ADVERTISEMENT

ವಚನಾಮೃತ: ಭಾರತೀಯ ಸ್ತ್ರೀಯರಿಗೆ ಸೋದರಿ ನಿವೇದಿತಾಳ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 19:30 IST
Last Updated 29 ಅಕ್ಟೋಬರ್ 2021, 19:30 IST
ಮಾತಾ ಕೈವಲ್ಯಮಯಿ
ಮಾತಾ ಕೈವಲ್ಯಮಯಿ   

ನಮ್ಮ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದವರು ಹಲವು ಮಂದಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಅನೇಕರು. ಈ ರೀತಿ ದೇಶಕ್ಕಾಗಿ ಪ್ರಾಣತೆತ್ತವರಲ್ಲಿ ಸೋದರಿ ನಿವೇದಿತಾ ಒಬ್ಬಳಾದರೂ ಅವಳ ತ್ಯಾಗ, ಆತ್ಮಾರ್ಪಣೆ ಅಸದೃಶವಾದುದು. ಅವಳ ದೇಶಭಕ್ತಿ ಪರಿಪೂರ್ಣವಾದುದು, ಅವಳು ಭಾರತವನ್ನು ಅದು ಇದ್ದಂತೆಯೇ ಸಂಪೂರ್ಣವಾಗಿ ಸ್ವೀಕರಿಸಿ ಭಾರತದೊಡನೆ ಒಂದಾದಳು.

ಭಾರತದ ಬಗೆಗೆ ತನಗಿರುವ ತೀವ್ರ ಶ್ರದ್ಧಾಭಕ್ತಿಯನ್ನು ವ್ಯಕ್ತ ಪಡಿಸುತ್ತಾ ತನ್ನ ಭಾಷಣದಲ್ಲಿ ಹೀಗೆ ಹೇಳುತ್ತಾಳೆ.

'ಧಾರ್ಮಿಕ ವಿಷಯದಲ್ಲಿ ನೀವು ಪಶ್ಚಿಮದಿಂದ ಸ್ವೀಕರಿಸಬೇಕಾದುದು ಏನೂ ಇಲ್ಲ. ನೀವೇ ಅವರಿಗೆ ನೀಡಬೇಕಾದುದು ಬೇಕಾದಷ್ಟಿದೆ. ಸಾಮಾಜಿಕ ವಿಷಯದಲ್ಲಿಯೂ ಯಾವ ಬದಲಾವಣೆಗಳು ಅವಶ್ಯಕವೋ ಅವನ್ನು ಮಾಡಲು ನೀವೇ ಸಮರ್ಥರಿದ್ದೀರಿ, ಹೊರಗಿನವರಾರೂ ಈ ವಿಷಯದಲ್ಲಿ ನಿಮಗೆ ಸಲಹೆ ನೀಡಬೇಕಾಗಿಲ್ಲ. ಬದಲಾವಣೆಯಂತೂ ಇದ್ದೇ ಇರುತ್ತದೆ, ಅದು ಜೀವನ ಪ್ರವಾಹದಲ್ಲಿ ಅನಿವಾರ್ಯ. ಆದರೆ, ಬದಲಾವಣೆ ಸ್ವತಂತ್ರವೂ, ಸ್ವ ನಿಯಂತ್ರಿತವೂ, ಸ್ವ ನಿರ್ಮಿತವೂ ಆಗಿರಬೇಕು. ಮೂರು ಸಾವಿರ ವರ್ಷಗಳ ಪುರಾತನ ನಾಗರಿಕತೆಗೆ ಪಶ್ಚಿಮದ ರಾಷ್ಟ್ರಗಳು ಮಾರ್ಗದರ್ಶನ ನೀಡುವ ಅವಶ್ಯಕತೆ ಇಲ್ಲ'

ADVERTISEMENT

’ಭಾರತೀಯ ಸ್ತ್ರೀಯರು ಅಶಿಕ್ಷಿತರು, ಅಸಂಸ್ಕೃತರು ಎಂಬ ಆಕ್ಷೇಪಣೆ ದೂರವಾದುದು. ಭಾರತೀಯ ಸ್ತ್ರೀಯರ ಹರ್ಷಚಿತ್ತ ಜೀವನ, ಸಾಮಾಜಿಕ ಪ್ರಾಮುಖ್ಯತೆ ಮತ್ತು ಉನ್ನತ ಚಾರಿತ್ರ್ಯ ಇವು ರಾಷ್ಟ್ರಜೀವನದ ಅತಿ ಭವ್ಯಸಂಪತ್ತು ಎಂದು ಹೇಳುತ್ತೇನೆ. ನಿಮ್ಮ ರಾಷ್ಟ್ರೀಯ ಸಂಪ್ರದಾಯಗಳ ವಿಷಯದಲ್ಲಿ ನೀವು ಸ್ವಲ್ಪವೂ ನಾಚಿಕೆ ಪಡಬೇಕಾಗಿಲ್ಲ. ಅವನ್ನು ದೃಢವಾಗಿ ಹಿಡಿದುಕೊಳ್ಳಿ. ನಿಮ್ಮ ಶ್ರೇಷ್ಠ ವ್ಯಕ್ತಿಗಳು ಇತರ ದೇಶದ ವ್ಯಕ್ತಿಗಳಿಗೆ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲ. ಅವರಿಗಾಗಿ ಹೆಮ್ಮೆ ಪಡಿ. ಅವರನ್ನು ಪ್ರೀತಿಸಿ, ನಿಮ್ಮ ಶಕ್ತಿಮೀರಿ ಅವರಿಗೆ ಉತ್ತೇಜನ ನೀಡಿ. ಅವರು ನಿಮ್ಮನ್ನು ಎಂದೂ ನಾಚಿಕೆಗೀಡು ಮಾಡುವುದಿಲ್ಲ‘

ಹೀಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೊಳಗಾದ, ತಮ್ಮ ಧರ್ಮದ ಬಗೆಗಿದ್ದ ಶ್ರದ್ದೆ ಮತ್ತು ವಿಶ್ವಾಸವನ್ನೇ ಕಳೆದುಕೊಂಡಿದ್ದ ಭಾರತೀಯರನ್ನು ಎಚ್ಚರಿಸಿದ ನಿವೇದಿತಾಳಿಗೆ ರಾಷ್ಟ್ರಕವಿ ರವೀಂದ್ರ ನಾಥ್ ಟ್ಯಾಗೋರರು 'ಲೋಕಮಾತಾ' ಎಂಬ ಬಿರುದಿನಿಂದ ಗೌರವಿಸಿದ್ದಾರೆ.

-ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.