ADVERTISEMENT

ಮಹಾಶಿವರಾತ್ರಿ | ಸತ್ಯಂ ಶಿವಂ ಸುಂದರಂ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
ಶಿವ
ಶಿವ   

ಮಹಾಶಿವರಾತ್ರಿಯನ್ನು ‘ವ್ರತರಾಜ’ ಎಂದೇ ಕರೆಯಲಾಗುತ್ತದೆ.

ಶಿವನನ್ನು ಕುರಿತ ಪರ್ವವೇ ಶಿವರಾತ್ರಿ. ಭಾರತೀಯ ಸಂಸ್ಕೃತಿಯಲ್ಲಿ ಶಿವನಿಗಿರುವ ಸ್ಥಾನ ತುಂಬ ವಿಶಿಷ್ಟವಾದದ್ದು. ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವನನ್ನು ಸತ್ಯ ಶಿವ ಸುಂದರಗಳ ರೂಪದಲ್ಲಿ ನಮ್ಮ ಸಂಸ್ಕೃತಿ ನಿರೂಪಿಸಿದೆ.

ಶಿವನ ರೂಪಗಳೂ ಹಲವು; ನಾಮಗಳೂ ಹಲವು. ‘ಶಿವ’ ಎಂದರೆ ಮಂಗಳಕರ. ಅವನಿಗಿರುವ ಇನ್ನೊಂದು ಪ್ರಮುಖ ಹೆಸರು ‘ರುದ್ರ’; ಎಂದರೆ ಅಳುವನ್ನು ಉಂಟುಮಾಡುವವನು; ಎಂದರೆ ಪ್ರಳಯಕಾರಕ ಎಂದೂ ಅರ್ಥ ಮಾಡಬಹುದು. ಸೃಷ್ಟಿ ಸ್ಥಿತಿ ಸಂಹಾರಗಳು ಅವನ ಲೀಲೆಗಳು. ಈ ಹಿನ್ನೆಲೆಯಲ್ಲಿ ಶಿವತತ್ತ್ವ ಹಲವು ಆಯಾಮಗಳಲ್ಲಿ ತೋರಿಕೊಂಡಿದೆ. ನಟರಾಜನ ಕಲ್ಪನೆ, ಅರ್ಧನಾರೀಶ್ವರತತ್ತ್ವ, ಭಿಕ್ಷಾಟನಮೂರ್ತಿ, ಗಂಗಾವತರಣದ ಸಂದರ್ಭ – ಹೀಗೆ ಹಲವು ವಿವರಗಳು ಶಿವತತ್ತ್ವವನ್ನು ಅನಾವರಣಮಾಡುತ್ತವೆ. ಅವನ ನಿರಾಕರತತ್ತ್ವಕ್ಕೆ ಸಂಕೇತವೇ ಲಿಂಗ.

ADVERTISEMENT

ಶಿವನ ಡಮರುಗದಿಂದಲೇ ಭಾಷೆ ಹುಟ್ಟಿದ್ದು ಎಂಬುದು ಪರಂಪರೆಯ ನಂಬಿಕೆ. ಆದರ್ಶ ಕುಟುಂಬದ ಮೌಲ್ಯಗಳಿಗೂ ಶಿವನ ಸಂಸಾರ ಆದರ್ಶವಾಗಿದೆ. ಹಲವು ವೈರುದ್ಧ್ಯಗಳ ನಡುವೆಯೂ ಶಿವನ ಕುಟುಂಬ ಸಾಮರಸ್ಯದ ಕುಟುಂಬ ಎನಿಸಿಕೊಂಡಿದೆ. ಈ ಸಾಮರಸ್ಯವನ್ನು ಕುರಿತು ಸಾಹಿತ್ಯಲೋಕದಲ್ಲಿ ಹಲವು ಮನೋಹರವಾದ ಶ್ಲೋಕಗಳು ರಚನೆಯಾಗಿವೆ. ಹೆಂಡತಿಯನ್ನು ಅವನಷ್ಟು ಪ್ರೀತಿಸುವವರು ಇರಲಾರರು; ಅಂಥ ಒಲುಮೆ ಅವನದ್ದು; ತನ್ನ ಅರ್ಧ ಶರೀರವನ್ನೇ ಹೆಂಡತಿಗೆ ನೀಡಿದವನು ಅವನು. ಭಕ್ತರಿಗೆ ಅವನಷ್ಟು ಒಲಿಯುವ ದೇವರೂ ಇನ್ನೊಬ್ಬರಿಲ್ಲ; ಅವನ ಪೂಜೆಗೆ ಬೇಕಾಗಿರುವುದು ಬಿಲ್ವಪತ್ರೆ, ತುಂಬೆಹೂವು, ಭಸ್ಮ ಮತ್ತು ನೀರು – ಭಕ್ತಿಯಿಂದ ಇಷ್ಟನ್ನು ಸಮರ್ಪಿಸಿದರೆ ಸಾಕು ಅವನು ಒಲಿಯುತ್ತಾನೆ.

ದೇವತೆಗಳ ಕಲ್ಪನೆಯಲ್ಲಿಯೇ ವಿಶಿಷ್ಟನಾಗಿರುವ ಶಿವನ ಆರಾಧನೆಗೆ ಮೀಸಲಾದ ದಿನವೇ ಮಹಾಶಿವರಾತ್ರಿ. ಉಪವಾಸ, ಜಾಗರಣೆ, ಬಿಲ್ವಪತ್ರೆ, ಭಸ್ಮ, ರುದ್ರಾಕ್ಷ, ಅಭಿಷೇಕ – ಇವು ಈ ವ್ರತದ ಪ್ರಧಾನ ವಿವರಗಳು. ನಮ್ಮನ್ನು ನಾವು ಎಚ್ಚರವಾಗಿಟ್ಟುಕೊಳ್ಳುವುದೇ ಜಾಗರಣೆಯ ತಾತ್ಪರ್ಯ. ಶಿವ ಅಭಿಷೇಕ ಪ್ರಿಯ; ರಾತ್ರಿಯ ನಾಲ್ಕು ಯಾಮಗಳಲ್ಲಿ ನಮಕ–ಚಮಕವನ್ನು ಪಾರಾಯಣಮಾಡುತ್ತ ಅಭಿಷೇಕ ಮಾಡುವುದು ಕ್ರಮ. ಅವನಷ್ಟು ವೈರಾಗ್ಯಶೀಲ ಇನ್ನೊಬ್ಬನಿಲ್ಲ; ಅವನು ಸ್ಮಶಾನವಾಸಿ. ಹೀಗಾಗಿ ಅವನು ಮೈಗೆಲ್ಲ ಭಸ್ಮವನ್ನು ಬಳಿದುಕೊಂಡಿದ್ದಾನೆ. ಅವನಿಗೆ ಪ್ರಿಯವಾದದ್ದು ಭಸ್ಮ. ಅವನು ತ್ರಿಣೇತ್ರ; ಇದರ ಸಂಕೇತವಾಗಿದೆ ಬಿಲ್ವಪತ್ರೆ. ಭಕ್ತಿಯಿಂದ ಬಿಲ್ವಪತ್ರೆಯ ಒಂದು ದಳವನ್ನು ಸಮರ್ಪಿಸಿ, ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಿದರೂ ಅವನು ಒಲಿಯುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.