ಭಗವಾನ್ ಮಹಾವೀರರು ಅಹಿಂಸಾಧರ್ಮದ ಪ್ರವರ್ತಕರು. ಕುಂಡಲಪುರದ ಗಣರಾಜ ಸಿದ್ಧಾರ್ಥ ಹಾಗೂ ತ್ರಿಶಲಾದೇವಿಯ ಪುತ್ರನಾಗಿ ಜನಿಸಿದ ಮಹಾವೀರರಿಗೆ ಸನ್ಮತಿ, ವರ್ಧಮಾನ, ವೀರ ಮುಂತಾದ ಹೆಸರುಗಳಿವೆ; ಇವರ ಕಾಲ ಸು. ಕ್ರಿ. ಪೂ. 6ನೇ ಶತಮಾನ. ರಾಜಪುತ್ರನಾಗಿ ಹುಟ್ಟಿದರೂ ಜನರ ಕಲ್ಯಾಣಕ್ಕಾಗಿ ರಾಜತ್ವವನ್ನೂ ಸಂಸಾರವನ್ನೂ ತ್ಯಾಗಮಾಡಿ ಸಾಮಾನ್ಯ ಜೀವನವನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಆದರೆ ಮಹಾವೀರರು ಅಂತಹ ಕಠಿಣ ಮಾರ್ಗವನ್ನು ತಮ್ಮ ಬದುಕಿನಲ್ಲಿ ಆಯ್ದುಕೊಂಡರು. ತಮ್ಮ ಕಠೋರ ಸಂಯಮದಿಂದ ತಪಸ್ಸು ಮಾಡಿದರು. ತಪಸ್ಸಿನ ಮಧ್ಯೆ ಬಂದ ಅನೇಕ ಕಷ್ಟನಷ್ಟಗಳನ್ನು, ನೋವು-ಹಿಂಸೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡರು. ತಮ್ಮ ಮನಸ್ಸಿನಲ್ಲಿ ಮೂಡಿದ ಅನೇಕ ತಾಕಲಾಟಗಳನ್ನು, ದ್ವಂದ್ವಗಳನ್ನು ಸಂಯಮದಿಂದ ನಿಗ್ರಹಿಸಿದರು. ತಮ್ಮ ಅನೇಕ ಪ್ರಶ್ನೆಗಳಿಗೆ ತಾವೇ ಉತ್ತರವನ್ನು ಕಂಡುಕೊಂಡರು.
ತಾವು ಕಂಡುಕೊಂಡ ಸತ್ಯವನ್ನು ಸಂಸಾರದಲ್ಲಿನ ಸಾಮಾನ್ಯ ಜನರಿಗೆ ಮುಟ್ಟಿಸಲು ಜನಸಾಮಾನ್ಯರ ಭಾಷೆಯಾದ ಅರ್ಧಮಾಗಧಿಯಲ್ಲಿ ಉಪದೇಶ ಮಾಡಿದರು. ಅಹಿಂಸೆ, ಅಪರಿಗ್ರಹ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಎಂಬ ಐದು ವ್ರತಗಳ ಅನುಷ್ಠಾನದ ಅಡಿಪಾಯ ಹಾಕಿದರು. ‘ನೀನೂ ಜೀವಿಸು, ಇತರರಿಗೂ ಜೀವಿಸಲು ಅವಕಾಶ ನೀಡು, ಸತ್ಯವನ್ನೇ ನುಡಿ, ಕಳ್ಳತನ ಮಾಡಬೇಡ, ಸುಳ್ಳು ಹೇಳಬೇಡ, ಪರಿಗ್ರಹ ಬಿಡು, ಪರಿಶುದ್ಧವಾದ ಬ್ರಹ್ಮಚರ್ಯವನ್ನು ಪಾಲಿಸು. ಈ ವ್ರತಗಳ ಪಾಲನೆ ಮಾಡುವುದು ಸುಲಭ ಸಾಧ್ಯವಲ್ಲ. ಆದರೆ ಒಮ್ಮೆ ಇಂತಹ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಅದು ಅಂತರಂಗ-ಬಹಿರಂಗಶುದ್ಧಿಗಳಿಗೆ ಸಾಧನವೇ ಹೌದು’ ಎಂದು ಮಾರ್ಗದರ್ಶನ ಮಾಡಿದರು.
‘ಅಹಿಂಸೆಯೇ ಪರಮ ಧರ್ಮ’ ಎಂಬುದನ್ನು ದಿವ್ಯಮಂತ್ರವನ್ನಾಗಿಸಿಕೊಳ್ಳಬೇಕು. ಅದನ್ನು ಒಂದು ವ್ರತದಂತೆ ಪಾಲಿಸಬೇಕು – ಎಂಬುದು ಮಹಾವೀರರ ಉಪದೇಶದ ಕೇಂದ್ರಬಿಂದು. ‘ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯೂ ನೋವನ್ನು ಬಯಸುವುದಿಲ್ಲ. ಹೀಗಾಗಿ ಜೀವನದ ಅತ್ಯುನ್ನತ ಗುರಿಯು ಇತರ ಜೀವಿಗಳಲ್ಲಿನ ಜೀವನವನ್ನು ಗೌರವಿಸಿ, ರಕ್ಷಿಸುವುದೇ ಆಗಿದೆ’ ಎಂದರು. ಮಹಾವೀರರ ಪ್ರಕಾರ, ಜೀವನದ ಪಾಪಗಳನ್ನು ಪೂಜೆ ಅಥವಾ ಪ್ರಾರ್ಥನೆಗಳಿಂದ ತೊಳೆಯಲಾಗುವುದಿಲ್ಲ. ನಮ್ಮ ಸದ್ಗುಣಶೀಲ ನಡವಳಿಕೆಗಳಿಂದ ಮಾತ್ರವೇ ಪಾಪಗಳನ್ನು ತಪ್ಪಿಸಬಹುದು ಎಂದು ಘೋಷಿಸಿದರು.
ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರಗಳನ್ನು ಪಾಲಿಸಬೇಕು ಎಂದು ಮಹಾವೀರರು ಉಪದೇಶಿಸಿದರು. ಸರಿಯಾದ ನೋಟ ನಮಗೆ ಸರಿಯಾದ ಜ್ಞಾನವನ್ನು ನೀಡುತ್ತದೆ. ಸರಿಯಾದ ಜ್ಞಾನವು ನಮ್ಮನ್ನು ಸರಿಯಾದ ಕ್ರಿಯೆಯ ಕಡೆಗೆ ಪ್ರರೇಪಿಸುತ್ತದೆ. ದುರಾಚರಣೆಯನ್ನು ತೊರೆದು ಸದಾಚಾರಿಯಾಗುವುದೇ ಸಮ್ಯಕ್ ಚಾರಿತ್ರದ ನಿಲುವು. ಈ ಮೂರು ರತ್ನಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಳ್ಳುವುದೇ ಜೀವನದ ಗುರಿ ಎಂಬುದು ಮಹಾವೀರರ ಉಪದೇಶದ ಸಾರ.
ಮಹಾವೀರರು ಮನುಷ್ಯನ ಸರಿಯಾದ ನಡವಳಿಕೆಗಳಿಗೆ ಹೆಚ್ಚು ಒತ್ತು ನೀಡಿದರು. ಮನುಷ್ಯರು ಎರಡು ದೌರ್ಬಲ್ಯಗಳನ್ನು ಜಯಿಸಬೇಕೆಂದು ಅವರು ಪ್ರತಿಪಾದಿಸಿದರು. ಅವುಗಳೆಂದರೆ ಮೋಹ ಮತ್ತು ತಿರಸ್ಕಾರ. ಮೋಹವು ಸ್ವಾರ್ಥ ಹಾಗೂ ದುರಾಸೆಗೆ ಕಾರಣವಾದರೆ, ತಿರಸ್ಕಾರವು ದ್ವೇಷ ಮತ್ತು ಕೋಪಕ್ಕೆ ಕಾರಣವಾಗುತ್ತದೆ. ಇವೆರಡರಿಂದಲೂ ಬಿಡುಗಡೆಯನ್ನು ಪಡೆದಾಗ ಮಾತ್ರ ಮಾನವೀಯತೆ ನೆಲಸಲು ಸಾಧ್ಯ ಎಂಬುದು ಅವರ ನಿಲವು. ಮನುಷ್ಯನು ಜೀವನದ ಪರಮಸತ್ಯವನ್ನು ಅರಿತುಕೊಳ್ಳಬೇಕು. ಅದರ ಸಾಕ್ಷಾತ್ಕಾರಕ್ಕಾಗಿ ತಪಸ್ಸು, ನೈತಿಕತೆ, ಶುದ್ಧತೆ ಮತ್ತು ಸದ್ಗುಣಗಳಿಂದ ಜೀವನವನ್ನು ನಡೆಸಬೇಕು’ ಎಂದು ಅವರ ಜೀವನಸಾರ್ಥಕತೆಯ ಬೆಳಕನ್ನು ಕಾಣಿಸಿದರು. ‘ನೀನೂ ಬದುಕು, ಇತರರನ್ನೂ ಬದುಕಲು ಬಿಡು’ ಎಂಬುದು ಅವರ ಜೀವನಸಂದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.