ADVERTISEMENT

ಬ್ರಹ್ಮನಿಗಿಂತಲೂ ಮಿಗಿಲು ಕವಿಬ್ರಹ್ಮ!

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಜುಲೈ 2018, 10:55 IST
Last Updated 31 ಜುಲೈ 2018, 10:55 IST
ಬ್ರಹ್ಮನಿಗಿಂತಲೂ ಮಿಗಿಲು ಕವಿಬ್ರಹ್ಮ!
ಬ್ರಹ್ಮನಿಗಿಂತಲೂ ಮಿಗಿಲು ಕವಿಬ್ರಹ್ಮ!   

ಕವಿಸಮಯ ಎಂದರೇನು?

‘ಯಾವುದು ಶಾಸ್ತ್ರಸಿದ್ಧವಲ್ಲದಿದ್ದರೂ, ಲೋಕಸಿದ್ಧವಲ್ಲದಿದ್ದರೂ, ಪರಂಪರೆಯ ಮೂಲಕ ಕವಿಗಳಿಂದ ಪ್ರಯುಕ್ತವಾಗುತ್ತಿರುವುದೋ ಅದೇ ‘ಕವಿಸಮಯ’ (ಅಶಾಸ್ತ್ರೀಯಮಲೌಕಿಕಂ ಚ ಪರಂಪರಾಯಾತಂ ಯಮರ್ಥಮುಪನಿಬಂಧಂತಿ ಕವಯಃ ಸ ಕವಿಸಮಯಃ). ಕವಿಸಮಯದ ಈ ಲಕ್ಷಣವನ್ನು ಕಾವ್ಯಮೀಮಾಂಸಕನಾದ ರಾಜಶೇಖರನು ಅವನ ‘ಕಾವ್ಯಮೀಮಾಂಸಾ’ ಕೃತಿಯಲ್ಲಿ ಹೇಳಿದ್ದಾನೆ. ಇಲ್ಲಿ ಗಮನಿಸಬೇಕಾದದ್ದು ‘ಶಾಸ್ತ್ರಸಿದ್ಧವಲ್ಲದ್ದು’ ಮತ್ತು ‘ಲೋಕಸಿದ್ಧವಲ್ಲದ್ದು’ ಎನ್ನುವುದನ್ನು. ಲೋಕದಲ್ಲಾಗಲೀ ಶಾಸ್ತ್ರದಲ್ಲಾಗಲೀ ಇಲ್ಲದಿರುವುದು ‘ಕವಿಸಮಯ’ದಲ್ಲಿ ಇರುವುದು ಎಂದಾಯಿತಲ್ಲವೆ? ಎಂದರೆ ಲೋಕವನ್ನು ಸೃಷ್ಟಿಸಿದ ಬ್ರಹ್ಮನ ಕಲ್ಪನೆಯನ್ನೂ ಮೀರಿದ್ದು ಕವಿಯ ಪ್ರತಿಭೆ ಎನ್ನುವುದು ತಾನೇ ತಾನಾಗಿ ಸಿದ್ಧವಾಗುತ್ತದೆ. ಈ ನಿಲುವನ್ನು ಸಮರ್ಥಿಸುವಂಥ ಮಾತು ಮಮ್ಮಟನ ‘ಕಾವ್ಯಪ್ರಕಾಶ’ದಲ್ಲಿ ಸೊಗಸಾಗಿ ಹರಳುಗಟ್ಟಿದೆ:

ನಿಯತಿಕೃತನಿಯಮರಹಿತಾಂ

ADVERTISEMENT

ಹ್ಲಾದೈಕಮಯೀಮನನ್ಯಪರತಂತ್ರಾಂ |

ನವರಸರುಚಿರಾಂ ನಿರ್ಮಿತಿ–

ಮಾದಧತೀ ಭಾರತೀ ಕವೇರ್ಜಯತಿ ||

(ತವೆ ವಿಧಿನಿಯಮವಿದೂರಂ

ಬುವಿಯೊಳ್‌ ಸುಖಮಾತ್ರರೂಪಮಪರಾಧೀನಂ |

ನವರಸರುಚಿರಂ ತಾನೆನೆ

ನವಸೃಷ್ಟಿಯನೀವ ಕವಿಯ ವಾಣಿಯೆ ಗೆಲ್ವಳ್‌ ||

(ಅನುವಾದ: ಡಾ. ಕೆ. ಕೃಷ್ಣಮೂರ್ತಿ)

ಇದು ‘ಕಾರಿಕೆ’. ಇದರ ‘ವೃತ್ತಿ’ಯನ್ನು ಕೂಡ ಇಲ್ಲಿ ನೋಡಬಹುದು (‘ಕಾರಿಕೆ’ ಮತ್ತು ‘ವೃತ್ತಿ’ – ಇವೆರಡು ಪದಗಳು ಶಾಸ್ತ್ರಸಾಹಿತ್ಯದ ಪಾರಿಭಾಷಿಕ ಪದಗಳು. ‘ಕಾರಿಕೆ’ ಎಂದರೆ ಪದ್ಯರೂಪದಲ್ಲಿರುವ ಸೂತ್ರ ಎಂದೂ ‘ವೃತ್ತಿ’ ಎಂದರೆ ಅದರ ವಿವರಣೆ ಎಂದೂ ಸರಳವಾಗಿ ಹೇಳಬಹುದು):

‘ಬ್ರಹ್ಮನ ನಿರ್ಮಿತಿ ಅಥವಾ ಸೃಷ್ಟಿ ‘ನಿಯತಿ’ ಎಂದರೆ ಅದೃಷ್ಟದ ನಿಯಮಾನುಸಾರವಾಗಿರುತ್ತದೆ; ಸುಖ, ದುಃಖ ಮತ್ತು ಮೋಹ, ಈ ಮೂರು ಅಂಶಗಳಿಂದಲೂ ಸಮ್ಮಿಶ್ರವಾಗಿರುತ್ತದೆ; ಪರಮಾಣುಗಳೇ ಮೊದಲಾದ ಉಪಾದಾನಕಾರಣಗಳಿಗೂ ಕರ್ಮವೇ ಮುಂತಾದ ಸಹಕಾರಿ ಕಾರಣಗಳಿಗೂ ಅಧೀನವಾಗಿರುತ್ತದೆ; (ಸಿಹಿ, ಹುಳಿ ಮುಂತಾದ) ಆರೇ ರಸಗಳು ಮಾತ್ರ ಅಲ್ಲಿ ಉಂಟು; ಎಲ್ಲವೂ ಹೃದ್ಯವೆಂಬಂತೆಯೂ ಇಲ್ಲ; ಆದರೆ ಕವಿವಾಣಿಯ ಸೃಷ್ಟಿ ಇದಕ್ಕೆ ಎಲ್ಲ ಬಗೆಯಲ್ಲಿಯೂ ವಿಲಕ್ಷಣವಾದುದು; ಆದ್ದರಿಂದಲೇ ಅದು ಬ್ರಹ್ಮಸೃಷ್ಟಿಗಿಂತಲೂ ಮಿಗಿಲಾದುದು.’

(ಅನುವಾದ: ಡಾ. ಕೆ. ಕೃಷ್ಣಮೂರ್ತಿ)

ಪ್ರಾಚೀನ ಅಲಂಕಾರಶಾಸ್ತ್ರ ಪರಂಪರೆಯ ಎಲ್ಲ ಸಾರವನ್ನೂ ‘ಕಾವ್ಯಪ್ರಕಾಶ’ದಲ್ಲಿ ಕಾಣಬಹುದು ಎನ್ನುವ ಮಾತು ಆಲಂಕಾರಿಕರಲ್ಲಿದೆ. ಆದುದರಿಂದಾಗಿ ಮೇಲಣ ಮಾತುಗಳನ್ನು ಒಟ್ಟು ಪರಂಪರೆಯ ಒಕ್ಕಣೆ ಎಂದು ಸ್ವೀಕರಿಸಲಾದೀತು.

ಈ ಸೃಷ್ಟಿ ಆಗಿರುವುದು ಬ್ರಹ್ಮನಿಂದ. ನಮ್ಮ ಇರವು–ಅರಿವು–ನಲವು – ಈ ಮೂರು ಅವಸ್ಥೆಗಳೂ ಬ್ರಹ್ಮನ ಸೃಷ್ಟಿಯನ್ನೇ ಆಶ್ರಯಿಸಿವೆ. ಈ ಸೃಷ್ಟಿಯಲ್ಲಿರುವ ವೈವಿಧ್ಯವೂ ಅನಂತ, ಅಪೂರ್ವ. ಎಷ್ಟೊಂದು ಜೀವವೈವಿಧ್ಯ, ವಸ್ತುವೈವಿಧ್ಯ. ಕಾಡಿನಲ್ಲೋ ನಾಡಿನಲ್ಲೋ ಇರುವ ಮರಗಳ ಎಲೆಗಳ ಬಣ್ಣವನ್ನು ಗಮನಿಸಿದರೂ ಸಾಕು, ಈ ವೈವಿಧ್ಯ ನಮ್ಮ ಅರಿವಿಗೆ ಬರುತ್ತದೆ. ಎಲೆಗಳ ಬಣ್ಣ ಹಸಿರು ಎಂದು ಹೇಳುತ್ತೇವೆ; ಆದರೆ ಆ ಹಸಿರಿನಲ್ಲಿ ಎಷ್ಟೆಲ್ಲ ಬಗೆಗಳು ಎಂದು ಗಮನಿಸಿದಾಗ ಸೃಷ್ಟಿ ನಮ್ಮ ಬೆರಗಿಗೆ ವಸ್ತುವಾಗದಿರದಲ್ಲವೆ? ಇಷ್ಟು ಆಕರ್ಷಕವೂ ಅನಂತವೈವಿಧ್ಯವೂ ಆಗಿರುವ ಬ್ರಹ್ಮನ ಸೃಷ್ಟಿಗಿಂತಲೂ ಮಿಗಿಲಾದುದು ಕವಿಬ್ರಹ್ಮನ ಸೃಷ್ಟಿ ಎನ್ನುತ್ತಿದೆ ಕವಿವಾಣಿ. ಇದಕ್ಕೆ ‘ಕಾವ್ಯಪ್ರಕಾಶ’ವು ಒದಗಿಸಿರುವ ಸಮರ್ಥನೆಯೂ ಮನೋಜ್ಞವಾಗಿದೆ; ‘ಹೌದು, ಹೌದು’ ಎಂದು ಒಪ್ಪುವಂತಿದೆ.

ಚತುರ್ಮುಖಬ್ರಹ್ಮನ ಸೃಷ್ಟಿ ‘ನಿಯತಿ’ಯ ನಿಯಮಕ್ಕೆ ಬದ್ಧವಾಗಿದೆ. ‘ನಿಯತಿ’ ಎಂದರೆ ಅದೃಷ್ಟ ಎಂಬ ಅರ್ಥವೂ ಉಂಟು; ಶಿವನ ಮೂವತ್ತಾರು ತತ್ತ್ವಗಳಲ್ಲಿ ಒಂದು ಎಂಬ ಅರ್ಥವೂ ಉಂಟು. ಈ ಸೃಷ್ಟಿಯಲ್ಲಿ ಸುಖದ ಜೊತೆಗೆ ದುಃಖವೂ ಇರುತ್ತದೆ; ಮೋಹವೂ ಕಾಡುವುದುಂಟು. ಪ್ರಪಂಚವನ್ನು ನಿರ್ಮಿಸಲು ಮೂಲವಸ್ತುಗಳೂ ಬೇಕು; ಪರಮಾಣುವೋ ಮತ್ತೊಂದೋ – ಏನೋ, ಅಂತೂ ‘ಉಪಾದಾನ’ ಕಾರಣ ಬೇಕು. ಈ ಲೋಕದಲ್ಲಿ ಬ್ರಹ್ಮನಿಂದ ಸೃಷ್ಟಿಯಾಗಿರುವುದು ಆರೇ ರಸಗಳು; ಅವೆಂದರೆ ಮಧುರ (ಸಿಹಿ), ಆಮ್ಲ (ಹುಳಿ), ಲವಣ (ಉಪ್ಪು), ಕಟು, ಕಷಾಯ, ತಿಕ್ತ (ಕಹಿ). ಬ್ರಹ್ಮಸೃಷ್ಟಿಯ ಈ ಎಲ್ಲ ವಿವರಗಳನ್ನೂ ಮಿತಿಗಳನ್ನೂ ಮೀರಿರುವಂಥದ್ದು ಕವಿಬ್ರಹ್ಮನ ಸೃಷ್ಟಿ. ಕಾವ್ಯದಲ್ಲಿ ಕವಿ ಪೂರ್ಣ ಸ್ವತಂತ್ರ; ಅವನು ಯಾವುದೇ ವಿಧಿಯನ್ನೋ ನಿಯತಿಯನ್ನೋ ಪಾಲಿಸಬೇಕಿಲ್ಲ. ಕಾವ್ಯದಲ್ಲಿ ತೋರಿಕೊಳ್ಳುವ ದುಃಖವೂ ಕೂಡ ಸುಖಮಯವಾಗಿರುತ್ತದೆಯಷ್ಟೆ. ಕಾವ್ಯಸೃಷ್ಟಿಯ ನಿರ್ಮಾಣಕ್ಕೆ ಕವಿಗೆ ತನ್ನಿಂದ ಹೊರತಾಗಿ ಇನ್ನೊಂದು ಬಾಹ್ಯ ಸಲಕರಣೆ ಬೇಕಿಲ್ಲ; ಕಲ್ಪನೆ–ಪ್ರತಿಭೆಗಳಿದ್ದರೆ ಸಾಕು. ಬ್ರಹ್ಮನ ಸೃಷ್ಟಿಯಲ್ಲಿ ಆರೇ ರಸ, ಎಂದರೆ ರುಚಿಗಳು. ಆದರೆ ಕವಿಸೃಷ್ಟಿಯಲ್ಲಿರುವ ರಸಗಳು ಒಂಬತ್ತು. ಇವೇ ನವರಸಗಳು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ); ಸಂಖ್ಯೆಯ ದೃಷ್ಟಿಯಿಂದಲೂ ಆಸ್ವಾದದ ನೆಲೆಯಲ್ಲೂ ಬ್ರಹ್ಮಸೃಷ್ಟಿಯ ರಸಸಂಖ್ಯೆಗಿಂತಲೂ ಅಧಿಕವಾದಂಥವು. ಹೀಗೆ ಎಲ್ಲ ರೀತಿಯಲ್ಲೂ ಕವಿಬ್ರಹ್ಮನ ಸೃಷ್ಟಿ ಚತುರ್ಮುಖ ಬ್ರಹ್ಮನ ಸೃಷ್ಟಿಗಿಂತಲೂ ವಿಶೇಷವಾಗಿದೆ. ಆದುದರಿಂದ ಅದು ಬ್ರಹ್ಮಸೃಷ್ಟಿಗಿಂತಲೂ ಮಿಗಿಲಾದುದು.

ಬ್ರಹ್ಮನ ಹಾರೈಕೆ ಸಿಗುವುದಕ್ಕಿಂತ ಮೊದಲೇ ಕವಿಗೆ ಹಲವು ಬಗೆಯ ವಿಶೇಷಗಳು ಸಹಜವಾಗಿಯೇ ದಕ್ಕಿವೆ. ಇನ್ನು ಬ್ರಹ್ಮನ ಆಶೀರ್ವಾದ–ಮಾರ್ಗದರ್ಶನಗಳೂ ಲಭಿಸಿದಮೇಲೆ ಮತ್ತೇನು ಹೇಳುವುದಿದೆ. ವಾಲ್ಮೀಕಿಗೆ ಬ್ರಹ್ಮನಿಂದ ವಿಶೇಷ ಅನುಗ್ರಹವೂ ದೊರೆಯಿತು. ಇದು ಕೇವಲ ವಾಲ್ಮೀಕಿಗೆ ಮಾತ್ರವೇ ದೊರೆತುದಲ್ಲ; ಇಡಿಯ ಕವಿಪರಂಪರೆಗೇ ದೊರೆತ ಅನುಗ್ರಹವೆನ್ನಿ! ‘ರಾಮಚರಿತ್ರೆಯು ಏಕಾಂತದಲ್ಲಾಗಲೀ ಬಹಿರಂಗದಲ್ಲಾಗಲೀ – ನಡೆದ ಬಗೆಯಂತೆ ನಿನಗೆ ಗೋಚರಿಸಲಿ’ – ಎಂಬ ವರ ಸಾಮಾನ್ಯವಾದುದಲ್ಲ; ಈ ಅಸಾಮಾನ್ಯಶಕ್ತಿಯೇ ‘ಪ್ರತಿಭೆ’ ಎನಿಸಿಕೊಂಡಿತು. ಪ್ರತಿಭೆಯನ್ನು ಅಭಿನವಗುಪ್ತನು ಶಿವನ ಮೂರನೆಯ ಕಣ್ಣಿಗೆ ಹೋಲಿಸಿರುವುದು ಕೂಡ ಅದ್ಭುತ ಧ್ವನಿಯಾಗಿದೆ.

ಬ್ರಹ್ಮನು ಅಂತರ್ಧಾನನಾದ ಬಳಿಕ ಕವಿ ವಾಲ್ಮೀಕಿಮಹರ್ಷಿಯು ಈ ಮೊದಲೇ ನಾರದನಿಂದ ಕೇಳಿದ್ದ ರಾಮನ ಚರಿತ್ರೆಯನ್ನು ಮತ್ತೊಮ್ಮೆ ಅನುಸಂಧಾನಿಸಿದ. ‘ಧರ್ಮಾರ್ಥಸಹಿತವಾದ ರಾಮಚರಿತ’ (‘ಧರ್ಮಸಂಹಿತಮ್‌’) – ಎಂದು ಹೇಳಿರುವುದನ್ನು ಗಮನಿಸಬೇಕು. ಅನಂತರ ಆಚಮನವನ್ನು ಮಾಡಿ, ಪೂರ್ವದಿಕ್ಕಿಗೆ ಹರಡಿದ ದರ್ಭೆಗಳ ಮೇಲೆ ನಿಂತ ವಾಲ್ಮೀಕಿ, ಕೈಮುಗಿದು ಧ್ಯಾನಸ್ಥನಾದ; ಧರ್ಮಮೂಲವಾದ ಜ್ಞಾನದೃಷ್ಟಿಯಿಂದ ರಾಮನ ಚರಿತವನ್ನು ವಿಶದವಾಗಿ ನೋಡಿದ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.