ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ–19: ಬುದ್ಧಿಯಿಂದ ಪಂಥ ಗೆದ್ದ ಗಣೇಶ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 1 ಡಿಸೆಂಬರ್ 2021, 19:30 IST
Last Updated 1 ಡಿಸೆಂಬರ್ 2021, 19:30 IST
ಗಣೇಶ ಮೂರ್ತಿಗಳು–ಸಂಗ್ರಹ ಚಿತ್ರ
ಗಣೇಶ ಮೂರ್ತಿಗಳು–ಸಂಗ್ರಹ ಚಿತ್ರ   

ಪಾರ್ವತಿ-ಪರಮೇಶ್ವರರು ಷಣ್ಮುಖ ಮತ್ತು ಗಣಪತಿಯರ ಬಾಲಲೀಲೆಗಳನ್ನು ನೋಡುತ್ತಾ ಸಂತೋಷದಿಂದಿದ್ದರು. ಪುತ್ರರಿಬ್ಬರೂ ತಂದೆತಾಯಿಗಳಲ್ಲಿ ಭಕ್ತಿಯಿಟ್ಟು ಅವರನ್ನು ಪೂಜಿಸುತ್ತಿದ್ದರು. ಒಂದು ದಿನ ಶಿವ ದಂಪತಿ ವಿಚಾರ ವಿಮರ್ಶೆ ಮಾಡುತ್ತಾ ತಮ್ಮ ಮಕ್ಕಳಾದ ಗಣಪತಿ ಷಣ್ಮುಖರು ಪ್ರೌಢರಾಗಿದ್ದಾರೆ. ಈಗ ನಾವು ವಿವಾಹ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಮಾತುಗಳನ್ನು ಕೇಳಿದ ಷಣ್ಮುಖ ಮತ್ತು ಗಣಪತಿ ಸಂತೋಷದಿಂದ ವಿವಾಹಕ್ಕೆ ತಮ್ಮ ಒಪ್ಪಿಗೆ ನೀಡಿದರು. ಆದರೆ, ಪರಸ್ಪರ ನಾನು ಮೊದಲು ವಿವಾಹವಾಗಬೇಕೆಂದು ವಿವಾದ ಆರಂಭಿಸಿದರು. ಇದನ್ನು ಕೇಳಿ ಆ ಶಿವದಂಪತಿಗಳು ಯಾರಿಗೆ ಮೊದಲು ವಿವಾಹ ಮಾಡಬೇಕೆಂದು ತೀರ್ಮಾನಿಸಲು ಒಂದು ಪಂಥ ಆಯೋಜಿಸಿದರು.

‘ವಿವಾಹಸಂದರ್ಭದಲ್ಲಿ ಒಂದು ಪಂದ್ಯವನ್ನು ರಚಿಸಿದ್ದೇವೆ. ಯಾರು ವೇಗವಾಗಿ ಭೂಪ್ರದಕ್ಷಿಣೆಮಾಡುವರೋ, ಅವರಿಗೆ ಮೊದಲು ಮದುವೆ ಮಾಡಬೇಕೆಂದು ತೀರ್ಮಾನಿಸಿದ್ದೇವೆ’ ಎಂದರು. ತಾಯಿತಂದೆಗಳ ಮಾತುಗಳನ್ನು ಕೇಳಿದ ತಕ್ಷಣವೇ, ಷಣ್ಮುಖ ಭೂಪ್ರದಕ್ಷಿಣೆಗಾಗಿ ಹೊರಟುಬಿಟ್ಟ. ಅತ್ಯಂತ ಬುದ್ಧಿಶಾಲಿಯಾಗಿದ್ದ ಗಣಪತಿ ಆತುರಪಡದೆ, ಏನನ್ನೋ ಯೋಚಿಸುತ್ತ ಅಲ್ಲಿಯೇ ಕುಳಿತ್ತಿದ್ದ. ‘ಹಾರಲು ತನಗೆ ಶಕ್ತಿಯಿಲ್ಲ. ಒಂದು ಹರಿದಾರಿ ಹೋದರೆ ಹಿಂದಿರುಗಲು ನನ್ನಿಂದ ಸಾಧ್ಯವಾಗುವುದಿಲ್ಲ. ಇಂತಹುದರಲ್ಲಿ ಅಗಾಧವಾದ ಭೂಮಿಯನ್ನು ಸುತ್ತುವುದು ಹೇಗೆ?‘ ಎಂದು ಯೋಚಿಸಿ, ಕೊನೆಗೆ ಒಂದು ಉಪಾಯವನ್ನು ಮಾಡಿದ. ಗಣಪತಿ ವಿಧಿವತ್ತಾಗಿ ಸ್ನಾನಮಾಡಿ ತಂದೆತಾಯಿಗಳ ಸಮೀಪಕ್ಕೆ ಬಂದು ‘ಪೂಜ್ಯರೇ ಇಲ್ಲಿ ಎರಡು ಪೀಠಗಳನ್ನು ನಿಮಗಾಗಿ ಹಾಕಿರುವೆ. ನೀವು ಈ ಪೀಠಗಳಲ್ಲಿ ಕುಳಿತು ನಾನು ಮಾಡುವ ಪೂಜೆಯನ್ನು ಸ್ವೀಕರಿಸಿ, ನನ್ನ ಕೋರಿಕೆಯನ್ನು ನೆರವೇರಿಸಿ’ ಎಂದು ಪ್ರಾರ್ಥಿಸಿದ.

ಪಾರ್ವತೀಪರಮೇಶ್ವರರು ಪೂಜಾಸ್ವೀಕಾರಕ್ಕಾಗಿ ಆ ಪೀಠಗಳಲ್ಲಿ ಕುಳಿತರು. ಗಣಪತಿಯು ಮಾತಾಪಿತೃಗಳಿಗೆ ವಿಧಿವತಾಗಿ ಪೂಜಿಸಿ, ಭಕ್ತಿಪುರಸ್ಸರವಾಗಿ ಏಳು ಸಾರಿ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿದ. ಆಮೇಲೆ ಕೈಜೋಡಿಸಿಕೊಂಡು ನಿಂತು ಹೀಗೆ ಹೇಳಿದ, ‘ಪೂಜ್ಯ ತಂದೆ-ತಾಯಿಯರೇ, ಈಗ ನಾನು ಮೊದಲಿಗೆ ಭೂಪ್ರದಕ್ಷಿಣೆ ಮಾಡಿರುವೆ. ನೀವು ನನಗೆ ಮೊದಲು ವಿವಾಹ ಮಾಡಬೇಕು’ ಎಂದ. ಗಣಪತಿ ಮಾತುಗಳನ್ನು ಕೇಳಿ, ಉಮಾಮಹೇಶ್ವರರು ‘ಎಲೈ ವಿಘ್ನೇಶ್ವರನೇ, ನೀನು ಪರ್ವತರಾಣ್ಯಾದಿಗಳಿಂದ ಕೂಡಿರುವ ಈ ಭೂಮಿಯನ್ನು ಪ್ರದಕ್ಷಿಣೆ ಮಾಡಬೇಕು. ಅದಕ್ಕಾಗಿ ಕುಮಾರಸ್ವಾಮಿಯು ಆಗಲೇ ಹೋಗಿದ್ದಾನೆ. ನೀನೂ ಈ ಕೂಡಲೇ ಹೊರಡು’ ಎಂದು ಹೇಳಿದರು.

ADVERTISEMENT

ತಂದೆ-ತಾಯಿ ಮಾತುಗಳನ್ನು ಕೇಳಿ ಗಣಪತಿ ‘ಪೂಜ್ಯರಾದ ತಾಯಿತಂದೆಗಳೇ, ನೀವಿಬ್ಬರೂ ಧರ್ಮಸ್ವರೂಪಿಗಳು. ಲೋಕದ ನ್ಯಾಯದಲ್ಲಿ ನುರಿತವರು. ಈಗ ಭೂಮಿಯನ್ನು ಏಳುಸಾರಿ ಪ್ರದಕ್ಷಿಣೆ ಮಾಡಿರುತ್ತೇನೆ. ಇನ್ನೂ ಭೂಮಿಯನ್ನು ಸುತ್ತು ಎಂದು ಹೇಳುತ್ತಿರುವಿರಲ್ಲಾ, ಇದು ನ್ಯಾಯವೇ?’ ಎಂದು ಪ್ರಶ್ನೆಮಾಡಿದ. ಮಗನ ಮಾತುಗಳನ್ನು ಕೇಳಿ ಶಿವದಂಪತಿಗಳು ಏನೂ ತಿಳಿಯದೆ, ‘ಗಣಪತಿಯೇ ಸಪ್ತದ್ವೀಪಗಳಿಂದಲೂ ಕಾಡುಗಳಿಂದಲೂ ಸಮುದ್ರಪರ್ಯಂತವಾಗಿರುವ ಭೂಮಿಯನ್ನು ನೀನು ಯಾವಾಗ ಪ್ರದಕ್ಷಿಣೆಮಾಡಿದೆ?’ ಎಂದು ಪ್ರಶ್ನಿಸಿದರು. ಬುದ್ಧಿಸಾಗರನಾದ ಗಣಪತಿಯು ಮಾತಾಪಿತೃಗಳಿಗೆ ನಮಿಸಿ ‘ಪೂಜ್ಯರೇ, ಜಗದೊಡೆಯರಾದ ನಿಮ್ಮ ಪೂಜೆಯನ್ನು ನಾನು ಭಕ್ತಿಯಿಂದ ಮಾಡಿ, ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿರುವೆ. ಯಾವನು ತಾಯಿತಂದೆಯರನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡುವನೋ, ಆತನಿಗೆ ಭೂಪ್ರದಕ್ಷಿಣೆಯ ಫಲವು ಲಭಿಸುವುದು. ಯಾವನು ಮಾತಾಪಿತೃಗಳನ್ನು ಮನೆಯಲ್ಲಿಯೇ ಬಿಟ್ಟು ತೀರ್ಥಯಾತ್ರೆಗೆ ಹೋಗುವನೋ, ಆತನಿಗೆ ಮಾತಾಪಿತೃಗಳನ್ನು ಕೊಂದ ಪಾಪವು ಬರುವುದು. ಮಗನಿಗೆ ಮಾತಪಿತೃಗಳ ಪಾದಪೂಜೆಯೇ ಉತ್ತಮವಾದ ಮಂಗಳಕರವಾದ ತೀರ್ಥವು. ಉಳಿದ ತೀರ್ಥಗಳು ಅಷ್ಟು ಪ್ರಶಸ್ತವಲ್ಲ ಎಂದು ವೇದಶಾಸ್ತ್ರಗ್ರಂಥಗಳು ಹೇಳಿವೆ’ ಎಂದ.

ಧರ್ಮಸ್ವರೂಪಿಗಳಾದ ಶಿವದಂಪತಿಗಳು ಮಗನ ಬುದ್ಧಿವಂತಿಕೆಯನ್ನು ಮೆಚ್ಚಿದರು. ಮನುಷ್ಯನಿಗೆ ನಿಜವಾದ ಬಲವೇ ಬುದ್ಧಿ ಎಂದು ಪ್ರಶಂಸಿಸಿ, ಪಂಥದಲ್ಲಿ ಗೆದ್ದ ಗಣೇಶನ ವಿವಾಹವನ್ನು ಮೊದಲು ನಡೆಸಲು ನಿಶ್ಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.