ಕಿರಿಯ ವಯಸ್ಸಿನಲ್ಲಿ ಕೂಡಲಸಂಗನ ಅಖಂಡ ಅನಂತತೆಯ ಶಿವಬೆಳಗಿನಲ್ಲಿ ಬೆಳೆದ ಬಸವಣ್ಣನವರದು ಆದರ್ಶ ಜೀವನ, ತಮ್ಮ ಮನೆಯಿಂದಲೇ ಕ್ರಾಂತಿಶುರುವಾದುದರ ಅರಿವು ನಮಗಿದೆ.
ಆದರೆ ಅಲ್ಲಮ ಪ್ರಭುವಿನ ವಚನದಲ್ಲಿ ಬಸವಣ್ಣನವರ ಸಾಧನೆಯ ಕಠಿಣತೆಯನ್ನು ಬಸವಣ್ಣನವರು ಬಲ್ಲರಲ್ಲದೆ!
"ಪಶ್ಚಿಮ ಪದ್ಮಾಸನದಲ್ಲಿ ಕುಳ್ಳಿರ್ದು
ಸುಳಿದು ಸೂಸುವ ಕಳ್ಳನಾರು ಬಲ್ಲರು,
ಹಾರುವ ಹಂಸೆಯ ತಲೆಗಿಂಬು
ಮಾಡಿದವನ ಬಸವಬಲ್ಲ ಕಾಣ ಗುಹೇಶ್ವರ. "
ಬಸವಣ್ಣನವರ ವಚನ..
ಪಶ್ಚಿಮ ಪದ್ಮಾಸನದಲ್ಲಿ ಕುಳಿತು ನಿಟ್ಟೆಲುವ ಮುರಿದು
ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ !
ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ ,
ಕಟ್ಟು ಗುಡಿಯ ಕೂಡಲಸಂಗಮದೇವ ಹಿಡಿವಡೆದ!
ಕೇವಲ ಒಂದು ನಿಮಿಷ ಮೌನ ಧ್ಯಾನದಲ್ಲಿ ಕೂಡಲಾಗದ ನಮ್ಮೆಲ್ಲರಿಗೂ ವಿಶ್ವಗುರು ಬಸವಣ್ಣನ ಜೀವನವೇ ಒಂದು ಉನ್ನತ ಆದರ್ಶ.
ಬಯಸಿದ ಲಿಂಗದನುವನು ತನ್ನತ್ತಲೇ "ಅರಿವನ್ನೇ ಗುರುವಾಗಿಸಿ ಕೊಂಡೊಯ್ದ ಬಸವಣ್ಣನವರ ಸಾಧನೆ ಪೂಜ್ಯನೀಯ"
ಅನುವಿನ ಒಡಗೂಡಿ ಅನಂತ ಚಿದ್ಬೆಳಗ ನಿತ್ಯ ಅರಿವಿನ ಮನೆಯಲ್ಲಿ ಅನುಭಾವಿಸಿ ಪರಮ ಸುಖದಲೋಲಾಡದೆ.
ತಾವು ಕಂಡ ಅನಂತತೆಯ ಚಿದ್ಬೆಳಕ ಸಕಲ ಜೀವಾತ್ಮರಿಗೆ ಉಣಬಡಿಸುವ ಸಂಕಲ್ಪ ಮಾಡಿದರು, ಅದು ೧೨ನೇ ಶತಮಾನ ಮನುವಾದ ವಿಶ್ವ ವ್ಯಾಪಿಯಾಗಿ ಮಾನವೀಯತೆಗೆ ಜಾಗವೇ ಇಲ್ಲದ ಸ್ಥಿತಿಯದು, ಮಾನವ ಕುಲವನು ಕಂಡು ಜರ್ಜರಿತರಾಗಿ ಅಂತರಂಗದಲ್ಲಿ ಬಿಕ್ಕಿ ಬಿಕ್ಕಿ ಮರುಗಿದ ಮಹಾನುಭಾವಿ ಬಸವಣ್ಣನವರು.
ಜೀವ ಚೈತನ್ಯದ ನಿಜ ನೆಲೆಯನು ಅರಿದು ಸಾಕಾರ ರೂಪಕ್ಕೆ ತಂದು ಕರದಿಷ್ಟಲಿಂಗವನಿತ್ತವರು ಬಸವಣ್ಣನವರು, "ಗುಡಿಯೊಳಗಣ ದೈವವ (ಸ್ಥಾವರವ) ತೊರೆದು, ಅಂತರಂಗದ ಚಿದಾತ್ಮಬೆಳಗ ಇಷ್ಟಲಿಂಗವ ಕರದಲ್ಲಿಟ್ಟರು".
ಸ್ತೂಲಕ್ಕೆ ಇಷ್ಟಲಿಂಗ,ಸೂಕ್ಷ್ಮಕ್ಕೆ ಪ್ರಾಣಲಿಂಗ,ಕಾರಣಕ್ಕೆ ಭಾವಲಿಂಗವಾಗಿ,ಲಿಂಗಯ್ಯನೊಲುಮೆ ಸಖಲರಿಗೆಂದ ಮಹಾ ಭಕ್ತಿ ಭಂಡಾರಿ ಬಸವಣ್ಣನವರು. ಬಿಜ್ಜಳನ ಆಸ್ಥಾನದಲ್ಲಿ ಮಹಾ ಮಂತ್ರಿಗಳಾಗಿದ್ದರು...
"ಅಯ್ಯಾ ಭಕ್ತಿಗೆ ಬೀಡಾದುದು ಕಲ್ಯಾಣ
ಮೂವತ್ತಾರು ವರ್ಷ.
ಅಯ್ಯಾ ಅನುಭವಕ್ಕೆ ಶಿವಸದನವಾದುದು
ಇಪ್ಪತ್ತೇಳು ವರ್ಷ.
ಅಯ್ಯಾ ಹಿಂದಿನಂತನುಭವ, ಹಿಂದಿನಂತೆ ಭಕ್ತಿ ಇಲ್ಲಾ.
ಮೂರು ಮಾಸದೊಳಗಾಗಿ ಇಲ್ಲಿ ಆಡಲು
ಭಯವಿಲ್ಲಾ ಕೇಳಯ್ಯಾ ಕೂಡಲಸಂಗಮದೇವ."
ತಮ್ಮ ಆದರ್ಶ ಜೀವನದ ಬೆಳಗ ಪಯಣದಲಿ ಜೊತೆಯಾದ ಅಕ್ಕ ನಾಗಲಾಂಬಿಕೆ , ಪತ್ನಿ ನೀಲಮ್ಮ, ಅಳಿಯ ಚೆನ್ನಬಸವಣ್ಣ,
ಅಸಂಖ್ಯಾತ ಪ್ರಮಥಗಣಂಗಳು, ಬಸವಣ್ಣನವರ ಆದರ್ಶವನ್ನು ಇನ್ನಷ್ಟು ಇಮ್ಮಡಿಗೊಳಿಸಿದರು.
ಬಸವಣ್ಣನವರ ಕಾಯಕ, ದಾಸೋಹ ತತ್ವ ಗಳು, ನಿತ್ಯ ಕಲ್ಯಾಣದ ಜೀವನ ಶೈಲಿ ಯಾದವು. ಬಸವಕಲ್ಯಾಣ ಕಂಡದ್ದು ಅಸಂಖ್ಯಾತ ಶಿವಶರಣರನ್ನು. ಅಲ್ಲಿ ರೂಪುಗೊಂಡ ಅನುಭವ ಮಂಟಪ, ವಿಶ್ವದ ಮೊದಲನೇ ಸಂಸತ್ತಾಗಿತ್ತು. ಸ್ತ್ರೀ ಸಮಾನತೆ, ಅಂತರ್ಜಾತಿ ವಿವಾಹ, ಕಾಯಕ ಸಮಾನತೆ, ಹಿಂದುಳಿದ ಅಸಂಖ್ಯಾತ ಅನಕ್ಷರಸ್ಥ ಜನರನ್ನು ಅಕ್ಷರಸ್ಥರನ್ನಾಗಿಸಿ, ಇಷ್ಟಲಿಂಗ ಧಾರಣ ಶಿವಯೋಗಮಾರ್ಗದಿ ( ಅಷ್ಟಾವರಣ, ಪಂಚಾಚಾರ , ಷಟಸ್ಥಲ )ವ ನಿಡಿದು,
"ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ.
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀ ಮಕುಟ.
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ. ಕೂಡಲಸಂಗಮದೇವಯ್ಯ.
ಎನ್ನ ಕರಸ್ಥಲಕ್ಕೆಬಂದು ಚುಳುಕಾದಿರಯ್ಯ."
ಮುಕ್ತಿಯೆಡೆಗೆ ಕೊಂಡೊಯ್ದು ಶಿವಶರಣರನ್ನಾಗಿಸಿ 770 ಅಮರ ಗಣoಗಳನ್ನು ಮಾಡಿದ ಕೀರ್ತಿ ಬಸವಣ್ಣನವರದು. ಮೇಲ್ಕಂಡವೆಲ್ಲಾ ಸಾಧನೆಗಳಾದರೆ, "ಮರಣವೇ ಮಹಾನವಮಿ"ಎಂಬ ಶಿವಶರಣರ ಜೀವನ ಅತ್ಯಂತ ಸುಖಕರವಾಗಿರಲಿಲ್ಲಾ!
ಇಂದಿನಂತೆ ಅಲ್ಲಿ ಯಾವುದೊಂದು ಸುಲಭವಾಗಿ ನಡೆಯಲ್ಲಿಲ್ಲಾ ಕಾರಣ ಕೇವಲ ಮೇಲ್ವರ್ಗದವರಿಗಷ್ಟೇ ಸೀಮಿತವಾದ ಆತ್ಮಜ್ಞಾನದ,ಮುಕ್ತಿಯ ಸೊಕ್ಕಡಗಿಸಿದ ಧೀಮಂತ ಅಪ್ಪ ಬಸವಣ್ಣಾ.
"ಕರ್ತಾರನ ಕಮ್ಮಟದಲ್ಲಿ" ಗಂಡು ಹೆಣ್ಣೆಂಬೆರಡು ಜಾತಿ ಮಾನವ ಕೇವಲ ಹುಟ್ಟಿನಿಂದಲ್ಲಾ ಸಾಧನೆಯಿಂದ ಉನ್ನತ ಮಟ್ಟವನ್ನು ತಲುಪುವನು ಎಂಬುದನ್ನು ಸಾಧಿಸಿ ತೋರಿಸಿದಾತ ಬಸವಣ್ಣನವರು. ಕ್ರಾಂತಿಗೆ ಕಾರಣವಾದ ದಿನವದು ನಾವು ಮೇಲು ನೀವು ಕೀಳೆಂಬ ಕಹಳೆಯು ತನ್ನ ನಾದವನ್ನು ಅಂತ್ಯಗೊಳಿಸಿದ ದಿನವದು, ಹೀನಕುಲದವರೆಂಬರ ಮನೆಗೆ,
"ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ,
ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ" .
ಎಂದು ನುಡಿದು ನಡೆದರು ಕಲ್ಯಾಣದ ಹಾದಿಯಲ್ಲಿ "ಗುಡಿಯಿಂದ ಗುಡಿಸಿಲೆಡೆಗೆ ಬಂದ ಬಸವಣ್ಣನವರು",
ಅಂತರಂಗದ ಅನುಭವ ಮಂಟಪದಲ್ಲಿ ನಾವು ನೀವೆಲ್ಲರೂ ಒಂದೇ ಎಂದರು. ಅಲ್ಲಿಂದ ಇಷ್ಟಲಿಂಗಧಾರಣೆ ಪಡೆದ ಅನೇಕಾನೇಕ ಹಿಂದುಳಿದ ವರ್ಗದವರೆಲ್ಲಾ ಜಾತಿ ,ಮತ ,ಪಂಥ ,ವರ್ಗ ,ವರ್ಣ ,ಎಂಬ ಭ್ರಾಂತನ್ನು ಸುಟ್ಟು ಮಹಾ ಪದವಿಯನೈದಿದರು.
ಅಲ್ಲಿಂದ ಶುರುವಾದ ಬಸವಕ್ರಾಂತಿ 21ನೇ ಶತಮಾನದವರೆಗೂ ಕಲ್ಯಾಣದ ಕ್ರಾಂತಿಯಿಂದ ಇಲ್ಲಿವರೆಗೂ ವಿಶ್ವದಲ್ಲಿ ಅನೇಕಾನೇಕ ಬದಲಾವಣೆಯ ನಡುವೆಯೂ "ಲಿಂಗ ಮುಂದಾಗಿ ನಡೆದು ನುಡಿದ ವಚನಸಾಹಿತ್ಯ" ಪ್ರಸ್ತುತ ಸಮಾಜಕ್ಕೂ ಆದರಣೀಯ ಅವಿಸ್ಮರಣೀಯ.
ಪ್ರಸ್ತುತ ಕರ್ನಾಟಕದ ಸರ್ಕಾರ ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು, ಅಂದು ನಡೆದ ಕಲ್ಯಾಣ ಕ್ರಾಂತಿಯ ಹಿರಿಮೆಯನ್ನು ಹೆಚ್ಚಿಸಿದೆ ಮುಂದಿನ ಯುವ ಪೀಳಿಗೆಯ ಜನಸಾಮಾನ್ಯರ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
"ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ." ಎಂಬ "ವಿಶ್ವಗುರು ಬಸವಣ್ಣನವರು ಮಹಾಮನೆಯಿಂದ "ಶಿವಾಲಯದಿಂದ ಗುಡಿಸಲೆಡೆಗೆ ಬಾರದೆ ಇದ್ದಿದ್ದರೆ ಯೋಚಿಸಿ"?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.