ADVERTISEMENT

ಕಾಳಗಿ: ಹರಿದು ಬಂದ ಭಕ್ತಸಾಗರ

ನೀಲಕಂಠ ದೇವಸ್ಥಾನದಲ್ಲಿ ಗಮನ ಸೆಳೆದ ರಂಗೋಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:25 IST
Last Updated 22 ಫೆಬ್ರುವರಿ 2020, 11:25 IST
ಕಾಳಗಿ ನಿಸರ್ಗ ಗುರುಕುಲ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ವಾಸವಿ ಮಹಿಳಾ ಕ್ಲಬ್ ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿತು
ಕಾಳಗಿ ನಿಸರ್ಗ ಗುರುಕುಲ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ವಾಸವಿ ಮಹಿಳಾ ಕ್ಲಬ್ ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿತು   

ಕಾಳಗಿ: ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ವಿವಿಧೆಡೆಯಿಂದ ಭಕ್ತಸ್ತೋಮ ಶುಕ್ರವಾರ ಹರಿದುಬಂತು.

ಬೆಳಿಗ್ಗೆಯೇ ಬರಲಾರಂಭಿಸಿದ ಭಕ್ತರು ರಾತ್ರಿವರೆಗೂ ಸಾಲುಗಟ್ಟಿದರು. ಪವಿತ್ರ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಗರ್ಭಗುಡಿಯ ಮೂಲ ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು. ಕೆಲ ಭಕ್ತರು ಕಾಯಿ ಕರ್ಪೂರ ಮಾಡಿ ದರ್ಶನ ಪಡೆದರು. ಜತೆಗೆ ದೇವಸ್ಥಾನ ಸಂಕೀರ್ಣದ ಜ್ಯೋತಿರ್ಲಿಂಗ, ನವಗೃಹ ದರ್ಶನ ಭಾಗ್ಯ ತಮ್ಮದಾಗಿಸಿಕೊಂಡರು.

ದೇವಸ್ಥಾನ ಸಮಿತಿ ಹಾಗೂ ಕೆಲ ಭಕ್ತರು ಸಂಜೆ ವೇಳೆ ಬಾಳೆಹಣ್ಣು, ದ್ರಾಕ್ಷಿ, ಖರ್ಜೂರ, ಸೇಬು, ಸಾಬುದಾಣಿ ಪ್ರಸಾದ ವಿತರಣೆ ಮಾಡಿದರು. ಆಗಮಿಸಿದವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿದ್ದರು.

ADVERTISEMENT

ಭಕ್ತರ ಆಕರ್ಷಣೆಗಾಗಿ ನಿಸರ್ಗ ಗುರುಕುಲ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ವಾಸವಿ ಮಹಿಳಾ ಕ್ಲಬ್ ಆಶ್ರಯದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. 61 ಜನ ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಶೇಖರ ಮಾಕಪನೋರ, ವಾಸವಿ ಕ್ಲಬ್ ಅಧ್ಯಕ್ಷ ವಿಶ್ವನಾಥ ವನಮಾಲಿ, ವಾಸವಿ ಮಹಿಳಾ ಕ್ಲಬ್ ಅಧ್ಯಕ್ಷೆ ಶೃತಿ ವನಮಾಲಿ, ಕಾರ್ಯದರ್ಶಿ ರಾಧಾ ವನಮಾಲಿ, ನಿಸರ್ಗ ಗುರುಕುಲ ಕಾರ್ಯದರ್ಶಿ ವಿವೇಕಾನಂದ ಪೂಜಾರಿ, ಪ್ರಧಾನ ಅಧ್ಯಾಪಕಿ ಸುಧಾರಾಣಿ ಚಿದ್ರಿ, ಮಾತೃಭಾರತಿ ಸಮಿತಿ ಸಂಚಾಲಕಿ ಸಿದ್ದಲಿಂಗಮ್ಮ ಮಾನಶೆಟ್ಟಿ, ತೀರ್ಪುಗಾರ ನರೇಶ ಜಾಣ, ಸಂಗಮೇಶ ವನಮಾಲಿ, ಸಂತೋಷ ವನಮಾಲಿ, ಕಾಳಪ್ಪ ಸುಂಠಾಣ, ಶಾಮರಾವ ಕಡಬೂರ, ಗಣಪತರಾವ ಸಿಂಗಶೆಟ್ಟಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ನೀಲಕಂಠ ಮಡಿವಾಳ ಇದ್ದರು.

ರಾತ್ರಿ ಹಿರೇಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರ ಸಾನಿಧ್ಯದಲ್ಲಿ ವೇದಮೂರ್ತಿ ಮಲ್ಲಯ್ಯಶಾಸ್ತ್ರಿ ಯಾದಗಿರಿ ಪ್ರವಚನ, ಮೈನೋದ್ದಿನ್ ಮಂಗಲಗಿ ಸಂಗೀತ ಹಾಗೂ ಶಿವಕುಮಾರ ಸಾಲಿಮಠ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.