ADVERTISEMENT

ಹಳತು ಹೊಸತು

ಜೀವನ ಸೌಂದರ್ಯ

ರಘು ವಿ
Published 3 ಜನವರಿ 2020, 19:45 IST
Last Updated 3 ಜನವರಿ 2020, 19:45 IST
   

ಬದುಕು ಆಗಾಗ ಮಗ್ಗುಲು ಬದಲಿಸುತ್ತದೆ. ಹಗಲು ಇರುಳಾಗುತ್ತದೆ. ಮಾಸ ವರ್ಷವಾಗುತ್ತದೆ. ವರ್ಷ ಹೊಸ ವರ್ಷವಾಗುತ್ತದೆ. ಚಳಿಗಾಲದಲ್ಲಿ ಮರಗಳು ಬೆತ್ತಲಾಗುತ್ತವೆ. ಬೇಸಗೆಯಲ್ಲಿ ಪಲ್ಲವಿಸಿ ಮಳೆಗಾಲದಲ್ಲಿ ಮೈದುಂಬಿಗೊಳ್ಳುತ್ತವೆ. ಹರಿವುದೆಲ್ಲವೂ ಬದಲಾಗಬೇಕು. ಬದಲಾವಣೆ ಜಗದ ನಿಯಮ. ಹಳೆಯದು ಕಳೆದು ಹೊಸತು ಮೈದಾಳಬೇಕು. ಭೂಮಿ ಕೂಡ ತಿರುಗುತ್ತಿದೆ ಅದರಿಂದಲೇ ಋತುಗಳ ಬದಲಾವಣೆ. ಪ್ರಕೃತಿಯಲ್ಲಂತೂ ಇದರ ಸ್ಪಷ್ಟ ಬೋಧನೆಯಿದೆ.

ಕಳೆದ ವಾರ ಊರ ಹೊರಗೆ ಲಾಂಗ್ ಡ್ರೈವ್ ಹೋಗಿದ್ದೆ. ಅಲ್ಲೊಂದು ತೋಟದಲ್ಲಿ ಎಲೆಗಳನ್ನೆಲ್ಲ ಪೂರ್ಣವಾಗಿ ಕಳಚಿ ನಿಂತ ಮರಗಳು ನವ್ಯಕಲೆಯನ್ನೇ ಮೂಡಿಸಿಬಿಟ್ಟಿದ್ದವು. ಅನೇಕ ಎತ್ತರ ಆಕಾರಗಳ ಆ ವೃಕ್ಷಸಮೂಹ ಮಧ್ಯದಲ್ಲಿ ಒಂದು ಹೆಮ್ಮರವೂ ಬೋಳಾಗಿ ನಿಂತಿತ್ತು; ಎಲ್ಲ ಭಾವಗಳನ್ನು ಕಳಚಿ ನಿಂತ ಗೊಮ್ಮಟನಂತೆ! ನದಿಯೂ ಕೂಡ ನಿತ್ಯನೂತನವೇ. ನೆನ್ನೆಯ ನೀರು ಸಾಗರ ಸೇರಿ ಈಗ ಹೊಸ ಜಲವೇ ಹರಿಯುತ್ತಿದೆ. ಹೊಸತು ಬೇಕೆಂದರೆ ಹಳತನ್ನು ಕಳೆದುಕೊಳ್ಳಲೇಬೇಕು. ತೆಂಗಿನ ಮರವನ್ನು ಗಮನಿಸಿ. ಅದರ ಕಾಂಡದ ಕಲೆಗಳನ್ನು ಗುರುತಿಸಿ ಆ ವಕ್ರರೇಖೆಗಳೆಲ್ಲ ಕಳಚಿಬಿದ್ದ ಗರಿಗಳು; ಬಿದ್ದುದರ ಸಹಿ. ತಲೆಕೆದರಿದ ಎತ್ತರದ ಆ ಮರದ ಮೈಯ ಗರಿಗಳೆಲ್ಲ ಉಳಿದಿದ್ದರೆ ಅದರ ಶಿರ ಆ ಎತ್ತರ ತಲಪುತ್ತಿತ್ತೆ? ಖಂಡಿತ ಇಲ್ಲ. ಹಳೆಯ ಗರಿಗಳನ್ನು ಕಿತ್ತು ಹಾಕದ ಹಕ್ಕಿ ಹೊಸ ರೆಕ್ಕೆ-ಪುಕ್ಕಗಳನ್ನು ಹೊಂದುವುದೂ ಇಲ್ಲ, ಎತ್ತರಕ್ಕೆ ಹಾರುವುದೂ ಇಲ್ಲ.

ಮನುಷ್ಯನಿಗೆ, ಅವನ ಅಂತರಂಗಕ್ಕೆ ಕೂಡ ಹಳತು-ಹೊಸತರ ಸಂಕ್ರಮಣ ನಿರಂತರ. ದೇಹದಲ್ಲಿ ನಿತ್ಯ ಲಕ್ಷ ಲಕ್ಷ ಜೀವಕೋಶಗಳು ಸಾಯುತ್ತವೆ, ಹೊಸ ಜೀವಕೋಶಗಳು ಹುಟ್ಟುತ್ತವೆ - ಹಾವು ಪೊರೆ ಕಳಚಿದಂತೆ. ಹೊಸಿಲು ದಾಟಲು ಕಷ್ಟ ಪಡುವ ಮಗು ಮುಂದೊಮ್ಮೆ ಎತ್ತರ ಜಿಗಿತದಲ್ಲಿ ವಿಶ್ವದಾಖಲೆಯನ್ನು ನಿರ್ಮಿಸುತ್ತದೆ. ನಾಳೆಗೆ ನೆನ್ನೆಯೇ ಬಂಡವಾಳ. ಅದಕ್ಕಾಗಿ ನಾವು ಇಂದಿನ ಪೊರೆ ಕಳಚಬೇಕು. ಹಾಗೇ ಜಡ್ಡುಗಟ್ಟಿದ ನಮ್ಮ ಚಿಂತನೆಗಳನ್ನೂ ಜಾರಿಸಿಬಿಡಬೇಕು.

ADVERTISEMENT

ಲೆಬನಾನಿನ ಕವಿ, ಚಿಂತಕ ಗಿಬ್ರಾನ್ ತನ್ನ ಕೋಣೆಯ ಬಾಗಿಲ ಮೇಲೆ ಹೀಗೆ ಬರೆದಿದ್ದನಂತೆ: ‘ಒಳಗೆ ಬರುವ ಮುನ್ನ ನಿಮ್ಮ ಸಂಪ್ರದಾಯಗಳನ್ನು, ಪಾದರಕ್ಷೆಗಳನ್ನು ಕಳಚಿಟ್ಟು ಬನ್ನಿ.’ ಹಳತು ಹಳಸಿ ಹುಳಿಯಾಗಿ ಪ್ರತಿಬಂಧಕವಾಗುತ್ತದೆ, ನೇತ್ಯಾತ್ಮಕ ಚಿಂತನೆಯಾಗುತ್ತದೆ. ಇದಕ್ಕೆ ಪೂರ್ವಗ್ರಹಪೀಡಿತ ಮನಸ್ಸೇ ಪಾತ್ರೆ. ಆದುದರಿಂದ ಆಗಾಗ ಅದನ್ನು ಚೆಲ್ಲಿ, ತೊಳೆದು ಹೊಸ ಆಲೋಚನೆಗಳನ್ನು ತುಂಬಿಕೊಳ್ಳಬೇಕು. ಹಳೆಯ ಬೇರಿನಿಂದ ಹೊಸ ಚಿಗುರನ್ನು ಪಡೆಯುವಂತೆ, ನಮ್ಮ ಉಪಕರಣಗಳನ್ನು ಹರಿತಗೊಳಿಸುವಂತೆ ಅದೇ ಹಳೆಯ ಮನಸ್ಸನ್ನು ಶುದ್ಧೀಕರಿಸಿ ನೂತನ ಚಿಂತನೆಗಳಿಗೆ ದಾರಿ ಮಾಡಿಕೊಡಬೇಕು.

ಪ್ರಗತಿ ಎಂಬುದು ಯಾವಾಗಲೂ ಚಲನಶೀಲವೇ. ಹಿಂದಿನಿಂದ ಮುಂದಕ್ಕೆ, ಹಳೆಯದರಿಂದ ಹೊಸದಕ್ಕೆ ಇಡುವ ಹೆಜ್ಜೆಯದು. ನಿಂತರೆ ಪಾಚಿ ಕಟ್ಟುತ್ತದೆ. ಕೊಳೆಯಾಗುತ್ತದೆ, ಕೊಳೆತುಹೋಗುತ್ತದೆ. ಬದುಕಿನ ಮೆರವಣಿಗೆ ನಡೆಯುತ್ತಲೇ ಇರಬೇಕು. ನಿಂತಲ್ಲೇ ತಿರುಗಿದರೆ ಬುಗುರಿಯಂತೆ ಉರುಳಿಹೋಗುತ್ತೇವೆ. ಕಣ್ಣರಳಸಿ, ಕಿವಿ ನಿಮಿರಿಸಿ ಮನ ತೆರೆದು ಹೊಸ ಚಿಂತನೆಗಳಿಗೆ ಸ್ವಾಗತ ಕೋರೋಣ. ಹೊಸ ವರ್ಷ, ಹೊಸ ಬದುಕು ನಮ್ಮದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.