ADVERTISEMENT

ಆನೇಕಲ್: ವಿಜೃಂಭಣೆಯ ಹೆನ್ನಾಗರ ಯಲ್ಲಮ್ಮ ದೇವಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 14:16 IST
Last Updated 10 ಜನವರಿ 2020, 14:16 IST
ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿಯ ಬ್ರಹ್ಮರಥೋತ್ಸವಕ್ಕೆ ಗುಮ್ಮಳಾಪುರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು
ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿಯ ಬ್ರಹ್ಮರಥೋತ್ಸವಕ್ಕೆ ಗುಮ್ಮಳಾಪುರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು   

ಆನೇಕಲ್: ತಾಲ್ಲೂಕಿನ ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿಯ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ಬ್ರಹ್ಮರಥೋತ್ಸವದ ಪ್ರಯುಕ್ತ ಶುಕ್ರವಾರ ದೇವಾಲಯದಲ್ಲಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಜ್ಯೋತಿಲಿಂಗ ಸ್ವಾಮಿ ಗದ್ದಿಗೆಗೆ ಅಭಿಷೇಕ, ಹೋಮ ನೆರವೇರಿಸಲಾಯಿತು.

ಮಧ್ಯಾಹ್ನ ಅಲಂಕೃತ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಲಾಯಿತು. ಅರ್ಚಕರು ಧಾರ್ಮಿಕ ಪೂಜೆಗಳನ್ನು ನೆರವೇರಿಸಿದ ನಂತರ ಗುಮ್ಮಳಾಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಸೇರಿದ್ದ ಭಕ್ತರು ದೇವಿಯ ಜಯಘೋಷ ಮಾಡುತ್ತಾ ದವನ ಚುಚ್ಚಿದ ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥವನ್ನು ಭಕ್ತರು ದೇವಾಲಯದ ಪ್ರಾಂಗಣದಲ್ಲಿ ಎಳೆಯುವ ಮೂಲಕ ರಥೋತ್ಸವದಲ್ಲಿ ಭಾಗಿಗಳಾದರು.

ಮಹಿಳೆಯರು ದೇವಿಗೆ ಮಡಿಲಕ್ಕಿ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಬೆಳ್ಳಂಡೂರು ಮತ್ತು ಕೈಗೊಂಡ್ರಹಳ್ಳಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಅನ್ನದಾಸೋಹ ಏರ್ಪಡಿಸಿದ್ದರು ಎಂದು ದೇವಾಲಯದ ಸಂಚಾಲಕ ಜ್ಯೋತಯ್ಯ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಜೆ.ಪ್ರಸನ್ನಕುಮಾರ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ಮುಖಂಡರಾದ ಟಿ.ನಾರಾಯಣ, ಮುನಿರಾಜು, ಬೆಳ್ಳಂಡೂರು ಸುರೇಶ್‌, ನೀಲಕಂಠಯ್ಯ, ಹಾಜರಿದ್ದರು.

ರಥೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಯಲ್ಲಮ್ಮ ದೇವಿ ಮುತ್ತಿನ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ನಡೆಯಿತು. ಶನಿವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಭಾನುವಾರ ಗದ್ದಿಗೆ ಜ್ಯೋತಿಲಿಂಗ ಸ್ವಾಮೀಜಿಗಳ 282ನೇ ಶಿವಗಣಾರಾಧನೆ ಮತ್ತು ಗುಮ್ಮಳಾಪುರ ಶ್ರೀಗಳು ಪಾದಪೂಜೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.