಿರುತ್ತದೆ.

ಕುಟುಂಬದವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದ ಸಂಗತಿಗಳನ್ನೂ ಸ್ನೇಹಿತ ಇನ್ನೊಬ್ಬ ಸ್ನೇಹಿತನಲ್ಲಿ ಹಂಚಿಕೊಳ್ಳುವುದುಂಟು. ಸ್ನೇಹದ ಬಗ್ಗೆ ಇರುವ ವಿಶ್ವಾಸಕ್ಕೆ ಇದು ಸಾಕ್ಷ್ಯ. ಹೀಗಿರುವಾಗ ನಮ್ಮ ಸ್ನೇಹಿತ ಕಷ್ಟದಲ್ಲಿರುವಾಗ ಅದಕ್ಕೆ ಸ್ಪಂದಿಸುವುದು ಸ್ನೇಹಧರ್ಮದ ಕರ್ತವ್ಯ. ಕಷ್ಟದಲ್ಲಿರುವ ಸ್ನೇಹಿತನಿಗೆ ಮೊದಲಿಗೆ ಧೈರ್ಯ ಹೇಳಬೇಕು; ಸಾಂತ್ವನವನ್ನು ನೀಡಬೇಕು. ಬಳಿಕ ನಮ್ಮ ಕೈಲಾದ ಸಹಾಯವನ್ನು ಅವನಿಗೆ ಒದಗಿಸಬೇಕು.

ಸ್ನೇಹಿತನ ಕಷ್ಟಕ್ಕೆ ಸ್ಪಂದಿಸದ, ಅವನಿಗೆ ಸಹಾಯವನ್ನು ನೀಡದ ‘ಸ್ನೇಹಿತ’ ಎಂಬ ವ್ಯಕ್ತಿಯನ್ನು ಸುಭಾಷಿತ ಕ್ರೂರಿ ಎಂದು ಘೋಷಿಸಿದೆ. ಮುಳುಗುತ್ತಿರುವ ವ್ಯಕ್ತಿಯೊಬ್ಬನನ್ನು ಕಾಪಾಡುವುದು ಮನುಷ್ಯಧರ್ಮ. ಹೀಗಿರುವಾಗ ಸ್ನೇಹದ ಲಕ್ಷಣವೇ ಹೊಣೆಗಾರಿಕೆ, ಪ್ರೀತಿ, ಕಾಳಜಿಗಳು ಆಗಿರುವಾಗ, ಸ್ನೇಹಿತನ ನೆರವಾಗಿ ಧಾವಿಸದ ಸ್ನೇಹಕ್ಕೆ ಅರ್ಥವಾದರೂ ಹೇಗೆ ಉಳಿದೀತು?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.