ADVERTISEMENT

ಬೀದರ್‌ ಜಿಲ್ಲೆಯಲ್ಲಿ ಶಿವನಾಮ ಸ್ಮರಣೆ

ಮಹಾ ಶಿವರಾತ್ರಿ: ಶಿವ ಮಂದಿರಗಳಿಗೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:23 IST
Last Updated 22 ಫೆಬ್ರುವರಿ 2020, 11:23 IST
ಬೀದರ್‌ನ ಪಾಪನಾಶ ದೇಗುಲದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ಶುಕ್ರವಾರ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು
ಬೀದರ್‌ನ ಪಾಪನಾಶ ದೇಗುಲದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ಶುಕ್ರವಾರ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು   

ಬೀದರ್: ಮಹಾ ಶಿವರಾತ್ರಿ ಪ್ರಯುಕ್ತ ಜಿಲ್ಲೆಯಾದ್ಯಂತ ಜನ ಶುಕ್ರವಾರಶಿವ ಮಂದಿರಗಳಿಗೆ ತೆರಳಿ, ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಕೃತಾರ್ಥರಾದರು.

ಜಿಲ್ಲೆಯ ಎಲ್ಲೆಡೆ ಶಿವ ಮಂದಿರಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ,ಭಕ್ತಿ ಭಾವದಲ್ಲಿ ಮಿಂದೆದ್ದರು. ಧ್ವನಿ ವರ್ಧಕಗಳಲ್ಲಿ ಭಕ್ತಿ ಆಲಿಸುತ್ತಾ ಸಂಭ್ರಮದಿಂದ ಶಿವರಾತ್ರಿ ಹಬ್ಬವನ್ನು ಆಚರಿಸಿದರು.

ಪಾಪನಾಶಕ್ಕೆ ಭಕ್ತ ಸಮೂಹ: ನಗರದ ಐತಿಹಾಸಿಕ ಪಾಪನಾಶ ದೇಗುಲಕ್ಕೆ ಮಹಾ ಶಿವರಾತ್ರಿ ಅಂಗವಾಗಿ ಭಕ್ತ ಸಮೂಹ ಹರಿದು ಬಂದಿತು. ನಸುಕಿನ ಜಾವದಿಂದಲೇ ನಗರದ ಜನ ಸಮೂಹ ಪಾಪನಾಶ ದೇವಸ್ಥಾನದ ಕಡೆಗೆ ಮುಖ ಮಾಡಿದ್ದರು.ಸರದಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು. ಕಾಯಿ, ಕರ್ಪೂರ, ಹೂವು, ಬಿಲ್ವಪತ್ರೆಯೊಂದಿಗೆ ಪೂಜೆ ಸಲ್ಲಿಸಿದರು.

ADVERTISEMENT

ಬಹುತೇಕರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರೆ, ಅನೇಕರು ದೇಗುಲ ಹಿಂಭಾಗದ ಕಿಟಕಿಯಿಂದಲೇ ಶಿವಲಿಂಗಕ್ಕೆ ಕೈಮುಗಿದು ಭಕ್ತಿ ಸಮರ್ಪಿಸಿದರು.

ದೇಗುಲದ ಆವರಣದಲ್ಲಿ ಟೆಂಟ್ ಹಾಕಿ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳಿಂದ ಕುಡಿಯುವ ನೀರು, ಬಾಳೆ ಹಣ್ಣು, ಖರ್ಜೂರ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದಲ್ಲಿ ಕಾಯಿ, ಕರ್ಪೂರ, ಹೂವು, ಬಿಲ್ವಪತ್ರೆ, ವಿಭೂತಿ, ರುದ್ರಾಕ್ಷಿ, ಬೆಂಡು, ಬತಾಸು ವ್ಯಾಪಾರ ಭರ್ಜರಿಯಾಗಿತ್ತು.

ತಿಂಡಿ, ತಿನಿಸು, ಕಬ್ಬಿನ ರಸ, ಆಟಿಕೆ ಸಾಮಗ್ರಿಗಳ ನೂರಾರು ತಾತ್ಕಾಲಿಕ ಅಂಗಡಿಗಳು ತೆರೆದುಕೊಂಡಿದ್ದವು. ಮಕ್ಕಳು ಜೋಕಾಲಿ ಆಡಿ ಸಂತಸ ವ್ಯಕ್ತಪಡಿಸಿದರು. ಮಕ್ಕಳು ಆಟಿಕೆಗಳನ್ನು ಖರೀದಿಸಿ ಸಂಭ್ರಮಿಸಿದರು.

ವಾಹನ ಸಂಚಾರ ನಿಷೇಧ : ಪಾಪನಾಶ ಗೇಟ್‌ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ದರ್ಶನಕ್ಕಿಟ್ಟ ಶಿವಲಿಂಗ: ಬೀದರ್‌ನ ಪಾಪನಾಶ ಮಂದಿರದ ಬಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರ ಪಾವನಧಾಮದ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಮಂಟಪ ನಿರ್ಮಿಸಿ ಶಿವಲಿಂಗವನ್ನು ದರ್ಶನಕ್ಕೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.