ADVERTISEMENT

ವೇದವ್ಯಾಸರ ಶಿವಪುರಾಣ ಸಾರ- 30: ದೇವತೆಗಳು ಪೂಜಿಸಿದ ದಿನವೇ ಶಿವರಾತ್ರಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 27 ಜನವರಿ 2022, 19:30 IST
Last Updated 27 ಜನವರಿ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಭಗವಂತನಾದ ಶಿವನು ವಿಷ್ಣು-ಬ್ರಹ್ಮ ಮತ್ತು ಕೇದಗೆಗೆ ವರವನ್ನು ಅನುಗ್ರಹಿಸಿದ ನಂತರ ಆ ದೇವಸಭೆಯಲ್ಲಿ ಶಿವ ಮತ್ತು ಉಮೆ ದಂಪತಿಯನ್ನು ದೇವತೆಗಳು ಹೇಗೆ ಪೂಜಿಸಿ, ಸ್ತುತಿಸಿದರೆಂಬುದನ್ನು ನಂದಿಕೇಶ್ವರನು ಸನತ್ಕುಮಾರನಿಗೆ ಹೇಳಿದ್ದನ್ನು ಸೂತಮುನಿ ಪ್ರಯಾಗದ ಋಷಿಗಳಿಗೆ ತಿಳಿಸುತ್ತಾನೆ.

ಬ್ರಹ್ಮ-ವಿಷ್ಣು-ಇಂದ್ರ ಮತ್ತಿತರ ದೇವತೆಗಳು ಮಹಾದೇವನನ್ನು ಪುರುಷವಸ್ತುಗಳಿಂದ ಅಲಂಕಾರ ಮಾಡಿ, ಅನೇಕ ಬಗೆಯ ದಿವ್ಯವಾದಂತಹ ನೈವೇದ್ಯಗಳಿಂದ ಆರಾಧಿಸುತ್ತಾರೆ. ಇದರಿಂದ ಪ್ರಸನ್ನನಾದ ಶಂಕರ, ‘ನೀವು ಮಾಡಿದ ಪೂಜೆಯಿಂದ ನಾನು ಸಂತೋಷಗೊಂಡಿರುವೆ. ಈ ಮಹಾದಿನವು ಇನ್ನು ಮುಂದೆ ಮಹಾಶಿವರಾತ್ರಿಯೆಂದು ಪ್ರಸಿದ್ಧವಾಗುವುದು. ಶಿವರಾತ್ರಿಯಂದು ಲಿಂಗ ಅಥವಾ ವಿಗ್ರಹಗಳಲ್ಲಿ ನನ್ನನ್ನು ಪೂಜಿಸುವವರು ಈಶ್ವರಸ್ವರೂಪವನ್ನು ಹೊಂದುವರು. ಶಿವರಾತ್ರಿಯಂದು ರಾತ್ರಿ ಮತ್ತು ಹಗಲೂ ಎರಡೂ ಹೊತ್ತು ಆಹಾರವನ್ನು ಸೇವಿಸದೆ, ಜಿತೇಂದ್ರಿಯರಾಗಿ, ವಂಚನೆಯಿಲ್ಲದೆ ಪೂಜಿಸಿದರೆ ಇಷ್ಟಾರ್ಥಗಳು ತಕ್ಷಣ ಲಭಿಸುವುದು. ಚಂದ್ರೋದಯಕಾಲವು ಸಮುದ್ರಕ್ಕೆ ಅಭಿವೃದ್ಧಿಯನ್ನು ಹೇಗೆ ಉಂಟುಮಾಡುವುದೋ, ಅದರಂತೆ ಈ ಶಿವರಾತ್ರಿಯು ನನ್ನ ಧರ್ಮವನ್ನು ಅಭಿವೃದ್ಧಿಗೊಳಿಸುವ ಕಾಲ’ ಎನ್ನುತ್ತಾನೆ ಮಹಾಶಿವ.

ಮತ್ತೆ ಶಿವ ಮುಂದುವರೆದು ಮಾತನಾಡುತ್ತಾ, ‘ಬ್ರಹ್ಮ-ವಿಷ್ಣು ಮಧ್ಯದಲ್ಲಿ ನಾನು ಸ್ತಂಭರೂಪದಿಂದ ಬಂದ ಮಾರ್ಗಶಿರಮಾಸದ ಆರ್ದ್ರಾನಕ್ಷತ್ರವಿರುವ ದಿನದಂದು ಲಿಂಗಪ್ರತಿಷ್ಠಾಪನೆ ಮಾಡಬೇಕು. ಅಂದು ಪಾರ್ವತಿಯೊಡನಿರುವ ನನ್ನನ್ನು ಅಥವಾ ನನ್ನ ಮೂರ್ತಿ ಅಥವಾ ಲಿಂಗವನ್ನು ಪೂಜಿಸುವವರು, ಪುತ್ರ ಷಣ್ಮುಖನಿಗಿಂತಲೂ ನನಗೆ ಪ್ರಿಯರಾಗುವರು. ಬ್ರಹ್ಮ-ವಿಷ್ಣು ಕಾದಾಡಿದ ಯುದ್ಧಭೂಮಿಯಲ್ಲಿ ನಾನು ಲಿಂಗಸ್ವರೂಪವನ್ನು ಧರಿಸಿದ್ದರಿಂದ ಈ ಭೂಮಿಯು ಮುಂದೆ ಲಿಂಗಸ್ಥಾನವೆಂದು ಹೆಸರುವಾಸಿಯಾಗಲಿ. ಅಗ್ನಿಪರ್ವತದಂತೆ ತೇಜಸ್ವಿಯಾದ ಲಿಂಗವು ಇಲ್ಲಿ ಜನಿಸಿದುದರಿಂದ ಇದು ಇನ್ನು ಮುಂದೆ ಅರುಣಾಚಲವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಹೊಂದುವುದು’ ಎಂದು ಪರಶಿವ ತಿಳಿಸಿದ.

ADVERTISEMENT

‘ಲಿಂಗ ಜನಿಸಿದ ಅರುಣಾಚಲವೆಂಬ ಈ ಸ್ಥಳದಲ್ಲಿ, ಅನೇಕ ತೀರ್ಥಗಳು ಉದ್ಭವಿಸುವುವು. ಇಲ್ಲಿ ವಾಸ ಮಾಡಿದವರಿಗೂ, ಮರಣವನ್ನು ಹೊಂದುವವರಿಗೂ ಮುಕ್ತಿಯೂ ಲಭಿಸುವುದು. ಇಲ್ಲಿ ದಾನ, ಹೋಮ ಮತ್ತಿತರ ಪುಣ್ಯಕಾರ್ಯಗಳನ್ನು ಮಾಡಿದರೆ, ಒಂದಕ್ಕೆ ಕೋಟಿಯಷ್ಟು ಫಲವು ಲಭಿಸುವುದು. ನನ್ನ ಎಲ್ಲಾ ಕ್ಷೇತ್ರಗಳಿಗಿಂತಲೂ ಈ ಕ್ಷೇತ್ರವು ಶ್ರೇಷ್ಠವಾದುದು. ಇಲ್ಲಿ ನನ್ನನ್ನು ಸ್ಮರಣೆಮಾಡಿದ ಮಾತ್ರದಿಂದಲೇ ಮಾನವರು ಮುಕ್ತಿ ಪಡೆಯುವರು. ಆದುದರಿಂದ ಅರುಣಾಚಲಕ್ಷೇತ್ರವು ಅತಿ ಶ್ರೇಷ್ಠವಾದುದು. ಸಕಲ ಕಲ್ಯಾಣಗಳೂ ಈ ಕ್ಷೇತ್ರದಲ್ಲಿ ನೆಲೆಸಿರುವುವು’ ಎಂದು ಮಹಾಶಿವ ತಿಳಿಸಿದ.

‘ಲಿಂಗಾಭಿಮಾನಿದೇವತೆಯಾದ ನನ್ನನ್ನು, ಸೃಷ್ಟಿಯೇ ಮೊದಲಾದ ಐದು ಕ್ರಿಯೆಗಳನ್ನು ಮಾಡುವವನೆಂದೂ ಧ್ಯಾನಿಸಿ ಅರ್ಚಿಸಿದರೆ, ಆ ಐದು ಕ್ರಿಯೆಗಳಿಗೆ ಅನುಸಾರವಾಗಿ ಸಾಲೋಕ್ಯ (ಶಿವಲೋಕದಲ್ಲಿ ವಾಸ), ಸಾಮೀಪ್ಯ (ಶಿವನ ಸಮೀಪದಲ್ಲಿಯೇ ವಾಸ), ಸಾರೂಪ್ಯ (ಶಿವನಿಗೆ ಸಮಾನವಾದ ಸ್ವರೂಪವನ್ನು ಹೊಂದುವುದು.) ಸಾರ್ಷ್ಟಿ(ಶಿವನಿಗೆ ಸಮಾನವಾದ ವೈಭವ), ಸಾಯುಜ್ಯ (ಶಿವನೊಡನೆ ಐಕ್ಯ) – ಈ ಐದು ವಿಧವಾದ ಮೋಕ್ಷಗಳು ಸಿಗುವುವು. ಒಂದೊಂದು ಕ್ರಿಯೆಯಿಂದ ಒಂದೊಂದು ಮುಕ್ತಿಯು ಲಭಿಸುವುದು. ದೇವತೆಗಳಿರಾ, ನೀವೂ ಲಿಂಗರೂಪದಲ್ಲಿ ನನ್ನನ್ನು ಪೂಜಿಸಿ ಸಕಲ ಇಷ್ಟಾರ್ಥಗಳನ್ನು ಪಡೆಯಿರಿ’ ಎಂದು ಮಹಾಶಿವ ಸೂಚಿಸುತ್ತಾನೆ.

ನಂತರ ಭಗವಂತನಾದ ಪರಮೇಶ್ವರನು ಬ್ರಹ್ಮ-ವಿಷ್ಣುಯುದ್ಧದಲ್ಲಿ ಮಡಿದ ಸೈನಿಕರನ್ನು ತನ್ನ ಶಕ್ತಿಯೆಂಬ ಅಮೃತಧಾರೆಯಿಂದ ಬದುಕಿಸುತ್ತಾನೆ. ಬ್ರಹ್ಮ-ವಿಷ್ಣು ಇಬ್ಬರ ಅವಿವೇಕವನ್ನೂ ಮತ್ತು ಪರಸ್ಪರ ವೈರವನ್ನೂ ಹೋಗಲಾಡಿಸಲು ‘ಎಲೈ ವಿಷ್ಣುಬ್ರಹ್ಮರೆ, ನನಗೆ ಸಾಕಾರವೂ ನಿರಾಕಾರವೂ ಆದ ಎರಡು ರೂಪಗಳು ಇರುವುವು. ಇನ್ನಾರಿಗೂ ಈ ಎರಡು ರೂಪಗಳಿಲ್ಲ. ಆದಕಾರಣ ನನ್ನ ಹೊರತು ಮಿಕ್ಕವರೆಲ್ಲರೂ ಅನೀಶ್ವರರು, ಈಶ್ವರರಲ್ಲ. ಮೊದಲಿಗೆ ಸ್ತಂಭರೂಪದಿಂದ ನನ್ನ ನಿರಾಕಾರವಾದ ಬ್ರಹ್ಮಸ್ವರೂಪವು ಪ್ರಕಟವಾಗಿದೆ. ಎರಡನೆಯದಾಗಿ ಈ ನನ್ನ ಪ್ರತ್ಯಕ್ಷವಾಗಿರುವ ರೂಪದಿಂದ ಈಶ್ವರ ಸಾಕಾರಸ್ವರೂಪ ನಿಮಗೆ ಗೋಚರವಾಗಿದೆ. ಹೀಗಾಗಿ ನಾನು ನಿರಾಕಾರ ಮತ್ತು ಸಾಕಾರವಾಗಿ ಎರಡೂ ರೂಪದಲ್ಲಿ ಪೂಜಿಸಲ್ಪಡುತ್ತೇನೆ’ ಎಂದು ಪರಮಶಿವತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.