ಭಾರತೀಯ ದರ್ಶನಗಳನ್ನು ಆಸ್ತಿಕ-ನಾಸ್ತಿಕ ಎಂದು ಎರಡು ವಿಧವಾಗಿ ವಿಭಾಗಿಸುತ್ತಾರೆ. ವೇದ ವೇದಾಂಗ ಪುರಾಣ ಸ್ಮೃತಿ ಮುಂತಾದ ಗ್ರಂಥಗಳನ್ನು ಪ್ರಮಾಣವೆಂದು ಒಪ್ಪುವವರು ಆಸ್ತಿಕರಾದರೆ, ಇವುಗಳನ್ನು ಸಂಶಯಿಸುವವರು ನಾಸ್ತಿಕರೆನ್ನಬಹುದು. ಆಸ್ತಿಕರಲ್ಲಿಯೂ ಸಂಶಯಿಸುವ ಜನರು ಇರುವಂತೆ, ನಾಸ್ತಿಕರಲ್ಲಿಯೂ ನಂಬುವ ಜನರು ಇರುವ ಕಾರಣ, ದರ್ಶನಗಳನ್ನು ವಿಭಾಗಿಸಿದಂತೆ ಜನರನ್ನು ಬೇರೆಯಾಗಿ ನೋಡಲು ಸಾಧ್ಯವಾಗುವುದಿಲ್ಲ. ಇವರಿಬ್ಬರಿಗೂ ಜನನ-ಮರಣ, ಹಗಲು-ರಾತ್ರಿ, ಸುಖ-ದುಃಖ ಮುಂತಾದ ದ್ವಂದ್ವಗಳು ಸಮಾನವಾಗಿವೆ.
ಚಾರ್ವಾಕ ಎಂಬ ನಾಸ್ತಿಕನು ಆಸ್ತಿಕರಿಗೆ ಒಂದು ಗಮನಾರ್ಹವಾದ ಪ್ರಶ್ನೆಯನ್ನು ಕೇಳುತ್ತಾನೆ: ‘ಗತಿಸಿದ ಪೂರ್ವಜರು ಸ್ವರ್ಗಕ್ಕೆ ಹೋದ ಮೇಲೆ, ನಮ್ಮನ್ನು ಕಾಣಬೇಕೆಂಬ ಬಯಕೆ ಅವರಲ್ಲಿ ಯಾರಿಗೂ ಬರುವುದೇ ಇಲ್ಲವೇ? ಒಂದು ವೇಳೆ ಅಂತಹ ಆಸೆ ಯಾರಿಗೂ ಬಾರದಿದ್ದರೂ ನಮ್ಮ ತಾಯಿ ಅಜ್ಜಿ ಮುಂತಾದ ಮಮತೆಯೇ ಮೂರ್ತಿವೆತ್ತಂತೆ ಬಾಳಿದವರಿಗೂ ಅದು ಬಾರದಿದ್ದೀತೇ? ಖಂಡಿತವಾಗಿಯೂ ಇಲ್ಲ. ಈ ಕಾರಣದಿಂದಲೇ ನಾವು ಸತ್ತ ಮೇಲೆ ಅವರೆಲ್ಲಾ ಇರುವ ಸಂಭವವೇ ಇಲ್ಲ. ಅವರು ಯಾರಿಗೂ ಕಾಣದಂತೆ ಎಲ್ಲಿಯೋ ಇರುತ್ತಾರೆ ಎಂಬಲ್ಲಿ ಪ್ರಮಾಣವಾದರೂ ಏನು?’
ಇದಕ್ಕೆ ಪ್ರತಿಯಾಗಿ ಆಸ್ತಿಕರು ಹೀಗೆ ಹೇಳಬಹುದು: ‘ಪೂರ್ವಜರು ಅವರ ಕರ್ಮಫಲವನ್ನು ಅನುಸರಿಸಿ ಬೇರೆಯ ಲೋಕದಲ್ಲಿಯೋ ಬೇರೆಯ ಶರೀರದಲ್ಲಿಯೋ ಇರುತ್ತಾರೆ. ನಮ್ಮನ್ನು ಕಾಣಲು ಅವರು ಬಂದರೂ ನಮಗೆ ಕಾಣುವುದಿಲ್ಲ. ಹಾಗೆ ಕಾಣದಿರುವ ಕಾರಣಕ್ಕೆ ಅವರು ಇಲ್ಲವೆನ್ನಲಾಗದು. ನಮ್ಮ ಸ್ಮೃತಿಪಟಲದಲ್ಲಿ ಅವರಿಗೆ ಎಂದೆಂದಿಗೂ ಸ್ಥಾನವಿದ್ದೇ ಇದೆ. ಅವರು ನಮ್ಮನ್ನು ಕಾಣಲು ಬರುವರೆಂದೂ ಅವರನ್ನು ನಾವು ಸರಿಯಾಗಿ ಉಪಚರಿಸಿದರೆ ನಮ್ಮನ್ನು ಆಶೀರ್ವದಿಸುವರೆಂದೂ ಶಾಸ್ತ್ರಗಳಲ್ಲಿ ಹೇಳಿದೆ. ಅದರಿಂದಾಗಿ ಸುಖ-ಸಮೃದ್ಧಿಗಳನ್ನು ಪಡೆದವರು ಎಷ್ಟೋ ಜನರಿದ್ದಾರೆ.
ಪೂರ್ವಜರು ನಮ್ಮನ್ನು ಕಾಣಲು ಯಾವಾಗ ಬರುತ್ತಾರೆ? ನಾವು ಕರೆದರೆ ಖಂಡಿತವಾಗಿಯೂ ಅವರು ಬರುತ್ತಾರೆ. ನಾವು ಕರೆಯದಿದ್ದರೂ ವರ್ಷಕ್ಕೊಮ್ಮೆ ಅವರು ಬಂದೇ ಬರುತ್ತಾರೆ. ದೇವತೆಗಳಾಗಲಿ, ದೇವತೆಗಳಂತಿರುವ ಪೂರ್ವಜರಾಗಲಿ ಅವರವರ ಸಮಯವನ್ನು ಅನುಸರಿಸಿಯೇ ವ್ಯವಹರಿಸುತ್ತಾರೆ. ದೇವತೆಗಳು ಆಯಾ ಹಬ್ಬಗಳಲ್ಲಿ ಆಗಮಿಸಿದರೆ, ಪಿತೃಗಳೆಂಬ ಪೂರ್ವಜರು ಶ್ರಾದ್ಧ ಮಹಾಲಯ ವಿವಾಹ ಮುಂತಾದ ಸಂದರ್ಭಗಳಲ್ಲಿ ಉಪಸ್ಥಿತರಾಗುತ್ತಾರೆ.
ವರ್ಷಕ್ಕೊಮ್ಮೆ ಪೂರ್ವಜರೆಲ್ಲರೂ ಒಟ್ಟಿಗೆ ಬರುವುದುಂಟು. ಅದನ್ನು ನಾವು ‘ಪಿತೃಪಕ್ಷ’ ಎಂದು ಕರೆಯುತ್ತೇವೆ. ಆ ಸಮಯದಲ್ಲಿ ನಾವು ಎಚ್ಚರದಿಂದ ಇದ್ದು ಆಗಮಿಸಿದ ಪೂರ್ವಜರೆಲ್ಲರಿಗೆ ಸಮುಚಿತವಾದ ಉಪಚಾರಗಳನ್ನು ಸಲ್ಲಿಸಿದರೆ ಅವರು ಪ್ರಸನ್ನರಾಗಿ ನಮ್ಮನ್ನು ಹರಸುತ್ತಾರೆ. ಅದಲ್ಲದಿದ್ದರೆ ಸಂಸ್ಕೃತಿಯನ್ನು ಸಂರಕ್ಷಿಸದೆ ಭೂಮಿಗೆ ಭಾರವಾಗಿರುವ ಭಾರತೀಯರಲ್ಲಿ ಸೇರಿಸಿ ತಿರಸ್ಕಾರದಿಂದ ಶಪಿಸುತ್ತಾರೆ.
ನಮ್ಮ ಪೂರ್ವಜರು ನಮ್ಮನ್ನು ಶಪಿಸುತ್ತಾರೆ ಎಂದು ಹೇಳಿರುವುದು ಖಂಡಿತವಾಗಿಯೂ ಅವರು ಹಾಗೆ ಮಾಡುತ್ತಾರೆ ಎಂದರ್ಥವಲ್ಲ. ವೇದ–ಪುರಾಣಗಳಿಗೆ ಅವುಗಳದೇ ಆದ ಒಂದು ಶೈಲಿಯಿದೆ. ನಮ್ಮ ಗುರುಹಿರಿಯರು ಬಯ್ಗಳದ ಚಿತ್ರ–ವಿಚಿತ್ರವಾದ ಪದಗಳನ್ನು ಉಪಯೋಗಿಸುವುದು ಅದರ ವಾಚ್ಯಾರ್ಥದಲ್ಲಲ್ಲ. ಅದರಂತೆ ಇಲ್ಲಿಯೂ ಪೂರ್ವಜರ ಶಾಪ ಎಂಬುದು ಶಾಪವಲ್ಲ; ಅದು ಕರ್ತವ್ಯವನ್ನು ಬಿಡಬಾರದು ಎಂಬುದರ ಖಡಾ ಖಂಡಿತ ಸೂಚನೆ.
ಸಂಯೋಗ ವಿಪ್ರಯೋಗಗಳೆರಡೂ ವಿಧಿಯ ಅಪರಿಹಾರ್ಯವಾದ ನಿಯಮಗಳು. ಅವುಗಳನ್ನು ನಾವು ಸ್ವಾಗತಿಸದೆ ಬೇರೆಯ ವಿಧಿಯಿಲ್ಲ. ಸಂಯೋಗದ ಸಮಯದಲ್ಲಿ ನಾವು ಬೆಳೆಸಿಕೊಂಡಿರುವ ಗೌರವ, ವಿಶ್ವಾಸ ಮತ್ತು ಪ್ರೀತಿಗಳನ್ನು ವಿಯೋಗದಲ್ಲಿ ಇಟ್ಟುಕೊಳ್ಳುವುದನ್ನು ಸಂಸ್ಕೃತಿಯೆನ್ನಬಹುದು. ಹಾಗೆಂದು ಅದನ್ನೇ ಮಾಡುತ್ತಾ ಕುಳಿತುಕೊಳ್ಳುವುದೂ ಉಚಿತವಾಗಲಾರದು. ಅದಕ್ಕಾಗಿಯೇ ಸಮಯೋಚಿತವಾದ ವ್ಯವಸ್ಥೆಯನ್ನು ಶಾಸ್ತ್ರಗಳು ಸೂಚಿಸುತ್ತವೆ. ಒಂದೊಂದು ದಿನದಲ್ಲಿಯೂ ಕಾಲವನ್ನು ಅನುಸರಿಸಿ ನಾವು ಅನೇಕ ಕರ್ತವ್ಯಗಳನ್ನು ಮಾಡಬೇಕಾಗುತ್ತದೆ. ಅವುಗಳಲ್ಲಿ ಪಿತೃತರ್ಪಣವೂ ಸೇರಿದೆ.
ಹೀಗೆ ಪ್ರತಿದಿನವೂ ತರ್ಪಣ ಮುಂತಾದವುಗಳಿದ್ದರೂ ಪಿತೃಗಳ ವಿಶೇಷವಾದ ಸಾನ್ನಿಧ್ಯವಿರುವುದು ಮಹಾಲಯದ ದಿನಗಳಲ್ಲಿ. ಅದು ಬರುವುದು ವರ್ಷದ ಮಧ್ಯ ಎನ್ನಬಹುದಾದ 15 ದಿನಗಳಲ್ಲಿ. ಚಂದ್ರನು ಸೂರ್ಯನಿಂದ ಗರಿಷ್ಠ ದೂರದಲ್ಲಿರುವುದು ಹುಣ್ಣಿಮೆಯಾದರೆ, ಸೂರ್ಯ-ಚಂದ್ರರು ಜೊತೆಗೆ ಕಾಣುವ ತಿಥಿಯೇ ಅಮಾವಾಸ್ಯೆ. ಒಂದು ವರ್ಷದಲ್ಲಿ ಹನ್ನೆರಡು ಅಮಾವಾಸ್ಯೆಗಳಿರುತ್ತವೆ. ಅವುಗಳಲ್ಲಿ ಭಾದ್ರಪದ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆಯೆನ್ನುತ್ತಾರೆ. ಸಾಮಾನ್ಯವಾಗಿ ಎಲ್ಲ ಅಮಾವಾಸ್ಯೆಗಳೂ ಗತಿಸಿದ ಪೂರ್ವಜರ ಸ್ಮರಣೆಗಾಗಿಯೇ ಇದ್ದರೂ, ಮಹಾಲಯ ಅಮಾವಾಸ್ಯೆ ಅವುಗಳಲ್ಲೆಲ್ಲಾ ಶ್ರೇಷ್ಠವಾದುದು ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಮಹಾಲಯ ಅಮಾವಾಸ್ಯೆಯನ್ನು ಒಂದು ಬಗೆಯ ಸಮಾರೋಪ ಸಮಾರಂಭವೆನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.