ADVERTISEMENT

ವಚನಾಮೃತ: ಬಡತನವ ಮೆಟ್ಟಿ ನಿಂತ ಶರಣರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 8:52 IST
Last Updated 12 ಫೆಬ್ರುವರಿ 2021, 8:52 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ಬಡತನವೆಂಬುದೊಂದು ಸಾಕಲ್ಲವೇ ಹಲವಾರು ಚಿಂತೆ ಮಾಡಲು. ಈ ವಿಚಾರವಾಗಿ ನಿಜ ಶರಣರು ಹೀಗೆ ನುಡಿದಿದ್ದಾರೆ.

ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ. ಇಂತಿ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು. ಶಿವಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು.

ಮನಸ್ಸಿನ ಚಿಂತಾಕ್ರಾಂತತೆಗೆ ಹಲವಾರು ಕಾರಣಗಳ ಪಟ್ಟಿಯನ್ನೇ ಮಾಡಿದ್ದಾರೆ. ಒಂದಾದರೊಂದು ಬಯಕೆಗಳಿಗಾಗಿ ಮನುಷ್ಯ ಚಿಂತಿಸುತ್ತಲೇ ಜೀವಿಸುತ್ತಾನೆ. ಬಡತನವೆಂಬುದು ಚಿಂತೆಗೆ ಸಿಂಹಾಸನವಿದ್ದಂತೆಯೇ ಸರಿ.

ADVERTISEMENT

ಬಡತನವೆಂಬುದು ಚಿಂತೆಗಳ ಆಗರ. ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ಎಂಬ ಜನಪದರ ನುಡಿಯಂತೆ ಶರಣರು ಸಿರಿಯ ಸುಖಭೋಗ ಕಂಡವರೂ ಅಲ್ಲ, ಉಂಡವರೂ ಅಲ್ಲ, ಉತ್ತಿ ಬಿತ್ತಿ ಬೆಳೆದು ನಿಟ್ಟೊಟ್ಟಿದ ಒಕ್ಕಲುತವೂ ಇಲ್ಲ. ಮಂತ್ರ, ಯಂತ್ರ, ತಂತ್ರಗಳಂತಹ ವಿದ್ಯೆಯೂ ಇಲ್ಲ. ಇರುವ ಬಲ ಒಂದೇ ‘ಕಾಯಕ’ ಎಂಬ ನಾಮಾಂಕಿತ. ಆ ನಾಮಾಂಕಿತದಿಂದ ಬರುವ ಅಷ್ಟೋ ಇಷ್ಟೋ ಕಾಯಕದಿಂದ ಬರುವ ಹಣದಿಂದ ಬದುಕಿನ ಬಂಡಿ ಸಾಗಿಸಿದವರು. ಹಾಗೆಂದು ಮರಗಿದವರಲ್ಲ. ಕೊರಗಿದವರು ಅಲ್ಲ.
‘ಬರುವಾಗ ಬೆತ್ತಲೇ ಹೋಗುವಾಗ ಬೆತ್ತಲೇ ಬಂದು ಹೋಗುವ ನಡುವೆ ಬರಿ ಕತ್ತಲೆ’ ಎಂಬ ದಾಸರ ವಾಣಿಯಂತೆ ಬರುವಾಗಲೂ ಏನು ತಂದಿಲ್ಲ. ಹೋಗುವಾಗ ಏನು ಹೊತ್ತೊಯುವುದಿಲ್ಲ. ಇಲ್ಲಿರುವುದನ್ನು ಇಲ್ಲಿಯೇ ಅನುಭವಿಸುವುದು. ಇಲ್ಲಿಯೇ ಬಿಟ್ಟು ಹೋಗುವುದು ಸಿದ್ದಾಂತ. ಇದನ್ನು ಅರಿತವರಾಗಿದ್ದರು ಶರಣರು. ಹಾಗಾಗಿ ಬಡತನವ ಹಾಸಿ, ಬಡತನವ ಹೊದ್ದು ಬಾಳಿದರು. ಕಷ್ಟ ಎಂದು ಬಂದವರಿಗೆ ಬರಿಗೈಯಿಂದ ಕಳಿಸಿದವರಲ್ಲ. ಹೀಗಾಗಿ ಶರಣರ ಜೀವನ ಆದರ್ಶವಾದುದು.

***

-ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ, ವಿಜಯಪುರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.