ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಿಶ್ವರೂಪ ತೋರಿಸಿದ ನಟರಾಜ

ಭಾಗ 243

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 7 ಅಕ್ಟೋಬರ್ 2022, 0:00 IST
Last Updated 7 ಅಕ್ಟೋಬರ್ 2022, 0:00 IST
   

ಮನೆಗೆ ಬಂದವರನ್ನೆಲ್ಲ ಗೌರವಿಸಿ ಬೀಳ್ಕೊಟ್ಟ ನಂತರ ಹಿಮವಂತ ಸ್ನಾನಮಾಡಲು ಗಂಗಾನದಿಗೆ ತೆರಳಿದ. ಇದೇ ಸಮಯದಲ್ಲಿ ಶಂಕರ ನಟನ ವೇಷವನ್ನು ಧರಿಸಿ ಮೇನಾದೇವಿಯ ಬಳಿಗೆ ಬಂದ. ಎಡಗೈನಲ್ಲಿ ಶೃಂಗವನ್ನೂ, ಬಲಗೈನಲ್ಲಿ ಡಮರವನ್ನೂ ಹಿಡಿದಿದ್ದ. ಬಗೆಬಗೆಯಾಗಿ ನರ್ತಿಸಿದ ಶಿವ, ಕೊಂಬನ್ನೂ ಊದುತ್ತಾ, ಡಮರವನ್ನು ಮನೋಹರವಾಗಿ ಆಡಿಸುತ್ತಾ, ವೀಣೆಯಿಂದ ನಾನಾ ನಾದ ನುಡಿಸಿದ. ಶಂಕರನ ಚಿತ್ತಾಕರ್ಷಕ ನರ್ತನವನ್ನು ನೋಡಿ ಮೇನಾದೇವಿಯೂ ಮೋಹಗೊಂಡಳು. ಗಿರಿಜೆ ಮೊದಲಿಗೆ ಮೋಹಿತಳಾದರೂ, ತಕ್ಷಣ ಅವಳು ತನ್ನ ತಪಃಶಕ್ತಿಯಿಂದ ನಿಜಾಂಶ ತಿಳಿದುಕೊಂಡಳು.

ಪಾರ್ವತಿಯ ಕಣ್ಣಿಗೆ ನಟವೇಷಧಾರಿಯ ಹೃದಯದಲ್ಲಿ ಈಶ್ವರ ತ್ರಿಶೂಲ ಹಿಡಿದು ನಿಂತಿದ್ದು ಕಾಣಿಸಿತು. ಹೃದಯಶಿವ ಶರೀರಕ್ಕೆಲ್ಲಾ ವಿಭೂತಿ ಬಳಿದುಕೊಂಡು, ಅಸ್ಥಿಮಾಲೆಯನ್ನು ಕೊರಳಿಗೆ ಧರಿಸಿ ನಿಂತಿದ್ದ. ಅವನ ಮುಖವು ತ್ರಿನೇತ್ರದಿಂದ ಕಂಗೊಳಿಸುತ್ತಿತ್ತು. ಸರ್ಪಗಳನ್ನು ಯಜ್ಞೋಪವೀತದಂತೆ ಮೈಗೆ ಸುತ್ತಿಕೊಂಡಿದ್ದ. ಇಂಥ ರುದ್ರ ಆಕೆಯ ಮುಂದೆ ನಿಂತು ‘ನನ್ನ ಮದುವೆಯಾಗು’ ಎಂದು ಕೇಳಿದಂತೆ ಭಾಸವಾಯಿತು. ಶಿವನಿಗೆ ನಮಸ್ಕರಿಸಿ, ‘ನೀನೇ ನನ್ನ ಪತಿಯಾಗು’ ಎಂದು ಕೋರಿದಳು. ಶಿವ ‘ತಥಾಸ್ತು’ ಅಂತ ಗಿರಿಜೆಗೆ ಹೇಳಿ ಅಂತರ್ಧಾನನಾದಂತೆ ಅನಿಸಿತು.

ಹೀಗೆ ಶಿವ ಮತ್ತು ಗಿರಿಜೆ ಅಂತರಂಗದಲ್ಲಿ ಕೋರಿಕೆ-ಈಡೇರಿಕೆ ವಿನಿಮಯವಾಗುತ್ತಿದ್ದರೆ, ಬಹಿರಂಗದಲ್ಲಿ ತಾಯಿ ಮೇನಾದೇವಿ ನಟರಾಜನ ನರ್ತನ, ಚಮತ್ಕಾರಗಳಿಂದ ಸಂತುಷ್ಟಳಾಗಿ ಚಿನ್ನದ ಪಾತ್ರೆಗಳಲ್ಲಿ ರತ್ನಗಳನ್ನಿಟ್ಟು ಅವನಿಗೆ ಕೊಡಲು ಹೋದಳು. ಆದರೆ ರತ್ನಗಳನ್ನು ನಟರಾಜ ಸ್ವೀಕರಿಸಲಿಲ್ಲ. ಇದರ ಬದಲು ಗಿರಿಜೆಯನ್ನು ತನಗೆ ಕೊಡಬೇಕೆಂದು ಯಾಚಿಸಿದ. ಅವನ ಮಾತನ್ನು ಕೇಳಿ ಮೇನಾದೇವಿ ತುಂಬಾ ಕೋಪಗೊಂಡು, ಹೊರಗೆ ಕಳುಹಿಸಲು ಉದ್ಯುಕ್ತಳಾದಳು.

ADVERTISEMENT

ಅಷ್ಟರಲ್ಲಿ ಗಂಗಾನದಿಗೆ ಸ್ನಾನಕ್ಕಾಗಿ ಹೋಗಿದ್ದ ಹಿಮವಂತ ಹಿಂದಿರುಗಿದ. ಅವನು ಅಂಗಳದಲ್ಲಿ ನಿಂತಿರುವ ನಟನ ವೇಷಧಾರಿ ಶಿವನನ್ನು ನೋಡಿದ. ಮಗಳು ಗಿರಿಜೆಯನ್ನು ಕೋರಿದ ವಿಷಯವನ್ನು ಮೇನಾದೇವಿಯಿಂದ ಕೇಳಿ ಹಿಮವಂತ ಕೋಪಗೊಂಡ. ಕೂಡಲೇ ನಟನನ್ನು ಹೊರಗೆ ಕಳುಹಿಸುವಂತೆ ಸೇವಕರಿಗೆ ಆಜ್ಞೆ ಮಾಡಿದ. ಆದರೆ ತೇಜಸ್ಸಿನಿಂದ ಜ್ವಲಿಸುತ್ತಲಿರುವ ನಟರಾಜನನ್ನು ಹೊರಗೆ ಕಳುಹಿಸಲು ಯಾರಿಗೂ ಸಾಧ್ಯವಾಗಲಿಲ್ಲ.

ಇಂಥ ಸಂದರ್ಭದಲ್ಲಿ ನಟರಾಜ ತನ್ನ ವಿಶ್ವರೂಪವನ್ನು ಹಿಮವಂತನಿಗೆ ತೋರಿಸಿದ. ಮೊದಲಿಗೆ ತನ್ನೊಳಗೆ ವಿಷ್ಣುರೂಪವನ್ನು ಪ್ರದರ್ಶಿಸಿದ. ಹಿಮವಂತ ಪೂಜೆ ಸಂದರ್ಭದಲ್ಲಿ ಹರಿಗೆ ಯಾವಾವ ಹೂವು ಮುಡಿಸಿದ್ದನೋ, ಅವೆಲ್ಲವೂ ನಟರಾಜನ ಶಿರಸ್ಸು ಮತ್ತು ಶರೀರಗಳಲ್ಲಿತ್ತು. ನಂತರ ನಟರಾಜನಲ್ಲಿ ಜಗತ್ಕರ್ತನಾದ ಬ್ರಹ್ಮನನ್ನು, ಜಗತ್ತಿಗೆ ಚಕ್ಷುಸ್ಸಿನ ರೂಪನಾದ ಸೂರ್ಯನನ್ನು, ಪಾರ್ವತಿಯೊಡನೆ ನಗುತ್ತಿರುವ ರುದ್ರನನ್ನು ಕಂಡ. ಅಂತಿಮವಾಗಿ ಪ್ರಕಾಶಸ್ವರೂಪನಾದ, ಅವಯವಗಳಿಲ್ಲದ ಪರಿಶುದ್ಧವಾದ ಪರಬ್ರಹ್ಮವಸ್ತುವನ್ನು ನಟರಾಜನ ಶರೀರದಲ್ಲಿ ನೋಡಿ ಧನ್ಯನಾದ.ಆದರೆ ಗಿರಿಜೆಯನ್ನು ಕೊಡಲು ಸಮ್ಮತಿಸಲಿಲ್ಲ. ಆಗ ನಟಭಿಕ್ಷುವು ಅಲ್ಲಿಯೇ ಅಂತರ್ಧಾನನಾದ. ಕೆಲಹೊತ್ತಿನ ನಂತರ ಮೇನಾದೇವಿ-ಹಿಮವಂತರಿಗೆ ಶಿವನು ಭಿಕ್ಷುರೂಪದಿಂದ ಬಂದು ತಮ್ಮನ್ನು ಮೋಸಗೊಳಿಸಿದ ಎಂಬುದು ಗೊತ್ತಾಯಿತು.

ಇಲ್ಲಿಗೆ ಶ್ರೀ ಶಿವಮಹಾಪುರಾಣದಲ್ಲಿ ರುದ್ರಸಂಹಿತೆಯ ಮೂರನೇ ಖಂಡವಾದ, ಪಾರ್ವತೀಖಂಡದಲ್ಲಿ ಮೂವತ್ತನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.