ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನನ್ನು ಆರಾಧಿಸುವ ಕ್ರಮ

ಭಾಗ 101

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 21 ಏಪ್ರಿಲ್ 2022, 18:49 IST
Last Updated 21 ಏಪ್ರಿಲ್ 2022, 18:49 IST
   

ಶಿವನನ್ನು ಪೂಜಿಸಿದ ನಂತರ ಮುದ್ರೆಯೊಂದನ್ನು ಪ್ರದರ್ಶಿಸಿ, ಸಿದ್ಧಿಬುದ್ಧಿಯರಿಂದ ಕೂಡಿರುವ, ಸೋದರನಾದ ಕುಮಾರಸ್ವಾಮಿಯಿಂದೊಡಗೂಡಿದ, ವಿಘ್ನನಿವಾರಕನಾದ, ಲಕ್ಷಲಾಭಾದಿ ದೇವತೆಗಳಿಂದ ಪರಿವೃತನಾದ, ಮಹಾ
ಗಣಪತಿಯನ್ನು ಪೂಜಿಸಿ ‘ಓಂ ಸುಮುಖಾಯ ನಮಃ’ ಎಂದು ಉಚ್ಚರಿಸಬೇಕು. ಮೊದಲು ಓಂಕಾರವೂ, ಕಡೆಯಲ್ಲಿ ನಮಃ ಎಂಬ ಶಬ್ದವೂ ಉಳ್ಳ ಚತುರ್ಥ್ಯಂತ ವಾದ ನಾಮಪದಗಳಿಂದ ನಮಸ್ಕರಿಸಬೇಕು.

ನಂತರ ಮಹೋದರನೆಂಬ ದ್ವಾರಪಾಲಕನನ್ನು ಪೂಜಿಸಿ, ಆಮೇಲೆ ಹಿಮವಂತನ ಮಗಳಾದ ಪಾರ್ವತಿಯನ್ನು ಪೂಜಿಸಬೇಕು. ಚಂದನ, ಕುಂಕುಮ, ಧೂಪದೀಪಗಳಿಂದ, ನಾನಾ ವಿಧವಾದ ನೈವೇದ್ಯಗಳಿಂದ, ಆಕೆಯನ್ನು ಅರ್ಚಿಸಿದ ಬಳಿಕ, ಶಿವನಿಗೆ ನಮಸ್ಕರಿಸಬೇಕು. ಸಾಧ್ಯವಾದರೆ ಮನೆಯಲ್ಲಿಯೇ ಮಣ್ಣಿನಿಂದಾಗಲಿ, ಚಿನ್ನದಿಂದಾಗಲಿ, ಬೆಳ್ಳಿಯಿಂದಾಗಲಿ, ಧಾತುಗಳಿಂದಾಗಲಿ, ಪಾದರಸದಿಂದಾಗಲಿ ಶಿವನ ಮೂರ್ತಿಯನ್ನು ಮಾಡಿ, ಭಕ್ತಿಯುಕ್ತನಾಗಿ ಮೂರ್ತಿಗೆ ನಮಸ್ಕರಿಸಿ ಪೂಜೆಯನ್ನು ಮಾಡಬೇಕು. ಆಮೂರ್ತಿಯೊಂದನ್ನು ಪೂಜಿಸಿದರೆ ಎಲ್ಲ ದೇವರನ್ನೂ ಪೂಜಿಸಿದಂತಾಗುವುದು.

ಮಣ್ಣಿನಿಂದ ಲಿಂಗವನ್ನು ಮಾಡಿಡಬೇಕು. ಮನೆಯಲ್ಲಿರುವವರು ನಿಯಮ ಬದ್ಧವಾಗಿದ್ದು, ವಿಧಿಪೂರ್ವಕವಾಗಿ ಎಲ್ಲವನ್ನೂ ಮಾಡಬೇಕು. ಭೂತಶುದ್ಧಿಯನ್ನು ಮಾಡಿದನಂತರ ಪ್ರಾಣಪ್ರತಿಷ್ಠೆಯನ್ನು ಮಾಡಬೇಕು. ಶಿವಾಲಯದಲ್ಲಿ ದಿಕ್ಪಾಲಕರನ್ನು ಸ್ಥಾಪಿಸಿ ಪೂಜಿಸಬೇಕು. ಮನೆಯಲ್ಲಿ ಶಿವನನ್ನು ಯಾವಾಗಲೂ ಮೂಲಮಂತ್ರದಿಂದ ಪೂಜಿಸಬೇಕು. ಮನೆಯಲ್ಲಿ ಮಾತ್ರ ಸರ್ವವಿಧದಿಂದಲೂ, ದ್ವಾರಪಾಲಕರಿರಬೇಕೆಂಬ ನಿಯಮವಿಲ್ಲ. ಮನೆಯಲ್ಲಿ ನಾವು ಯಾವ ಲಿಂಗ
ವನ್ನು ಪೂಜಿಸುವೆವೋ ಅದರಲ್ಲೇ ಎಲ್ಲವೂ ಅಡಗಿರುವುದು.

ADVERTISEMENT

ಪೂಜೆಯನ್ನು ಮಾಡುವಾಗ, ಅಂಗದೇವತೆಗಳೊಡನೆ, ಪರಿವಾರ ದೇವತೆ ಗಳೊಡನೆ, ಶಿವನನ್ನು ಆವಾಹಿಸಿ ಪೂಜಿಸಬೇಕು. ಇದರಲ್ಲಿ ನಿಯಮವೇನೂ ಇಲ್ಲ. ಶಿವನ ಸಾನ್ನಿಧ್ಯವನ್ನು ಕಲ್ಪಿಸಿದ ಬಳಿಕ ತನ್ನ ಆಸನದಲ್ಲಿ ಉತ್ತರಾಭಿಮುಖ ವಾಗಿ ಕುಳಿತು, ಮತ್ತೆ ಆಚಮನವನ್ನು ಮಾಡಬೇಕು. ಬಳಿಕ ಕೈಗಳನ್ನು ತೊಳೆದುಕೊಂಡು ಮೂಲಮಂತ್ರದಿಂದ ಹತ್ತು ಸಲ ಪ್ರಾಣಾಯಾಮವನ್ನು ಮಾಡಬೇಕು. ಪೂಜೆಗೆ ಅವಶ್ಯಕವಾದ ಮತ್ತು ಈಪ್ಸಿತವಾದ ಪಂಚಮುದ್ರೆಗಳನ್ನೆ ಪ್ರದರ್ಶಿಸಬೇಕು. ಬಳಿಕ ಪೂಜಾವಿಧಿಯನ್ನು ಆರಂಭಿಸಬೇಕು.

ಅಲ್ಲಿ ದೀಪವೊಂದನ್ನಿಟ್ಟು ಬೆಳಗಿಸಿ, ತನ್ನ ಗುರುವಿಗೆ ನಮಸ್ಕಾರವನ್ನು ಮಾಡಿ, ಪದ್ಮಾಸನವನ್ನೋ ಅಥವಾ ಭದ್ರಾಸನವನ್ನೋ, ಇಲ್ಲದಿದ್ದರೆಉತ್ತಾನಾಸನವನ್ನಾಗಲೀ, ಪರ್ಯಂಕಾಸನದಲ್ಲಿ ಕುಳಿತು ಪ್ರಯೋಗಾನು
ಸಾರವಾಗಿ ಪೂಜಾದಿಗಳನ್ನು ಮಾಡಬೇಕು. ಮನೆಯಲ್ಲಿ ಮಾಡುವ ಪೂಜೆಗೆ ಅಷ್ಟು ನಿಯಮವಿಲ್ಲ. ಬೇರೊಂದೆಡೆ ಸುಳಿಯದಂತೆ ಮನಸ್ಸನ್ನು ಹಿಡಿದುನಿಲ್ಲಿಸಿ, ಅರ್ಘ್ಯಪಾತ್ರದಿಂದ, ಲಿಂಗವನ್ನು ತೊಳೆಯಬೇಕು. ಪೂಜಾದ್ರವ್ಯಗಳೆಲ್ಲವನ್ನೂ ಹತ್ತಿರ ಇಟ್ಟುಕೊಂಡು ಮಂತ್ರದಿಂದ ಶಿವನನ್ನು ಆವಾಹಿಸಬೇಕು.

ಶಿವನು ಕೈಲಾಸಶಿಖರವಾಸಿಯಾಗಿ, ಪಾರ್ವತೀದೇವಿ ವಲ್ಲಭನಾಗಿ, ಮಹಾಶ್ರೇಷ್ಠನಾಗಿ, ನಿರ್ಗುಣನಾಗಿ, ಸಗುಣನಾಗಿಯೂ ಇರುವನು. ಐದು ಮುಖಗಳು, ಹತ್ತು ಬಾಹುಗಳು, ಮೂರು ಕಣ್ಣುಗಳು ಇವನಿಗಿರುವುವು. ವೃಷಭಧ್ವಜನಾದ ಈಶ್ವರನು, ಕರ್ಪೂರದಂತೆ ಶುಭ್ರವಾದ ಮೈಬಣ್ಣವುಳ್ಳವನು. ದಿವ್ಯವಾದಅಂಗಗಳಿಂದ ಒಪ್ಪುತ್ತಿರುವನು. ತಲೆಯಲ್ಲಿ ಚಂದ್ರಕಲೆಯನ್ನು ತಳೆದು, ಜಟಾಜೂಟವನ್ನು ಧರಿಸಿ, ವ್ಯಾಘ್ರಚರ್ಮವನ್ನು ಹೊದ್ದು, ಗಜಚರ್ಮವನ್ನು ಉಟ್ಟಿರುವನು. ಶುಭಕರವಾದ ವಾಸುಕಿಯಿಂದ ಸುತ್ತುವರಿಯಲ್ಪಟ್ಟ ಅವಯವಗಳುಳ್ಳವನು. ಪಿನಾಕವೇ ಮೊದಲಾದ ಆಯುಧಗಳನ್ನು ಧರಿಸಿರುವವನು.

ಯಾರ ಮುಂದೆ ಯಾವಾಗಲೂ ಅಷ್ಟಸಿದ್ಧಿಗಳು ನರ್ತನವನ್ನು ಮಾಡುತ್ತಿ ರುವರೋ, ಭಕ್ತರು ಗುಂಪು ಗುಂಪಾಗಿ ನಿಂತು, ‘ಜಯ, ಜಯ’ ಎಂದು ಉಚ್ಚರಿ ಸುತ್ತಿರುವರೋ, ಮತ್ತು ದುಸ್ಸಹವಾದ ತೇಜಸ್ಸಿನಿಂದ ಯಾರನ್ನು ನೋಡಲು ಸಾಧ್ಯವಿಲ್ಲವೋ, ಅಂತಹ ದೇವಸೇವಿತನೂ, ಎಲ್ಲ ಪ್ರಾಣಿಗಳಿಗೂ ರಕ್ಷಕನೂ, ಪ್ರಸನ್ನವಾದ ಮುಖಕಮಲವುಳ್ಳವನೂ, ವೇದಶಾಸ್ತ್ರಗಳಿಂದ ಸ್ತುತಿಸಲ್ಪಡುವ. ಬ್ರಹ್ಮವಿಷ್ಣುಗಳಿಂದ ಸ್ತೋತ್ರಮಾಡಲ್ಪಟ್ಟವನೂ, ಭಕ್ತವತ್ಸಲನೂ, ಆನಂದಸ್ವರೂಪನೂ ಆದ ಶಿವನನ್ನು ಆವಾಹಿಸುವೆ – ಎಂದು ಮನಸ್ಸಿನಲ್ಲಿ ಧ್ಯಾನಿಸಿ, ಆತನಿಗೆ ಆಸನವನ್ನು ಕಲ್ಪಿಸಬೇಕು. ಪಾದ್ಯವನ್ನು, ಅರ್ಘ್ಯವನ್ನು ನೀಡಬೇಕು. ಪರಮಾತ್ಮನಾದ ಶಂಭುವಿಗೆ ಆಚಮನವನ್ನು ಒಪ್ಪಿಸಿ ಸಂತೋಷದಿಂದ ಶಂಕರನನ್ನು ಪಂಚಾಮೃತದ್ರವ್ಯಗಳಿಂದ ಅಭಿಷೇಕ ಮಾಡಬೇಕು.

ಉಚಿತವಾದ ವೇದಮಂತ್ರಗಳಾಗಲೀ, ಇಲ್ಲವೇ ಚತುರ್ಥ್ಯಂತವಾದ ಶಿವನ ನಾಮಮಂತ್ರ ಗಳಿಂದಾಗಲಿ, ಭಕ್ತಿಯಿಂದ ಶಿವನಿಗೆ ದ್ರವ್ಯಗಳನ್ನು ಅರ್ಪಿಸಬೇಕು. ತನಗೆ ಇಷ್ಟವಾದ ವಸ್ತುವಿನಿಂದ ಶಂಕರನ ಮೇಲೆ ಅಭಿಷೇಕವನ್ನು ಮಾಡಬೇಕು. ಬಳಿಕ ‘ವಾರುಣ’ ಎಂದರೆ ಶುದ್ಧೋದಕದಿಂದ ಶಿವನಿಗೆ ಸ್ನಾನ ಮಾಡಿಸಬೇಕು.ಸುವಾಸನಾಪೂರಿತವಾದ ಚಂದನವನ್ನೂ ಇತರ ಲೇಪಗಳನ್ನೂ ಪ್ರಯತ್ನಪೂರ್ವಕವಾಗಿ ಒಪ್ಪಿಸಿ ಸುಗಂಧಪೂರಿತವಾದ ನೀರು ಧಾರಾಕಾರವಾಗಿ ಬೀಳುವಂತೆ ಮಾಡಬೇಕು. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.