ADVERTISEMENT

ವೈಕುಂಠ ಏಕಾದಶಿ: ಆನಂದದ ಬಾಗಿಲು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:31 IST
Last Updated 24 ಡಿಸೆಂಬರ್ 2020, 19:31 IST
ಆನಂದನಿಲಯ: ತಿರುಮಲ ತಿರುಪತಿ
ಆನಂದನಿಲಯ: ತಿರುಮಲ ತಿರುಪತಿ   

ನಾವೆಲ್ಲರೂ ಸದಾ ಬಯಸುವು ದಾದರೂ ಏನನ್ನು? ಸುಖವನ್ನು ತಾನೆ! ಸುಖ ಎಂದರೆ ದುಃಖ ಇಲ್ಲದಿರುವುದು. ದುಃಖ ಯಾವಾಗ ಇರುವುದಿಲ್ಲ? ಜೀವನದಲ್ಲಿ ಎಲ್ಲವೂ ನಮಗೆ ಇಷ್ಟವಾದುದೇ ನಡೆಯುತ್ತಿರುವಾಗ, ನಮಗೆ ಪ್ರಿಯವಾದುದೆಲ್ಲ ನಮ್ಮಲ್ಲಿಯೇ ಇದ್ದಾಗ.

ಆದರೆ ಸುಖ ಎಂಬುದನ್ನು ನಾವು ಸುಲಭವಾಗಿ ಪಡೆಯಲು ಆಗುತ್ತಿಲ್ಲ; ಕಷ್ಟ ಪಟ್ಟು ಪಡೆದ ಸುಖ–ಸಂತೋಷಗಳೂ ಹೆಚ್ಚು ಕಾಲ ನಮ್ಮಲ್ಲಿ ಉಳಿಯದು. ಏಕೆಂದರೆ ನಾವು ಪಡೆಯುವ ಸುಖವೆಲ್ಲವೂ ಮಿತಿಯಾದುದು, ಕ್ಷಣಿಕವಾದುದು; ಅಶಾಶ್ವತವಾದುದು. ಆದರೆ ಒಂದೇ ಒಂದು ಸ್ಥಳ ಮಾತ್ರ ಎಂದಿಗೂ ಸುಖಮಯವಾಗಿರುತ್ತದೆ, ಅನಂದಮಯವಾಗಿರುತ್ತದೆ. ಅದೇ ಭಗವತ್ಸಾಮೀಪ್ಯ, ಎಂದರೆ ದೇವರ ಹತ್ತಿರ ನೆಲೆಯಾಗುವುದು. ಇಂಥ ಶಾಶ್ವತಸುಖದ ತಾಣವೇ, ಆನಂದನಿಲಯವೇ ವೈಕುಂಠ; ಅದು ಮಹಾವಿಷ್ಣುವಿನ ಲೋಕ. ಇದು ಪರಂಪರೆಯ ನಂಬಿಕೆ.

ತ್ರಿಮೂರ್ತಿಗಳಲ್ಲಿ ಒಬ್ಬ ವಿಷ್ಣು; ಬ್ರಹ್ಮ ಮತ್ತು ಮಹೇಶ್ವರರು ಉಳಿದ ಇಬ್ಬರು. ಸೃಷ್ಟಿಯನ್ನು ಮಾಡುವವನು ಬ್ರಹ್ಮನಾದರೆ, ಅದನ್ನು ಕಾಪಾಡುವವನೇ ವಿಷ್ಣು; ಕೊನೆಗೆ ಸಂಹಾರ ನಡೆಸುವವನು ಮಹೇಶ್ವರ. ವಾಸ್ತವವಾಗಿ ಈ ಮೂರು ಪ್ರಕ್ರಿಯೆಗಳೂ ಒಂದೇ ತತ್ತ್ವದ ಬೇರೆ ಬೇರೆ ಆಯಾಮಗಳು ಮಾತ್ರ. ಶಿವನಿರುವ ತಾಣ ಕೈಲಾಸ; ಬ್ರಹ್ಮನದು ಬ್ರಹ್ಮಲೋಕ;ವಿಷ್ಣುವಿನ ನೆಲೆಯೇ ವೈಕುಂಠ. ವಿಷ್ಣುವಿನ ಲೋಕವನ್ನು ಹೊಂದಬೇಕೆಂಬ ತವಕ ಎಲ್ಲ ಆಸ್ತಿಕರದ್ದು. ಏಕೆಂದರೆ ಅಲ್ಲಿ ಕಷ್ಟ–ಕೋಟಲೆಗಳ ಗೊಡವೆ ಇಲ್ಲ; ಇರುವುದೆಲ್ಲವೂ ಬರಿಯ ಆನಂದವೇ.

ADVERTISEMENT

ಏಕಾದಶಿಗೂ ವಿಷ್ಣುವಿಗೂ ನಂಟಿದೆ. ಅಂದು ಅವನ ಹೆಸರಿನಲ್ಲಿ ಉಪವಾಸವ್ರತವನ್ನು ಮಾಡುವ ಕ್ರಮವೂ ಉಂಟಷ್ಟೆ. ಏಕಾದಶಿ ಎಂಬ ಶಬ್ದವನ್ನು ಕೇಳಿದರೆ ಯಮದೂತರೂ ಒಂದು ಕ್ಷಣ ಆಲೋಚಿಸುತ್ತಾರೆ – ಎಂಬ ಮಾತಿದೆ. ಎಂದರೆ ಏಕಾದಶಿಯ ದಿನ ವಿಷ್ಣುವಿನ ಭಕ್ತರನ್ನು ಮರಣವೂ ಮುಟ್ಟಲಾರದು ಎನ್ನುವುದು ಇದರ ತಾತ್ಪರ್ಯ. ಈ ತತ್ತ್ವವೇ ವೈಕುಂಠ ಏಕಾದಶಿಯ ಆಚರಣೆಯ ಹಿನ್ನೆಲೆಯಲ್ಲಿರುವುದು. ಅಂದು ವಿಷ್ಣುವಿನ ಭಕ್ತರೆಲ್ಲರಿಗೂ ವೈಕುಂಠದ ಫಲ ಲಭಿಸುತ್ತದೆ ಎಂಬುದು ಆಸ್ತಿಕರ ಶ್ರದ್ಧೆ.

ವೈಕುಂಠ ಏಕಾದಶಿಯಂದು ಶ್ರೀನಿವಾಸ, ಎಂದರೆ ವೆಂಕಟರಮಣನ ಆಲಯದಲ್ಲಿ ವಿಶೇಷ ಪೂಜೆಗಳು ನಡೆಯುವುದುಂಟು. ಅಂದು ಅಲ್ಲಿ ವೈಕುಂಠದ ಬಾಗಿಲನ್ನು ತೆಗೆಯಲಾಗುತ್ತದೆ ಎನ್ನುವುದನ್ನೂ ಕೇಳಿದ್ದೇವೆ. ವೆಂಕಟರಮಣ(ಅಥವಾ ವೆಂಕಟೇಶ)ನ ಆಲಯಕ್ಕೂ ವೈಕುಂಠಕ್ಕೂ ಏನು ಸಂಬಂಧ? ಈಗ ನಡೆಯುತ್ತಿರುವುದು ಕಲಿಯುಗ. ಈ ಯುಗದ ದೇವರು ಎಂದರೆ ವೆಂಕಟೇಶ. ಅವನು ವಿಷ್ಣುವಿನ ಅವತಾರ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣನ ಆಲಯಕ್ಕೆ ಹೋಗಿ ಬಂದವರಿಗೆ ಸಾಕ್ಷಾತ್‌ ವೈಕುಂಠಕ್ಕೆ ಹೋಗಿ ಬಂದಷ್ಟು ಪುಣ್ಯವೂ ಆನಂದವೂ ಲಭಿಸುತ್ತದೆ ಎನ್ನುವುದು ಈ ಆಚರಣೆಯ ಹಿಂದಿರುವ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.