ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಮುನಿಗಳಿಂದ ಪ್ರಶ್ನೆಗಳ ಸುರಿಮಳೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ಜನವರಿ 2022, 5:47 IST
Last Updated 11 ಜನವರಿ 2022, 5:47 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಪ್ರಯಾಗದಲ್ಲಿ ನಡೆಯುತ್ತಿದ್ದ ಮಹಾಸತ್ರಯಾಗದ ಸ್ಥಳಕ್ಕೆ ಬಂದ ವ್ಯಾಸರ ಪರಮ ಶಿಷ್ಯ ಸೂತಮುನಿಗೆ ಯಾಗದ ಮುನಿಗಳು ಪ್ರಶ್ನೆಗಳ ಸುರಿಮಳೆಗಳನ್ನೇ ಸುರಿಸುತ್ತಾರೆ. ಕಲಿಯುಗದಲ್ಲಿ ಜನ ಕೆಟ್ಟ ಮಾರ್ಗದಲ್ಲಿ ಸಾಗುತ್ತಿರುವುದರ ಬಗ್ಗೆ ಪ್ರಯಾಗದ ಋಷಿಗಳು ಆತಂಕಿತರಾಗಿ, ಪ್ರಾಜ್ಞನಾದ ಸೂತಮುನಿಗೆ ಅನೇಕ ವಿಧದ ಪ್ರಶ್ನೆಗಳನ್ನು ಕೇಳುತ್ತಾರೆ.

ಮಹಾಮಹಿಮ ವ್ಯಾಸರ ಪರಮಶಿಷ್ಯರೇ, ನಿಮಗೆ ತಿಳಿಯದ ವಿಷಯವಿಲ್ಲ. ಇಂದು ವಿಶ್ವದಲ್ಲಿ ಘೋರವಾದ ಕಲಿಯುಗ ಆರಂಭವಾದ ನಂತರ, ಜನಗಳೆಲ್ಲ ಪುಣ್ಯಕಾರ್ಯಗಳನ್ನು ಬಿಟ್ಟು, ಕೆಟ್ಟ ಕೆಲಸಗಳಲ್ಲಿ ಆಸಕ್ತರಾಗಿದ್ದಾರೆ. ಸತ್ಯಮಾರ್ಗ ಬಿಟ್ಟು ಸುಳ್ಳನ್ನು ವೈಭವೀಕರಿಸಿಕೊಂಡು ಬದುಕುತ್ತಿದ್ದಾರೆ. ತಾವು ಸರಿ ಇಲ್ಲದಿದ್ದರೂ ಇತರರನ್ನು ದೂಷಣೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಶ್ರಮ ಪಟ್ಟು ದುಡಿಯದೆ, ಮತ್ತೊಬ್ಬರ ಆಸ್ತಿಯನ್ನು ಅಪಹರಿಸಲು ಹೊಂಚು ಹಾಕುತ್ತಿದ್ದಾರೆ. ಪರಸ್ತ್ರೀಯರಲ್ಲಿ ಮನಸ್ಸುಳ್ಳ ದುರ್ಜನರು, ದುರ್ಬಲರನ್ನು ಹಿಂಸಿಸುವುದರಲ್ಲಿ ನಿಪುಣರಾಗಿದ್ದಾರೆ. ತಮ್ಮ ಶರೀರವೇ ಆತ್ಮವೆಂದು ಭ್ರಮಿಸಿ, ಸನಾತನಧರ್ಮದಲ್ಲಿ, ಈಶ್ವರನಲ್ಲಿ ನಂಬಿಕೆಯಿಲ್ಲದೆ ನಾಸ್ತಿಕರಾಗಿ ಪಶುಗಳಂತೆ ವರ್ತಿಸುತ್ತಿದ್ದಾರೆ. ಹೆತ್ತು-ಹೊತ್ತು-ಸಲಹಿದ ತಂದೆತಾಯಿಯನ್ನೂ ದ್ವೇಷಿಸುತ್ತಾ, ಉಪಕಾರಸ್ಮರಣೆ ಇಲ್ಲದಂತೆ ಬದುಕುತ್ತಿದ್ದಾರೆ. ಕಾಮಾಂಧರಾದ ಜನ ಸ್ತ್ರೀಯಿಂದಲೇ ತಮಗೆ ಎಲ್ಲಾ ಸುಖ ಸಿಗುತ್ತದೆಂದು ಭ್ರಮಿಸುತ್ತಿದ್ದಾರೆ. ವಿದ್ಯೆಯನ್ನು ಮಾರಿ ಬದುಕುವುದೇ ಜೀವನದ ಮುಖ್ಯ ಗುರಿಯಾಗಿದೆ. ಹಣದ ಅಹಂಕಾರದಿಂದ ಮೆರೆಯುತ್ತಿರುವ ಜನ ಸತ್ಯ-ಧರ್ಮ-ನ್ಯಾಯ-ನೀತಿ ಹಾಳು ಮಾಡಿ, ಸಮಾಜದಲ್ಲಿ ಕ್ಷೋಭೆ ಉಂಟು ಮಾಡುತ್ತಿದ್ದಾರೆ. ಪ್ರಾಣಿಗಳಲ್ಲಿ ದಯಾಹೀನರಾಗಿ, ಅಲ್ಪವಿದ್ಯೆ ಕಲಿತು ತಾವೇ ಪಂಡಿತರೆಂದು ದುರಂಹಕಾರದಿಂದ ಮೆರೆಯುತ್ತಿದ್ದಾರೆ.

ರಾಜರು ತಮ್ಮ ಸ್ವಧರ್ಮವಾದ ಪ್ರಜಾಪಾಲನೆ ಬಿಟ್ಟು, ಕೆಟ್ಟ ಸಹವಾಸ ಮಾಡುತ್ತಾ, ಪಾಪಬುದ್ಧಿಯಿಂದ ಪರಸ್ತ್ರೀ ವ್ಯಾಮೋಹದಲ್ಲಿ ಮೈಮರೆತಿದ್ದಾರೆ. ಶಸ್ತ್ರವಿದ್ಯೆಗಳನ್ನು ಕಲಿಯದೆ ಹೇಡಿಗಳಾಗಿ ಯುದ್ಧದಲ್ಲಿ ಸೋತು ಓಡಿಹೋಗುತ್ತಿದ್ದಾರೆ. ಪ್ರಜಾಪಾಲನೇ ಮಾಡುವ ಕ್ಷತ್ರಿಯರಿಗೆ ವಿಧಿಸಿರುವ ಸ್ವಧರ್ಮ ನಿಯಮಗಳನ್ನ ತ್ಯಜಿಸಿ, ಯಾವಾಗಲೂ ಭೋಗಲಾಲಸರಾಗಿ ಪ್ರಜಾಕ್ಷೋಭೆಯಲ್ಲಿ ನಿರತರಾಗಿದ್ದಾರೆ. ಇನ್ನು ವ್ಯಾಪಾರಿಗಳು ಷೋಡಶಕರ್ಮರಹಿತರಾಗಿದ್ದಾರೆ. ಮಾರಾಟದಲ್ಲಿ ಧರ್ಮ ಮರೆತು ಸುಲಭವಾಗಿ ಹಣಗಳಿಸುವ ಅಕ್ರಮ ವ್ಯಾಪಾರದಲ್ಲಿ ತೊಡಗಿದ್ದಾರೆ. ಹಣಕ್ಕಾಗಿ ಎಂಥ ಅನ್ಯಾಯ, ವಂಚನೆ, ಘೋರ ಅಪರಾಧಗಳನ್ನು ಮಾಡಲೂ ಸಿದ್ಧರಾಗುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಟ್ಟಮಾರ್ಗಗಳನ್ನು ಅನುಸರಿಸುತ್ತ, ಅಕ್ರಮ ಹಣ ಸಂಪಾದನೆಯಿಂದ ಸ್ತ್ರೀಲಪಂಟರಾಗಿ ಹಾಳಾಗಿದ್ದಾರೆ. ಪ್ರಜೆಗಳು ಮೂಢಬುದ್ಧಿಯಿಂದ ವರ್ತಿಸುತ್ತಿದ್ದಾರೆ. ಬಲವಂತರು ತಾವು ಉತ್ತಮಕುಲದಲ್ಲಿ ಹುಟ್ಟಿದವರೆಂದು ಗರ್ವಪಡುತ್ತಾ ಕೆಳವರ್ಗದವರನ್ನು ಶೋಷಿಸುತ್ತಿದ್ದಾರೆ. ಒಟ್ಟಾರೆ ಸಮಾಜದ ಎಲ್ಲಾ ವರ್ಗದ ಜನರು, ಧರ್ಮಮಾರ್ಗಗಳನ್ನು ಬಿಟ್ಟು, ಮೂಢಬುದ್ಧಿಯಿಂದ ಒಬ್ಬರನ್ನೊಬ್ಬರು ತುಳಿಯುತ್ತಾ, ಹೀಯಾಳಿಸುತ್ತಾ ಮಹಾಗರ್ವದಿಂದ ಮೆರೆಯುತ್ತಿದ್ದಾರೆ.

ADVERTISEMENT

ಈ ಕಲಿಕಾಲದ ಸ್ತ್ರೀಯರು ಸಹ ಭ್ರಷ್ಟರಾಗಿದ್ದಾರೆ. ತಮ್ಮ ಪತಿಗೆ ಅವಮಾನ ಮಾಡಿ, ಹೀನದೃಷ್ಟಿಯಿಂದ ನೋಡುತ್ತಿದ್ದಾರೆ. ಅತ್ತೆಮಾವಂದಿರನ್ನು ಆದರಿಸದೆ, ದುರ್ಮಾರ್ಗದಲ್ಲಿ ಬದುಕುತ್ತಿದ್ದಾರೆ. ಕಾಮವಿಕಾರದಿಂದ ಕೆಟ್ಟ ನಡತೆಯುಳ್ಳವರಾಗಿ, ಪತಿಯಲ್ಲಿ ಅನಾದರ ತೋರುತ್ತಿದ್ದಾರೆ. ತಂದೆ-ತಾಯಿಗಳಲ್ಲಿ ಭಕ್ತಿ-ಗೌರವ ನೀಡದ ಮಕ್ಕಳು ಅವಿಧೇಯರಾಗಿದ್ದಾರೆ. ಕೆಟ್ಟ ಬುದ್ಧಿ ಕಲಿತು ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿಲ್ಲ. ಕೆಟ್ಟ ಚಟಗಳಿಂದ ಚಿಕ್ಕ ವಯಸ್ಸಲ್ಲೇ ರೋಗಿಷ್ಠರಾಗಿ ನರಳುತ್ತಿದ್ದಾರೆ ಅಂತ ಪ್ರಯಾಗದ ಋಷಿಮುನಿಗಳು ಸಮಾಜ ಹಾಳಾಗುತ್ತಿರುವುದನ್ನು ಸೂತಮುನಿಗೆ ತಿಳಿಸುತ್ತಾರೆ. ಬುದ್ಧಿಯಿಲ್ಲದೆ ಹಾಳಾಗಿರುವ ಜನರನ್ನು ಸರಿದಾರಿಗೆ ತರುವುದು ಹೇಗೆ? ಇವರಿಗೆ ಪರಲೋಕದಲ್ಲಿ ಸದ್ಗತಿ ಹೇಗೆ ಸಿಗುತ್ತದೆ? ಇಂಥ ವಿಧ-ವಿಧವಾದ ಚಿಂತೆಗಳಿಂದ ನಮ್ಮ ಮನಸ್ಸು ವ್ಯಾಕುಲವಾಗಿದೆ. ಪರಿಹಾರೋಪಾಯವನ್ನು ದಯವಿಟ್ಟು ಈಗಲೇ ಹೇಳಿ – ಎಂದು ಋಷಿಮುನಿಗಳು ಕೇಳುವುದರೊಂದಿಗೆ ಶಿವಮಹಾಪುರಾಣದ ವಿದ್ಯೇಶ್ವರ ಸಂಹಿತೆಯ ಮೊದಲ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.