ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಹಣವೇ ಸರ್ವಸ್ವವಲ್ಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 25 ಡಿಸೆಂಬರ್ 2020, 20:28 IST
Last Updated 25 ಡಿಸೆಂಬರ್ 2020, 20:28 IST
   

ಇದೊಂದು ವಿಚಿತ್ರ. ಆದರೆ ಅಪ್ಪಟ ಸತ್ಯ. ಮನುಷ್ಯ ಬುದ್ಧಿವಂತನಾದಷ್ಟೂ ಲೋಕಕ್ಕೆ ಅಪಾಯ. ಏಕೆಂದರೆ ದಡ್ಡ ಮನುಷ್ಯರಿಗಿಂತ ಬುದ್ಧಿವಂತ ಮನುಷ್ಯರಿಂದಲೇ ಜಗತ್ತಿಗೆ ಕಂಟಕವಾಗುತ್ತಿದೆ. ಹಾಗಂತ, ಮನುಷ್ಯನ ಬುದ್ಧಿಗೆ ನಿಯಂತ್ರಣ ಹಾಕಿದರೆ, ಅವನ ದುಷ್ಟಬುದ್ಧಿ ನಿವಾರಣೆಯಾಗುತ್ತೆ ಎಂದು ಭಾವಿಸುವಾಗಿಯೂ ಇಲ್ಲ. ಏಕೆಂದರೆ ಮನುಷ್ಯನ ಬುದ್ಧಿಯ ಬೆಳವಣಿಗೆಗೂ, ಅವನ ಕೊಂಕುಬುದ್ಧಿಗಳಿಗೂ ಸಂಬಂಧವೇ ಇಲ್ಲ. ಮನುಷ್ಯನ ವಿಕಾಸದತ್ತ ಮನಸ್ಸು ವಿಕಾರದತ್ತ ಹೊರಳುತ್ತಿದೆ.

ಮನುಷ್ಯನ ಇಂಥ ಮನಃಸ್ಥಿತಿಗೆ ವಿದ್ರಾವಕ ಯೋಚನೆಗಳೇ ಕಾರಣ. ಉತ್ತಮ ಆಲೋಚನೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದೆಂಬ ವಿವೇಕವನ್ನು ಆತ ಕಳೆದುಕೊಂಡು ಬಹಳ ಕಾಲವಾಗಿದೆ. ಆಧುನಿಕ ಶಿಕ್ಷಣ ಮತ್ತು ವ್ಯಾವಹಾರಿಕ ಜೀವನ ಅವನ ಮನಸ್ಸನ್ನು ಕಲುಷಿತಗೊಳಿಸಿದೆ. ಇದರಿಂದಾಗಿ ಕೌಟುಂಬಿಕವಾಗಿ, ಸಾಮಾಜಿಕವಾಗಿ, ವಿಶ್ವಾತ್ಮಕವಾಗಿ ದುರ್ಬಲನಾಗಿದ್ದಾನೆ. ವಿಜ್ಞಾನಿ, ವೈದ್ಯ, ಇಂಜಿನಿಯರ್, ಪ್ರೊಫೆಸರ್ ಆಗಿದ್ದರೂ ಸ್ವಭಾವತಃ ಒಳ್ಳೆಯ ಗುಣವುಳ್ಳವರಾಗಿರುವುದಿಲ್ಲ. ಹೆತ್ತವರ ಕನಿಷ್ಠ ಆವಶ್ಯಕತೆ ಪೂರೈಸುವ ಹೊಣೆಗಾರಿಕೆಯನ್ನೂ ನಿಭಾಯಿಸದ ವಿದ್ಯಾವಂತ ಮಕ್ಕಳನ್ನು ನೋಡಿದಾಗ, ಒಡಹುಟ್ಟಿದವರ ಮೇಲೆ ಸೌಜನ್ಯಕ್ಕೂ ಪ್ರೀತಿ-ವಿಶ್ವಾಸ ತೋರದ ಉನ್ನತ ಅಧಿಕಾರಿಗಳನ್ನು ಕಂಡಾಗ, ಹೆಂಡತಿ-ಮಕ್ಕಳೊಂದಿಗೂ ಸಾಮರಸ್ಯದಿಂದ ಇರದವನ್ನು ಕಂಡಾಗ ಎಲ್ಲೋ ನಮ್ಮ ಸಮಾಜವ್ಯವಸ್ಥೆಯಲ್ಲಿ ದೋಷವಿದೆ ಎಂದೆನಿಸುತ್ತದೆ.

ವಿವೇಕವನ್ನು ಕಲಿಸದ ಶಿಕ್ಷಣವನ್ನ ಶಿಕ್ಷಣವೆನ್ನಲು ಸಾಧ್ಯವಿಲ್ಲ. ಶಿಕ್ಷಣವ್ಯವಸ್ಥೆಯಲ್ಲಿ ಮಕ್ಕಳಿಗೆ ವ್ಯಾಪಾರಿಬುದ್ಧಿ ಕಲಿಸಿದಾಗ ಅಲ್ಲಿ ಒಳ್ಳೆಯ ತಂದೆಗೆ ಒಳ್ಳೆಯ ಮಗನಾಗಿರುವುದಿಲ್ಲ. ಸರ್ವರನ್ನೂ ವ್ಯಾಪಾರದಿಂದ ನೋಡುವ ಮಗನಾಗಿರುತ್ತಾನೆ. ವೈದ್ಯನಾಗಿ ಸ್ಟೆತೊಸ್ಕೋಪ್ ಹಿಡಿದು ರೋಗಿಯ ಹೃದಯದ ಬಡಿತ ಕೇಳುವಾಗಲು, ಅವನ ಕಿವಿಗೆ ಲಬ್-ಡಬ್ ಶಬ್ದ ಕೇಳದೆ ಝಣ್ ಝಣ್ ಎನ್ನುವ ಹಣದ ಝಣತ್ಕಾರದ ಸದ್ದೇ ಕೇಳಬಹುದು. ಇಂಥ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದರೂ, ವಿವೇಕವಂತರ ಸಂಖ್ಯೆ ಕಡಿಮೆಯಾಗುತ್ತದೆ. ಎಲ್ಲೆಡೆ ನೈತಿಕ ಮೌಲ್ಯ ಕುಸಿದು ಅವಿವೇಕತನ ತಾಂಡವವಾಡುತ್ತದೆ. ದುರಾಸೆ ಬುದ್ಧಿಯ ಜನರಿಂದಾಗಿ ಸಮಾಜದ ಎಲ್ಲಾ ಕ್ಷೇತ್ರಗಳೂ ವ್ಯಾಪಾರೀಕರಣವಾಗುತ್ತವೆ. ಪ್ರವಾಸಿಗೆ ದಾರಿ ತೋರಿಸುವುದರಲ್ಲಿ ತನಗೇನೂ ಲಾಭ ಅಂದುಕೊಳ್ಳುವ ಜನ ಹೆಚ್ಚಾದರೆ ಬದುಕು ದುಸ್ತರವಾಗಬಹುದು. ಅಂತಹ ಅಮಾನವೀಯ ಪರಿಸ್ಥಿತಿಗೆ ಜಗತ್ತು ಕಾಲಿಡುತ್ತಿರುವುದು ಗಂಡಾಂತರಕಾರಿ.

ADVERTISEMENT

ದುಡ್ಡಿಲ್ಲದಿದ್ದರೆ ಒಂದು ತೊಟ್ಟು ನೀರು ಕೂಡ ಹುಟ್ಟದಂತಹ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗುತ್ತಿದೆ. ದುಡ್ಡಿನಿಂದಲೇ ಸುಖ-ಸಂತೋಷ ಸಿಗುತ್ತದೆ ಎಂದು ಜನ ಭಾವಿಸುತ್ತಿದ್ದಾರೆ. ದುಡ್ಡಿಗಾಗಿ ಎಂಥ ಕೆಲಸ ಮಾಡಲೂ ಹಿಂಜರಿಯದ ಜನ ಸೃಷ್ಟಿಯಾಗುತ್ತಿದ್ದಾರೆ. ಹೀಗಾಗಿ ಹಣ ಬರುವ ವೃತ್ತಿ ಕಡೆಗೆ ಗಮನ ಹರಿಸುತ್ತಿದ್ದಾರೆ. ಸಕ್ರಮ ಕೆಲಸಗಳಿಗಿಂತ ಅಕ್ರಮ ಕೆಲಸದಲ್ಲಿ ಹೆಚ್ಚು ಸಂಪಾದನೆ ಬರುತ್ತದೆ ಎಂದು ಅಡ್ಡಮಾರ್ಗ ಹಿಡಿಯುತ್ತಿದ್ದಾರೆ. ಇದೆಲ್ಲಾ ನೈತಿಕ ಶಿಕ್ಷಣ ಪಡೆಯದ ಜನರಿಂದಾಗುತ್ತಿರುವ ಅನಾಹುತಕಾರಿ ಬೆಳವಣಿಗೆ. ಹಣದಾಸೆಗಾಗಿ ಮನುಷ್ಯ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವ ಆತ ದುಡ್ಡೇ ದೊಡ್ಡಪ್ಪ ಅಂದುಕೊಂಡಿದ್ದಾನೆ.

ನೈತಿಕತೆ ಕಳೆದುಕೊಂಡ ಮನುಷ್ಯ ಸಮಸ್ಯೆಯ ಗೂಡಾಗುತ್ತಾನೆ. ಆತನಿಗೆ ವಿವೇಕ ಮೂಡಿದಾಗ ಮಾತ್ರ ಮನುಷ್ಯತನ ಸಾಕಾರಗೊಳ್ಳುತ್ತದೆ. ಹುಟ್ಟಿನೊಂದಿಗೆ ಸಾವು ಕಟ್ಟಿಕೊಂಡು ಬಂದಿರುವ ಜೀವಕ್ಕೆ, ಜೀವನ-ಭದ್ರತೆಯ ಸೇತುವೆಯನ್ನು ಸೌಹಾರ್ದತೆಯಿಂದ ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಸೌಹಾರ್ದತೆ ಬೆಳೆಯುವುದು ಹಣದಿಂದಲ್ಲ, ವಿ-ಶ್ವಾಸದಿಂದ. ಅಂಥ ವಿವೇಕದ ಶ್ವಾಸ ಪ್ರತಿಯೊಬ್ಬರ ಎದೆಯಲ್ಲಿ ತುಂಬಿಕೊಂಡಾಗ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಇಂಥ ಆರೋಗ್ಯಕರ ವಾತಾವರಣದಲ್ಲಿ ಬದುಕುವ ವಿವೇಕವಂತರ ಜಗತ್ತು ಸುಂದರವಾಗಿರುತ್ತದೆ. ಹಣವೇ ಸರ್ವಸ್ವವಲ್ಲ, ಮನುಷ್ಯತನವೇ ಶ್ರೇಯಸ್ಕರ ಅಂದುಕೊಂಡವರು ನೆಮ್ಮದಿಯಾಗಿರುತ್ತಾರೆ. ಅವರು ನಿಶ್ಚಿತವಾಗಿ ‘ಸಚ್ಚಿದಾನಂದ’ನ ಕೃಪೆಗೆ ಪಾತ್ರರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.