ADVERTISEMENT

ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು

ಎಸ್.ಸೂರ್ಯಪ್ರಕಾಶ ಪಂಡಿತ್
Published 16 ಏಪ್ರಿಲ್ 2024, 21:05 IST
Last Updated 16 ಏಪ್ರಿಲ್ 2024, 21:05 IST
<div class="paragraphs"><p>ಶ್ರೀರಾಮ</p></div>

ಶ್ರೀರಾಮ

   

ವಾಲ್ಮೀಕಿ ಮಹರ್ಷಿಗಳು ರಾಮನನ್ನು ವರ್ಣಿಸುವಾಗ ಪದೇ ಪದೇ ಹೇಳುವ ಮಾತು: ‘ಸತ್ಯಪರಾಕ್ರಮ’. ಇದು ರಾಮನ ಮಹಾಗುಣಗಳಲ್ಲಿ ಒಂದು. ಶ್ರೀರಾಮನಿಗೆ ಕ್ಷಣಮಾತ್ರದಲ್ಲಿ ಸಾವಿರಾರು ರಾಕ್ಷಸರನ್ನು ಕೊಲ್ಲುವಂಥ ಪರಾಕ್ರಮ ಇದ್ದಿತು, ದಿಟ. ಆದರೆ ಅದಕ್ಕಿಂತಲೂ ವಿಶೇಷವಾಗಿದ್ದುದು ಸತ್ಯವನ್ನು ಎತ್ತಿಹಿಡಿಯುವ ಅವನ ಪರಾಕ್ರಮ. ಮನುಷ್ಯನಾಗಿ ಕಾಣಿಸಿಕೊಂಡ ಅವನಿಗೆ ದೈವತ್ವದ ಪ್ರಭೆ ಒದಗಿದ್ದೇ ಅವನ ಈ ಗುಣದಿಂದ. ಸುಳ್ಳುಗಳ ಅಡಿಪಾಯದಮೇಲೆ ನಮ್ಮ ಜೀವನವನ್ನು ನೆಲೆಗೊಳಿಸಿ
ಕೊಳ್ಳಲು ಹವಣಿಸುತ್ತಿರುತ್ತೇವೆ. ಆದರೆ ಸತ್ಯದ ಆಧಾರದದಿಂದ ಸಾಮಾಜಿಕ ವ್ಯವಸ್ಥೆಯನ್ನೂ, ಕೌಟುಂಬಿಕ ವ್ಯವಸ್ಥೆಯನ್ನೂ ನೆಲೆಗೊಳಿಸಬಹುದೆಂದು ವಿಶ್ವಕ್ಕೆ ತೋರಿಸಿಕೊಟ್ಟ ಧರ್ಮಮೂರ್ತಿ ಶ್ರೀರಾಮ.

ಶ್ರೀರಾಮ ಈಗ ವನವಾಸದಲ್ಲಿದ್ದಾನೆ. ಭರತನೂ ಕಾಡಿಗೆ ಬಂದಿದ್ದಾನೆ, ರಾಮನನ್ನು ಅಯೋಧ್ಯೆಗೆ ಕರೆತರಬೇಕೆಂಬ ಸಂಕಲ್ಪದಿಂದ. ಭರತನು ರಾಜನಾಗಲಿ ಎಂದು ತಾನೆ ರಾಮ ಕಾಡಿಗೆ ಬಂದದ್ದು. ರಾಮನ ಪ್ರಕಾರ ಭರತನೇ ಈಗ ರಾಜನಾಗಿದ್ದಾನೆ. ಹೀಗಾಗಿ ಅವನು ಭರತನಿಗೆ ರಾಜಧರ್ಮವನ್ನು ವಿಶದವಾಗಿ ಉಪದೇಶಿಸು
ತ್ತಾನೆ. ರಾಮಾಯಣದ ಮುಖ್ಯಭಾಗ
ಗಳಲ್ಲಿ ಇದೂ ಒಂದು. ಇಂದು ಸಾಮಾಜಿಕ–ರಾಜಕೀಯ ಕ್ಷೇತ್ರಗಳಲ್ಲಿ ಇರುವವರೆಲ್ಲರೂ ಮನನ ಮಾಡಬೇಕಾದ ಹಲವು ವಿವರಗಳು ಇಲ್ಲಿವೆ: ‘ರಾಷ್ಟ್ರದಲ್ಲಿರುವ ಎಲ್ಲ ಪ್ರಜೆಗಳನ್ನೂ ಧರ್ಮದಿಂದ ರಕ್ಷಿಸುವುದು ರಾಜನ ಕರ್ತವ್ಯ. ನೀನು ಹೀಗೆಯೇ ಪ್ರಜೆಗಳನ್ನು ಕಾಪಾಡುತ್ತಿರುವೆ ತಾನೆ’ ಎಂದು ಪ್ರಶ್ನಿಸುವ ರಾಮ, ಬಳಿಕ ಭರತನಿಗೆ ರಾಜಧರ್ಮದ ಸೂಕ್ಷ್ಮಗಳನ್ನೂ ರೀತಿ–ನೀತಿಗಳನ್ನೂ ಉಪದೇಶಿಸುತ್ತಾನೆ: ‘ಪ್ರತಿದಿನವೂ ಪ್ರಜೆಗಳಿಗೆ ನೀನು ದರ್ಶನವನ್ನು ಕೊಡುತ್ತಿರುವೆ ಅಲ್ಲವೆ? ರಾಜ್ಯದ ಕೋಶ, ಎಂದರೆ ಆದಾಯವು ಅಯೋಗ್ಯ
ರಿಗೋಸ್ಕರ ವಿನಿಯೋಗವಾಗುತ್ತಿಲ್ಲವಷ್ಟೆ? ಅನ್ಯಾಯದ ಆಪಾದನೆಗೆ ತುತ್ತಾಗಿ ಪ್ರಜೆಗಳು ತೊಂದರೆಗೆ ಒಳಗಾಗುವಂತಾಗಬಾರದು. ಪ್ರಜೆಗಳ ಕಣ್ಣೀರು ರಾಜನನ್ನು ನಾಶಮಾಡಿಬಿಡುತ್ತದೆ. ಸಂಪತ್ತಿನ ಸಂಪಾದನೆಯಲ್ಲಿ ಮುಳುಗಿ ಧರ್ಮಕ್ಕೆ ಹಾನಿಯನ್ನು ತಂದುಕೊಳ್ಳಬಾರದು. ಹೀಗೆಯೇ ಧರ್ಮದ ಸಂಪಾದನೆಯೆಂದು ಧನ
ಸಂಪಾದನೆಯಿಂದಲೂ ವಿಮುಖವಾಗಬಾರದು.
ಸುಖದಲ್ಲಿಯೇ ಮುಳುಗಿಹೋಗಿ ಧರ್ಮಾರ್ಥಗಳನ್ನೂ ಮರೆಯಬಾರದು. ಧರ್ಮ, ಅರ್ಥ ಮತ್ತು ಕಾಮಗಳ ಸೇವನೆಯನ್ನು ಯುಕ್ತಕಾಲದಲ್ಲಿ ಹದವರಿತು ಸೇವಿಸಬೇಕು’ ಎನ್ನುತ್ತ, ರಾಜನಲ್ಲಿ ಒದಗಬಹುದಾದ ಹದಿನಾಲ್ಕು ದೋಷಗಳನ್ನು ರಾಮ ಪಟ್ಟಿಮಾಡುತ್ತಾನೆ.

ADVERTISEMENT

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಶ್ರೀರಾಮನ ಕರ್ತವ್ಯಪ್ರಜ್ಞೆ. ಅವನು ತಾನು ವನವಾಸದಲ್ಲಿದ್ದೇನೆ ಎಂದೋ, ತನಗೆ ರಾಜ್ಯ ತಪ್ಪಿಹೋಯಿತು ಎಂದೋ ದುಃಖಿಸುತ್ತ, ಜಗತ್ತ
ನ್ನೆಲ್ಲ ಶಪಿಸುತ್ತ ಕೂರಲಿಲ್ಲ; ಭರತನಿಗೆ ರಾಜಧರ್ಮವನ್ನು ಮೊದಲಿಗೆ ಉಪದೇಶಿಸಿದ. ಆ ಬಳಿಕವಷ್ಟೆ ವೈಯಕ್ತಿಕ ಮಾತುಕತೆಗಳು. ರಾಜನಾದವನು ಸದಾ ಕಾಲ ಪ್ರಜೆಗಳ ಸಂತೋಷದ ಬಗ್ಗೆಯೇ ಚಿಂತಿಸುತ್ತಿರ
ಬೇಕು ಎಂಬುದು ರಾಮನ ನಿಲವು. ಅವನು ತನ್ನ ಸುಖವನ್ನು ಪ್ರಜೆಗಳ ಕ್ಷೇಮಕ್ಕಿಂತಲೂ ದೊಡ್ಡದು ಎಂದೋ, ಮುಖ್ಯ ಎಂದೋ ಎಂದೂ ಗಣಿಸಲಿಲ್ಲ. ಹೀಗಾಗಿಯೇ ರಾಮನಂಥ ರಾಜ ನಮಗೆ ಬೇಕು ಎಂದು ಪ್ರಜೆಗಳು ಬಯಸಿದ್ದು, ಪ್ರಾರ್ಥಿಸಿದ್ದು, ಪೂಜಿಸಿದ್ದು. ಪ್ರಜೆಗಳಿಗೆ ತಮ್ಮ ಮಾತುಗಳಲ್ಲಿ
ಮಾತ್ರ ವೇ ಸ್ವರ್ಗವನ್ನು ತೋರಿಸಿ, ವಂಚಿಸುವ ನಮ್ಮ ರಾಜಕಾರಣಿಗಳು ಅವಶ್ಯವಾಗಿ ರಾಮಾಯಣವನ್ನು ಪಾರಾಯಣ ಮಾಡತಕ್ಕದ್ದು. ಆಗಲಾದರೂ ಅವರಿಗೆ ರಾಜಧರ್ಮದ ಶಕ್ತಿಯೂ ಸೊಗಸೂ ಮನವರಿಕೆಯಾದೀತು; ಪ್ರಜೆಗಳ ಕ್ಷೇಮವನ್ನು ಸ್ಥಾಪಿಸುವುದು ಎಂಥ ಶ್ರೇಷ್ಠ ಕರ್ತವ್ಯ ಎಂದೂ ತಿಳಿದೀತು.

ಸಾವಿರಾರು ವರ್ಷಗಳಿಂದಲೂ ಪ್ರತಿ ವರ್ಷ ಶ್ರೀರಾಮನವಮಿಯನ್ನು ಆಚರಿಸುತ್ತಲೇ ಬರುತ್ತಿದ್ದೇವೆ. ಆದರೆ ಈ ವರ್ಷ ಚುನಾವಣೆಯ ಕಾಲದಲ್ಲಿ ರಾಮನವಮಿ ಬಂದಿದೆ. ಶ್ರೀರಾಮನ ವ್ಯಕ್ತಿತ್ವದ ಕೇಂದ್ರಬಿಂದುವೇ ಧರ್ಮದ ಪಾತಳಿಯ ಮೇಲೆ ಸುಖೀರಾಜ್ಯದ ಸ್ಥಾಪನೆ. ಪುರುಷೋತ್ತಮನಾದ ಶ್ರೀರಾಮನ ಜೀವನ–ದರ್ಶನಗಳ ಶ್ರವಣ, ಮನನ ಮತ್ತು ನಿದಿಧ್ಯಾಸನಗಳಿಗೆ ಪ್ರಸ್ತುತ ಸಮಯಕ್ಕಿಂತಲೂ ಒಳ್ಳೆಯ ಸಮಯ ಒದಗದೆನ್ನಿ. ಅಯೋಧ್ಯಾಕಾಂಡದ ಆರಂಭದಲ್ಲಿಯೇ ವಾಲ್ಮೀಕಿಗಳು ಶ್ರೀರಾಮನ ಗುಣಗಳನ್ನು ವರ್ಣಿಸಿದ್ದಾರೆ. ಶ್ರೇಯಸ್ಕರವಲ್ಲದ ಕೆಲಸಗಳಲ್ಲಿ ರಾಮನಿಗೆ ಸ್ವಲ್ಪವೂ ಆಸಕ್ತಿ ಇರಲಿ ಲ್ಲವಂತೆ; ಮಾತ್ರವಲ್ಲ, ವಿಕೃತ ವಿಷಯಗಳ ಬಗ್ಗೆ ಮಾತನಾಡುವ ಬಯಕೆಯೇ ಅವನಿಗೆ ಇರಲಿ ಲ್ಲವಂತೆ (ನಾಶ್ರೇಯಸಿ ರತೋ ಯಶ್ಚ ನ ವಿರುದ್ಧಕಥಾರುಚಿಃ). ರಾಜಕಾರಣಿಗಳೂ ಅವರ ಅನು ಯಾಯಿಗಳೂ ರಾಮನ ಈ ಗುಣವನ್ನಷ್ಟೆ ಸದ್ಯ ಎತ್ತಿ ಹಿಡಿದರೂ ನಮ್ಮ ಇಂದಿನ ಸಮಾಜ
ಸ್ವರ್ಗಸದೃಶವಾದೀತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.