ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮದುಮಗನ ಅಲಂಕಾರದಲ್ಲಿ ಶಿವ

ಭಾಗ 257

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 24 ಅಕ್ಟೋಬರ್ 2022, 2:36 IST
Last Updated 24 ಅಕ್ಟೋಬರ್ 2022, 2:36 IST
   

ಶಿವ-ಪಾರ್ವತಿಯ ಕಲ್ಯಾಣಕ್ಕೆ ಹೊರಡುವ ಮದುವೆ ದಿಬ್ಬಣಕ್ಕೆ ವಿಷ್ಣು, ಬ್ರಹ್ಮ ತಮ್ಮ ಪರಿವಾರದೊಡನೆ ಕೈಲಾಸಕ್ಕೆ ಆಗಮಿಸಿದ. ಇಂದ್ರ ಮೊದಲಾದ ಲೋಕಪಾಲರೂ ಸುಂದರವಾದ ವೇಷಭೂಷಣಗಳೊಂದಿಗೆ ಪತ್ನಿ ಮತ್ತು ಪರಿವಾರದೊಡನೆ ಬಂದರು. ನಾರದನ ಆಹ್ವಾನ ಮನ್ನಿಸಿ ಮುನಿಗಳು, ನಾಗಗಳು, ಸಿದ್ಧರು, ಗಂಧರ್ವರು, ಕಿನ್ನರರು ಸಹ ಬಂದರು.

ವಿಷ್ಣು-ಬ್ರಹ್ಮ ಮೊದಲಾದ ದೇವತೆಗಳು ಶಂಕರನ ಮದುವೆ ತಮ್ಮ ಮನೆಯ ಕಾರ್ಯವೆಂಬಂತೆ ಶ್ರದ್ಧೆಯಿಂದ ನೆರವೇರಿಸಲು ಸಿದ್ಧರಾದರು. ಶಿವನ ನಿತ್ಯದ ಬೂದಿ ಬಳಿದ ಅರೆನಗ್ನ ವೇಷವೂ ಬದಲಾಗಿ, ರಾಜಕುಮಾರನಂತೆ ಅಲಂಕೃತನಾದ. ಶಿವನ ಶಿರದಲ್ಲಿದ್ದ ಚಂದ್ರನ ಸ್ಥಾನದಲ್ಲಿ ವಜ್ರಖಚಿತ ಚಿನ್ನದ ಕಿರೀಟ ಅಲಂಕರಿಸಿತು. ಅವನ ಮೂರನೆಯ ಕಣ್ಣು ಸುಂದರವಾದ ತಿಲಕವಾಯಿತು. ನಾಗಾಭರಣಗಳಾಗಿದ್ದ ಶೇಷ ಮತ್ತು ವಾಸುಕಿ ಎಂಬ ಎರಡು ಸರ್ಪಗಳು ರತ್ನಮಯವಾದ ಕುಂಡಲಗಳಾಗಿ ಶಿವನ ಕರ್ಣವನ್ನಲಂಕರಿಸಿದವು.

ಶಿವನ ಶರೀರದಲ್ಲಿ ಸದಾ ಇರುತ್ತಿದ್ದ ವಿಭೂತಿಯು ಚಂದನವಾಗಿ ಪರಿಮಳಭರಿತವಾಯಿತು. ಅವನ ಸೊಂಟ ಅಲಂಕರಿಸಿದ್ದ ಗಜಚರ್ಮವು ಸುಂದರವಾದ ವಸ್ತ್ರವಾಯಿತು. ಮದುಮಗನ ಅಲಂಕಾರದಿಂದ ಶಿವ ಮನೋಹರವಾಗಿ ಶೋಭಿಸುತ್ತಿದ್ದ. ಹರಿಯು ಶಂಕರನಿಗೆ ಭಕ್ತಿಯಿಂದ ನಮಸ್ಕರಿಸಿ, ‘ಮಹಾದೇವನೆ, ನನ್ನದೊಂದು ವಿಜ್ಞಾಪನೆಯನ್ನು ನೆರವೇರಿಸು. ಪಾರ್ವತಿಯೊಡನೆ ನಿನ್ನ ಮದುವೆಯು ಗೃಹ್ಯಸೂತ್ರಗಳಲ್ಲಿ ಹೇಳಿರುವ ವಿಧಿಯಂತೆ ಆಗಬೇಕು. ನೀನು ವಿಧಿವತ್ತಾಗಿ ಮದುವೆಯನ್ನು ಮಾಡಿಕೊಂಡರೆ, ಆ ವಿಧಿಪದ್ಧತಿಯೇ ಲೋಕದಲ್ಲಿ ಪ್ರಸಿದ್ಧವಾಗುತ್ತದೆ. ಮುಂದೆ ಲೋಕದಲ್ಲಿ ಎಲ್ಲ ಮದುಮಕ್ಕಳು ನೀನು ಮಾಡಿಕೊಂಡ ವಿವಾಹವಿಧಿಯಂತೆ ಮಾಡಿಕೊಳ್ಳುತ್ತಾರೆ. ಮದುವೆ ಮಂಟಪಸ್ಥಾಪನ, ನಾಂದೀಮುಖ ಮುಂತಾದ ಕರ್ಮಗಳನ್ನು ಕುಲಧರ್ಮದಂತೆ ವಿಧಿವತ್ತಾಗಿ ಆಚರಿಸು. ಅದರಿಂದ ನೀನು ಧರ್ಮದೇವನೆಂದು ಖ್ಯಾತಿಗೊಳ್ಳುವೆ’ ಎಂದು ಯೋಗ್ಯವಾದ ಮಾತುಗಳನ್ನು ಹೇಳಿದ.

ADVERTISEMENT

ಹರಿಯ ಕೋರಿಕೆಯನ್ನು ಅಂಗೀಕರಿಸಿದ ಹರನು ಲೋಕಾಚಾರದಂತೆ ಮದುವೆಯ ಆಯಾಯ ವಿಧಿಗಳನ್ನು ಮಾಡಿದ. ಶಿವನ ವಿವಾಹಕ್ಕೆ ಬಂದಿದ್ದ ಕಶ್ಯಪ, ಅತ್ರಿ, ವಸಿಷ್ಠ, ಗೌತಮ, ಭಾಗುರಿ, ಗುರು, ಕಣ್ವ, ಬೃಹಸ್ಪತಿ, ಶಕ್ತಿಮುನಿ, ಜಮದಗ್ನಿ, ಪರಾಶರ, ಮಾರ್ಕಾಂಡೇಯ, ಶಿಲಾಪಾಕ, ಅರುಣಪಾಲ, ಅಕೃತಶ್ರಮ, ಅಗಸ್ತ್ಯ, ಚ್ಯವನ, ಗರ್ಗ, ಶಿಲಾದ, ದಧೀಚಿ, ಉಪಮನ್ಯು, ಭರದ್ವಾಜ, ಅಕೃತವ್ರಣ, ಪಿಪ್ಪಲಾದ, ಕುಶಿಕ, ಕೌತ್ಸ, ವ್ಯಾಸ ಮೊದಲಾದ ಮುನಿಗಳು ಬ್ರಹ್ಮನ ಅಪ್ಪಣೆಯಂತೆ ವಿಧಿವತ್ತಾಗಿ ಕರ್ಮಗಳನ್ನು ಮಾಡಿಸಿದರು.

ಆ ಕರ್ಮಗಳಲ್ಲಿ ಬ್ರಹ್ಮ ಅಧಿಕಾರಿಯಾಗಿ ನಿಂತು ಅಭ್ಯುದಯಕ್ಕೆ ಅನುಗುಣವಾದಂತಹ ಎಲ್ಲ ಕರ್ಮಗಳನ್ನು ಮುನಿಗಳೊಡನೆ ನಿರ್ವಹಿಸಿದ. ಮುನಿಗಳು ವೇದೋಕ್ತವಿಧಿಯಂತೆ ಕೌತುಕಬಂಧನ ಕರ್ಮವನ್ನು ಮಾಡಿ ಶಿವನಿಗೆ ರಕ್ಷಾಕಂಕಣವನ್ನು ಕಟ್ಟಿದರು. ವೇದಸೂಕ್ತಗಳಿಂದ ಋಷಿಮುನಿಗಳು ಅನೇಕ ಮಂಗಳ ಕಾರ್ಯಗಳನ್ನು ನೆರವೇರಿಸಿದರು. ಗ್ರಹಮಂಡಲದಲ್ಲಿರುವ ಎಲ್ಲಾ ಗ್ರಹಗಳ ದೋಷವು ನಿವೃತ್ತಿಯಾಗುವಂತೆ ನವಗ್ರಹಪೂಜೆಯನ್ನು ಸಹ ಶಂಕರನಿಂದ ಮಾಡಿಸಿದರು.

ಶಿವ ಸಂತೋಷದಿಂದ ವಿವಾಹಕ್ಕೆ ಯೋಗ್ಯವಾದ ಲೌಕಿಕ ಮತ್ತು ವೈದಿಕ ಕರ್ಮಗಳೆರಡನ್ನೂ ವಿಧಿವತ್ತಾಗಿ ಮಾಡಿ, ಮುನಿವರ್ಯರಿಗೆ ವಂದಿಸಿದ. ಅನಂತರ ದೇವತೆಗಳನ್ನು ಮುನಿಗಳನ್ನು ಮುಂದಿಟ್ಟುಕೊಂಡು ಪರ್ವತಶ್ರೇಷ್ಠವಾದ ಕೈಲಾಸದಿಂದ ಹಿಮಾಲಯಕ್ಕೆ ಹೊರಟ. ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಮೂವತ್ತೊಂಬತ್ತನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.