ADVERTISEMENT

ವೇದವ್ಯಾಸರ ಶಿವಪುರಾಣಸಾರ -260 | ವಿಶ್ವಕರ್ಮನ ಕೌಶಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 27 ಅಕ್ಟೋಬರ್ 2022, 21:15 IST
Last Updated 27 ಅಕ್ಟೋಬರ್ 2022, 21:15 IST
   

ಮದುವೆ ದಿಬ್ಬಣ ಹಿಮವಂತನ ರಾಜಧಾನಿ ತಲುಪುವ ಮುನ್ನ ಹಿಮವಂತನಿಗೆ ವಿಷಯ ತಿಳಿಸುವಂತೆ ನಾರದನನ್ನು ಹರಿ ಕಳುಹಿಸಿದ. ನಾರದನು ವಿಶ್ವಕರ್ಮ ರಚಿಸಿದ ಅದ್ಭುತವಾದ ವಿವಾಹಮಂಟಪವನ್ನು ನೋಡಿ ಬೆಕ್ಕಸ ಬೆರಗಾದ.

ಮುತ್ತು–ರತ್ನಗಳಿಂದ ಕೆತ್ತಲ್ಪಟ್ಟಿದ್ದ ಮಂಟಪಕ್ಕೆ ಚಿನ್ನದ ಕಳಸಗಳನ್ನು ಹಾಕಿದ್ದರು. ಅದಕ್ಕೆ ಬಾಳೆಗಂಬ ಮೊದಲಾದ ಮಂಗಳವಸ್ತುಗಳಿಂದ ಅಲಂಕರಿಸಿದ್ದರು. ವಿವಾಹಮಂಟಪಕ್ಕೆ ಸಾವಿರ ಕಂಬಗಳಿದ್ದವು. ಅದರ ಹಸೆಜಗುಲಿಯಂತೂ ತುಂಬಾ ಅದ್ಭುತವಾಗಿತ್ತು. ಮಂಟಪವನ್ನು ನೋಡುತ್ತಾ ನಾರದನಿಗೆ ಆಯಾಸವಾಯಿತು. ಅಲ್ಲೇ ವಿಶ್ರಾಂತಿ ಪಡೆಯಲು ಕುಳಿತ. ಅವನಿಗೆ ಕುಳಿತಲ್ಲೆ ಮಂಪರು ಆವರಿಸಿ ನಿದ್ದೆ ಹೋದ.

ಸ್ವಲ್ಪ ಹೊತ್ತಿನ ನಂತರ ನಾರದನಿಗೆ ಎಚ್ಚರವಾಗಿ ಕಣ್ತೆರೆದಾಗ ಎದುರಲ್ಲಿ ಹಿಮವಂತ ನಿಂತಿದ್ದ. ಅಲ್ಲೇ ಸಜೀವರಾಗಿದ್ದಂತೆ ನಿರ್ಮಿಸಿದ್ದ ಹರಿಹರ ಮೊದಲಾದವರ ಮೂರ್ತಿಗಳನ್ನು ನೋಡಿ ‘ಹಿಮವಂತನೆ, ಹರಿಮೊದಲಾದ ದೇವತೆಗಳು, ಮಹರ್ಷಿಗಳು ಇಲ್ಲಿಗೆ ಬಂದುಬಿಟ್ಟರೇನು?’ ಎಂದು ಪ್ರಶ್ನಿಸಿದ. ನಾರದನ ಮಾತನ್ನು ಕೇಳಿ ಹಿಮವಂತ, ‘ನಾರದ, ಶಿವನ ಮದುವೆ ದಿಬ್ಬಣ ಇನ್ನೂ ಇಲ್ಲಿಗೆ ಬಂದಿಲ್ಲ. ಇದೆಲ್ಲವೂ ವಿಶ್ವಕರ್ಮನ ಕೃತ್ರಿಮಶಿಲ್ಪಗಳು. ಇವುಗಳನ್ನು ನೋಡಿ ಭ್ರಮಿಸ ಬೇಡ. ನಿನ್ನ ಆಯಾಸ ಕಡಿಮೆಯಾಗಿಲ್ಲ. ಆದ್ದರಿಂದ ಭೋಜನವನ್ನು ಮಾಡಿ, ಸ್ವಲ್ಪ ವಿಶ್ರಾಂತಿ ಪಡೆದುಕೊ’ಎಂದ.

ADVERTISEMENT

ಹಾಗೆಯೇ ಆಗಲಿ ಎಂದ ನಾರದ ಭೋಜನಮಾಡಿ, ಹಿಮವಂತನ ಮನೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದುಕೊಂಡ. ನಂತರ, ಹಿಮವಂತನ ಮಗ ಮೈನಾಕ ತನ್ನ ಪರ್ವತಬಂಧುಗಳಾದ ಸಹ್ಯ, ಮೇರು, ಮತ್ತಿತರೊಡನೆ ಸಂತೋಷದಿಂದ ಶಿವನ ಬಳಿಗೆ ತೆರಳಿದ. ಬ್ರಹ್ಮ, ವಿಷ್ಣು ಮತ್ತಿತರ ದೇವತೆಗಳಿಂದ ಕೂಡಿದ್ದ ಮದುವೆಯ ದಿಬ್ಬಣದಲ್ಲಿ ಮಹದೇವನಿಗೆ ಮೈನಾಕ ಮತ್ತವನ ಪರ್ವತಬಂಧುಗಳು ಭಕ್ತಿಯಿಂದ ನಮಸ್ಕರಿಸಿದರು.

ಇತ್ತ ಬ್ರಹ್ಮ, ವಿಷ್ಣು, ಇಂದ್ರ ಮೊದಲಾದ ದೇವತೆಗಳೆಲ್ಲರೂ ನಾರದನ ಸಪ್ಪೆಯ ಮೋರೆಯನ್ನು ನೋಡಿ ಆತಂಕಿತರಾದರು. ಆಗ ಅವರೆಲ್ಲ ‘ಎಲೈ ನಾರದ, ನೀನು ತುಂಬಾ ಸುಸ್ತಾದಂತೆ ತೋರುತ್ತಿದ್ದೀಯ. ಹಿಮವಂತ ನಿನ್ನನ್ನು ಸರಿಯಾಗಿ ಆದರಿಸಲಿಲ್ಲವೇ? ಮೈನಾಕ, ಸಹ್ಯ, ಮೇರು ಮೊದಲಾದ ಪರ್ವತೋತ್ತಮರು ಅಲಂಕೃತರಾಗಿ ಸಂಭ್ರಮದಿಂದ ಬಂದಿದ್ದಾರೆ? ನೀನು ಏಕೆ ಹೀಗಿದ್ದೀಯಾ? ಶಂಕರನಿಗೆ ಹಿಮವಂತ ತನ್ನ ಮಗಳನ್ನು ಕೊಡುವನೋ? ಇಲ್ಲವೋ? ಅಲ್ಲಿ ನಡೆದ ಸಮಾಚಾರವೇನು? ಎಲ್ಲವನ್ನು ವಿಶದವಾಗಿ ಹೇಳು’ ಎಂದು ಒತ್ತಾಯಿಸಿದರು.

ಹರಿ, ಬ್ರಹ್ಮ ಮೊದಲಾದವರ ಮಾತನ್ನು ಕೇಳಿ, ವಿಶ್ವಕರ್ಮನ ಮಾಯೆಯಿಂದ ಭ್ರಮೆಯ ಮಂಪರಿನಲ್ಲಿದ್ದ ನಾರದ ಎಚ್ಚೆತ್ತು, ‘ಓ ದೇವೋತ್ತಮರೇ, ನೀವು ಸಂಶಯಪಡುವಂಥದ್ದು ಏನೂ ಆಗಿಲ್ಲ. ವಿಶ್ವಕರ್ಮನು ದೇವತೆಗಳೆಲ್ಲರೂ ಮೋಹಗೊಳ್ಳುವಂತೆ ಅದ್ಭುತವಾದ ಶಿಲ್ಪವನ್ನು ರಚಿಸಿದ್ದಾನೆ. ಅದನ್ನು ನೋಡಿ ನನ್ನ ಮನಸ್ಸು ಮಾಯಾಸೆಳೆತದಲ್ಲಿ ಸಿಲುಕಿದೆ. ಹೀಗಾಗಿ ನನ್ನ ಮನಃಸ್ಥಿತಿ ನಿಮ್ಮನ್ನು ಸಂಶಯಪಡುವಂತೆ ಮಾಡಿದೆ’ ಎಂದ. ನಂತರ ಇಂದ್ರನತ್ತ ತಿರುಗಿ, ‘ಎಲೈ ದೇವೇಂದ್ರ, ಹಿಂದೆ ನೀನು ವಿಶ್ವಕರ್ಮನನ್ನು ಮೋಹಗೊಳಿಸಿದ್ದೆ. ಅವನೀಗ ಹಿಮವಂತನ ಮನೆಯಲ್ಲಿ ತನ್ನ ಶಿಲ್ಪಚಾತುರ್ಯದಿಂದ ನಿನ್ನನ್ನು ಮೋಹಗೊಳಿಸಿ ಸೇಡು ತೀರಿಸಿಕೊಳ್ಳುವುದು ನಿಶ್ಚಿತ’ ಎಂದಾಗ, ಇಂದ್ರ ಭಯವಿಹ್ವಲನಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.