ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಕೊಲ್ಲಲು ಮುಂದಾದ ಶಿವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 15 ನವೆಂಬರ್ 2022, 18:16 IST
Last Updated 15 ನವೆಂಬರ್ 2022, 18:16 IST
   

ಅಗ್ನಿಯ ಮುಂದೆ ಕುಳಿತ ಶಿವ, ಪಾರ್ವತಿಯನ್ನು ತನ್ನ ಬಲಭಾಗದ ತೊಡೆಯಲ್ಲಿ ಕುಳ್ಳಿರಿಸಿಕೊಂಡ. ನಂತರ ವಿವಾಹಹೋಮವನ್ನು ನೆರವೇರಿಸಿದ. ಗಿರಿಜೆಯ ಸಹೋದರನಾದ ಮೈನಾಕ ಲಾಜಾಂಜಲಿಯನ್ನು ಪಾರ್ವತಿಯ ಕೈಗೆ ಕೊಡುತ್ತಿದ್ದ. ಲಾಜಾಹೋಮವನ್ನು ಮುಗಿಸಿ, ಪಾರ್ವತೀ-ಪರಮೇಶ್ವರರು ಸಂತೋಷದಿಂದ ಅಗ್ನಿಗೆ ಪ್ರದಕ್ಷಿಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮನಿಂದ ಅಚಾತುರ್ಯವೊಂದು ನಡೆದು ಶಿವನ ಕೋಪಕ್ಕೆ ತುತ್ತಾದ.

ವಿವಾಹ ಸಂದರ್ಭದಲ್ಲಿ ಪಾರ್ವತೀದೇವಿಯ ಸುಂದರವಾದ ಚರಣಗಳಲ್ಲಿ ಚಂದ್ರನಂತೆ ಹೊಳೆಯುತ್ತಿದ್ದ ನಖಗಳನ್ನು ನೋಡಿದ ಬ್ರಹ್ಮನ ಮನಸ್ಸಿನಲ್ಲಿ ಮನ್ಮಥವಿಕಾರ ಉಂಟಾಯಿತು. ಇದರಿಂದ ಅವನ ಶರೀರದಿಂದ ವೀರ್ಯವು ಸ್ಖಲನವಾಗಿ ಕೆಳಗೆ ಬಿದ್ದಿತು. ಹೀಗೆ ಬಿದ್ದ ರೇತಸ್ಸನ್ನು ಬ್ರಹ್ಮ ತುಂಬಾ ನಾಚಿಕೆ-ಭಯಗಳಿಂದ ಕಾಲುಗಳಿಂದ ಮುಚ್ಚಲು ಯತ್ನಿಸಿದ. ಇದನ್ನು ಗಮನಿಸಿದ ಮಹಾದೇವನಿಗೆ ತುಂಬಾ ಕೋಪ ಬಂದು, ಕಾಮವಶನಾದ ಬ್ರಹ್ಮನನ್ನು ಕೊಲ್ಲಲು ಉದ್ಯುಕ್ತನಾದ.

ಆಗ ಅಲ್ಲಿ ಸೇರಿದ್ದವರೆಲ್ಲರೂ ಶಿವನ ಕೋಪ ನೋಡಿ ಭಯದಿಂದ ಹಾಹಾಕಾರ ಮಾಡಿದರು. ಉರಿಕೋಪದಿಂದ ಕುದಿಯುುತ್ತಾ ಬ್ರಹ್ಮನನ್ನು ಸಂಹರಿಸಲು ಮುಂದಾದ ಶಿವನನ್ನು ಹರಿ ಮೊದಲಾದ ದೇವತೆಗಳು ತಡೆದು, ಶಾಂತನಾಗುವಂತೆ ಅನೇಕ ಬಗೆಯಲ್ಲಿ ಸ್ತುತಿಸಿದರು. ‘ಜಗದ್ರೂಪನಾದ ನೀನು ಎಲ್ಲಾ ವಸ್ತುಗಳಿಗೂ ಭಾವನೆಗಳಿಗೂ ಕಾರಣಕರ್ತ. ಸೃಷ್ಟಿಯ ಚರಾಚರವೆಲ್ಲವೂ ನಿನ್ನ ಅಂಶವೇ ಆಗಿವೆ. ನಿನಗೆ ಜನ್ಮನಾಶ ಮೊದಲಾದ ವಿಕಾರಗಳಿಲ್ಲ. ನೀನು ನಿತ್ಯನು, ನಿರ್ಗುಣನು. ನಿನಗೆ ಆದಿ ಮತ್ತು ಅಂತ್ಯಗಳಿಲ್ಲ, ಮಧ್ಯವೂ ಇಲ್ಲ. ಒಳಗೆ ಹೊರಗೆ ಎಂಬ ಭೇದವೂ ನಿನಗಿಲ್ಲ. ನೀನು ನಾಶವಿಲ್ಲದ ಅವಿನಾಶಿ. ಸತ್ವಸ್ವರೂಪವಾದ, ಜ್ಞಾನಸ್ವರೂಪವಾದ ಸುಖರೂಪವೂ ಆದ ಬ್ರಹ್ಮವಸ್ತುವೇ ನೀನು.ಜಿತೇಂದ್ರಿಯರಾದ ಮುನಿಗಳು ಮುಕ್ತಿಯನ್ನು ಪಡೆಯಲು ನಿನ್ನ ಚರಣಕಮಲವನ್ನು ಆರಾಧಿಸುವರು. ನೀನು ಪರಿಪೂರ್ಣವೂ ಸತ್ಯವೂ ನಿರ್ಗುಣವೂ ಆನಂದಸ್ವರೂಪವೂ ಅಗೋಚರವೂ ನಿರ್ವಿಕಾರವೂ ಜಗದ್ರೂಪವೂ ಆದ ಪರಬ್ರಹ್ಮವಸ್ತುವಾಗಿರುವೆ. ನೀನು ಜಗತ್ತನ್ನು ಸೃಷ್ಟಿಸುತ್ತಾ, ಪಾಲಿಸುತ್ತಾ, ಸಂಹರಿಸುತ್ತಾ ಇರುವೆ.

ADVERTISEMENT

ಈ ಜಗತ್ತಿನ ಜನರ ದೃಷ್ಟಿಯಲ್ಲಿ ನೀನು ಈಶ್ವರ. ವಸ್ತುತಃ ನೀನು ನಿರ್ಗುಣನಾದ ಪರಬ್ರಹ್ಮವಸ್ತು. ಪ್ರಪಂಚದಲ್ಲಿ ನಿನ್ನನ್ನು ಬಿಟ್ಟು ಬೇರೆ ವಸ್ತುವಿಲ್ಲ. ಸತ್-ಅಸತ್ ಎಂದು, ವ್ಯಕ್ತ-ಅವ್ಯಕ್ತ ಎಂದು ಹೇಳಲ್ಪಡುವ ನಿನಗೆ ಸಮಾನವಾದ ವಸ್ತುವು ಬೇರೊಂದಿಲ್ಲ. ಆದುದರಿಂದಲೇ ನಿನ್ನನ್ನು ಅದ್ವಿತೀಯನೆನ್ನುವರು. ಚಿನ್ನದಿಂದಾದ ಆಭರಣಗಳು ಚಿನ್ನದಿಂದ ಹೊರತಾದವುಗಳು ಅಂತ ಹೇಗೆ ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ನಿನ್ನಿಂದಾದ ಈ ಜಗತ್ತು ನಿನ್ನ ಹೊರತು ಬೇರೆಯದೆಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಅಜ್ಞಾನದಿಂದ ಕೆಲವರು ನಿನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದಕಾರಣ ಜನರಲ್ಲಿರುವ ನಿನ್ನ ವಿಷಯಕವಾದ ಭ್ರಮೆಯನ್ನು ತೊಲಗಿಸಬೇಕು. ಪರಿಶುದ್ಧನಾದ ನಿನ್ನಲ್ಲಿ ವಸ್ತುತಃ ಅಜ್ಞಾನಭ್ರಮೆಗಳು ಇಲ್ಲವೇ ಇಲ್ಲ. ನೀನು ಈ ಜಗತ್ತಿಗೆ ಆದಿಯಾದರೂ, ನಿನಗೆ ಆದಿಯಿಲ್ಲ. ಅಂತ್ಯ ಎಂಬುದು ಇಲ್ಲವೇ ಇಲ್ಲ. ನೀನು ಪ್ರಕೃತಿಗಿಂತಲೂ ಉತ್ತಮವಾದ ಪರಮಪುರುಷ. ಜಗದೊಡೆಯನಾದ ಪರಮೇಶ್ವರ, ನಿರ್ವಿಕಾರವಾದ ಪರವಸ್ತು. ನಿನ್ನ ದರ್ಶನದಿಂದಲೇ ನಾವು ಧನ್ಯರಾದೆವು ಪ್ರಭು. ಅನುಗ್ರಹ ಮಾಡಿ, ಬ್ರಹ್ಮನ ತಪ್ಪನ್ನು ಕ್ಷಮಿಸು’ ಎಂದು ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.