ADVERTISEMENT

Diwali, Lakshmi Puja | ಲಕ್ಷ್ಮಿ: ಜೀವನದ ಬೆಳಕು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
   

ಮನುಷ್ಯನ ಬದುಕನ್ನು ಅರ್ಥಪೂರ್ಣವಾಗಿಸಲು ಮತ್ತವನನ್ನು ಪರಿಪೂರ್ಣನನ್ನಾಗಿಸಲು ಸಂಸ್ಕೃತಿಯು ನಾಲ್ಕು ಸಾಧನಗಳನ್ನು ರೂಪಿಸಿಕೊಂಡಿದೆ. ಅವೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು. ಈ ಪುರುಷಾರ್ಥಗಳ ಚೌಕಟ್ಟು ಈಗಾಗಲೇ ಅರ್ಥಕಾಮಗಳ ಕುರಿತಾಗಿ ಮನುಷ್ಯನಿಗಿರುವ ಅತ್ಯಂತ ಆಸ್ಥೆ ಮತ್ತು ಮಿತಿಮೀರಿದ ಹವಣಿಗೆ ಧರ್ಮದ ಕಡಿವಾಣವನ್ನು ತೊಡಿಸುತ್ತವೆ ಮತ್ತು ಮೋಕ್ಷದ ಗುರಿಯನ್ನು ತೋರಿಸುತ್ತವೆ.

ಇವುಗಳಲ್ಲಿ ಎರಡನೆಯದಾದ ಅರ್ಥವು - ಧರ್ಮ ಮತ್ತು ಧರ್ಮಕ್ಕೆ ಅವಿರುದ್ಧವಾದ ಕಾಮ - ಈ ಎರಡನ್ನೂ ಬೆಸೆಯುವ ಕೊಂಡಿಯಾಗಿ ಒದಗಿಬರುತ್ತದೆ. ಮನುಷ್ಯನೊಬ್ಬನ ಧರ್ಮಪೂರ್ಣವಾದ ಕಾಮ(ಬಯಕೆ)ಗಳನ್ನು ಅರ್ಥವು ಈಡೇರಿಸುತ್ತದೆ. ಮತ್ತೊಂದು ನೆಲೆಯಿಂದ ಹೇಳುವುದಾದರೆ ಧಾರ್ಮಿಕವಾದ ಕಾಮನೆಗಳನ್ನು ಸಾಧಿಸಲು ಒದಗಿಬರುವ ಸಾಧನಗಳೆಲ್ಲವೂ ‘ಅರ್ಥ’ಗಳೇ! ಅದು ಅಷ್ಟೈಶ್ವರ್ಯಗಳಿರಬಹುದು, ಸಿದ್ಧಿಗಳಿರಬಹುದು, ಸಂತಾನವಿರಬಹುದು ಅಥವಾ ವಿದ್ಯೆಯೂ ಇರಬಹುದು – ಎಲ್ಲವೂ ಒಂದರ್ಥದಲ್ಲಿ ಅರ್ಥಗಳೇ.

ಇಂಥ ಅರ್ಥವನ್ನು ಸನಾತನ ಪರಂಪರೆ ಸಾಕಾರಗೊಳಿಸಿಕೊಂಡಿರುವುದು ಲಕ್ಷ್ಮೀದೇವಿಯ ರೂಪದಲ್ಲಿ. ನಾಲ್ಕು ದಿಗ್ಗಜಗಳಿಂದ ಜಲಾಭಿಷೇಕವನ್ನು ಮಾಡಿಸಿಕೊಳ್ಳುತ್ತ ಕುಂಭವೊಂದರಲ್ಲಿ ಸಂಪತ್ತನ್ನು ತುಂಬಿಕೊಂಡು ಕಮಲದ ಮೇಲೆ ಕುಳಿತಿರುವಂತೆ ಸಾಮಾನ್ಯವಾಗಿ ಈಕೆ ಚಿತ್ರಿತಳಾಗುತ್ತಾಳೆ. ಅಂತಹ ಈ ದೇವಿಯು ಹರಿಯ ಹೃದಯವಾಸಿಯೂ ಹೌದು. ಹಾಗಾಗಿಯೇ ನಾರಾಯಣನು ರಮಾರಮಣನೂ ಹೌದು, ಶ್ರೀನಿಧಿಯೂ ಹೌದು. ಆತನ ಹೃದಯಕವಾಟವನ್ನು ತಟ್ಟಬಲ್ಲಷ್ಟು ಧರ್ಮದ ಸಂಚಯವಿರುವವರಿಗಷ್ಟೇ ಅದರೊಳಗಿನ ಲಕ್ಷ್ಮಿಯ ಪ್ರಾಪ್ತಿ ಎನ್ನುವುದೇ ಇದರ ಸಂಕೇತವಾಗಿದ್ದಿರಲಿಕ್ಕೂ ಸಾಕು!

ADVERTISEMENT

ಲಕ್ಷ್ಮಿಯು ಅರ್ಥದ ಸಾಕಾರ ಎಂದು ನೋಡಿದೆವಷ್ಟೇ. ಹಾಗೆಂದೇ ಅದರ ಬಗೆಬಗೆಯ ರೂಪಗಳನ್ನು ಅವಳು ತಾಳುತ್ತಾಳೆ. ಒಮ್ಮೆ ಸಂತಾನಲಕ್ಷ್ಮಿಯಾಗಿಯೂ, ಮತ್ತೊಮ್ಮೆ ಅದೃಷ್ಟಲಕ್ಷ್ಮಿಯಾಗಿಯೂ, ಮಗದೊಮ್ಮೆ ವಿದ್ಯಾಲಕ್ಷ್ಮಿಯಾಗಿಯೂ, ಐಶ್ವರ್ಯಲಕ್ಷ್ಮೀ, ಗಜಲಕ್ಷ್ಮಿಯೇ ಮೊದಲಾದ ಎಂಟು ರೂಪಗಳಲ್ಲಿಯೂ ಪ್ರಕಟಳಾಗಿ ಜಗಚ್ಚಕ್ರವನ್ನು ಮುನ್ನಡೆಸುತ್ತಾಳೆ.

ಇಂಥ ದೇವಿಯನ್ನು ನಾವು ದೀಪಾವಳಿಯ ಹೊತ್ತಿನಲ್ಲಿ ಮನೆಗೆ ಬರಮಾಡಿಕೊಂಡು ಪೂಜಿಸುತ್ತೇವೆ. ಭಾರತದ ಉತ್ತರದ ದೇಶಗಳಲ್ಲಿ ತ್ರಯೋದಶಿಯಂದೇ ‘ಧನತ್ರಯೋದಶಿ’ ಅಥವಾ ‘ಧನ್ ತೆರಾಸ್’ ಎನ್ನುವುದಾಗಿ ಆಚರಿಸಲ್ಪಡುತ್ತದೆ, ಈ ಉತ್ಸವ. ಅಂದು ಲಕ್ಷ್ಮಿಯನ್ಮು ಆವಾಹಿಸಿ ಪೂಜೆಗೈದು ಮನೆಮನೆಗೆ ಸಿಹಿಯನ್ನು ಹಂಚಿ, ಆಪ್ತರೊಂದಿಗೆ ಸೇರಿ ನರ್ತಿಸುವುದೇ ಮೊದಲಾದ ವಿಧಾನಗಳಿಂದ ಉತ್ತರದವರು ಈ ಪರ್ವವನ್ನು ಸಂಭ್ರಮಿಸುತ್ತಾರೆ.

ಇನ್ನು ದಕ್ಷಿಣದವರು ಅಮಾವಾಸ್ಯೆಯಂದು ರಾತ್ರಿಯ ಕಾಲದಲ್ಲಿ ಲಕ್ಷ್ಮಿಯನ್ನು ಬರಮಾಡಿಕೊಳ್ಳುವರು. ತಾವು ಸಂಪತ್ತು ಎಂದು ಭಾವಿಸುವ ವಸ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸುತ್ತಾರೆ; ಫಲಪುಷ್ಪಾದಿಗಳನ್ನು ನಿವೇದಿಸುತ್ತಾರೆ. ಹತ್ತಿರದ ದೇವಾಲಯಗಳಲ್ಲಿ ಊರಿನವರೆಲ್ಲ ಜೊತೆಸೇರಿ ದೀಪಗಳನ್ನು ಬೆಳಗಿ ತಮ್ಮ ಪಾಲಿನ ಸೇವೆಯನ್ನರ್ಪಿಸಿ ಕೃತಾರ್ಥರಾಗುತ್ತಾರೆ.

ಉತ್ಸವಗಳು ಹೀಗೆ ಪುರುಷಾರ್ಥಗಳ ಸಾಧನೆಯನ್ನು ನೆನಪಿಸಿ ಆ ದಿಶೆಯಲ್ಲಿ ಮನುಷ್ಯರನ್ನು ಪ್ರೇರೇಪಿಸುವ ಶಕ್ತಿಯಾಗಿಯೂ, ಸಮುದಾಯಪ್ರಜ್ಞೆಯನ್ನು ಜಾಗ್ರತಗೊಳಿಸುವ ಸಾಧನಗಳಾಗಿಯೂ ಈ ನೆಲದ ಜನಜೀವನವನ್ನು ಲವಲವಿಕೆಯಿಂದ ತುಂಬಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.