ADVERTISEMENT

ವೇದವ್ಯಾಸರ ಶಿವಪುರಾಣಸಾರ ಭಾಗ 54: ಶಿವಲಿಂಗಗಳ ಪೂಜಾ ವಿಧಾನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 24 ಫೆಬ್ರುವರಿ 2022, 19:30 IST
Last Updated 24 ಫೆಬ್ರುವರಿ 2022, 19:30 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ    

ಸೂತಮುನಿಯು ಈಗ ಶಿವನನ್ನು ಪೂಜಿಸುವ ವಿಧಾನವನ್ನು ತಿಳಿಸುತ್ತಾನೆ. ಓಂಕಾರವೆಂದು ಪ್ರಸಿದ್ಧವಾಗಿರುವ ಪ್ರಣವ ಮೊದಲ ನೆಯ ಲಿಂಗ. ಅದು ಸಕಲ ಇಷ್ಟಾರ್ಥಗಳನ್ನು ಉಂಟುಮಾಡುವುದು. ಸೂಕ್ಷ್ಮ ಪ್ರಣವರೂಪವಾದುದು ಸೂಕ್ಷ್ಮಲಿಂಗ. ಇದು ನಿರಾಕಾರವಾದುದು; ಸಾಕಾರವಾದುದು ಸ್ಥೂಲಲಿಂಗ. ಸೂಕ್ಷ್ಮಲಿಂಗ ಮತ್ತು ಸ್ಥೂಲಲಿಂಗಗಳನ್ನು ಪೂಜಿಸುವುದು ಅಥವಾ ಜಪಿಸುವುದೇ ತಪಸ್ಸು. ಅವುಗಳೆರಡೂ ಸಾಕ್ಷಾತ್ತಾಗಿ ಮುಕ್ತಿಯನ್ನುಂಟುಮಾಡುವುದು. ಪ್ರಯತ್ನದಿಂದ ನಿರ್ಮಿಸುವಂತಹ ಅನೇಕ ಲಿಂಗಗಳಿವೆ. ಅವುಗಳನ್ನು ವಿಸ್ತಾರವಾಗಿ ಹೇಳಲು ಶಿವನೊಬ್ಬನೇ ಸಮರ್ಥ, ಇನ್ನಾರಿಗೂ ಆ ಶಕ್ತಿಯಿಲ್ಲ ಎಂದು ಸೂತಮುನಿ ಪಂಚಲಿಂಗಗಳ ವಿವರ ನೀಡುತ್ತಾನೆ.

ಸ್ವಯಂಭೂಲಿಂಗವು ಮೊದಲನೆಯದು; ಬಿಂದುಲಿಂಗ ಎರಡನೆಯದು; ಪ್ರತಿಷ್ಠಿತಲಿಂಗ ಮೂರನೆಯದು; ನಾಲ್ಕನೆಯದು ಚರಲಿಂಗ; ಐದನೆಯದು ಗುರುಲಿಂಗ. ನಾದರೂಪದಿಂದ ಭೂಮಿಯನ್ನು ಒಡೆದು ತಾನಾಗಿಯೇ ಲಿಂಗರೂಪವಾಗಿ ಉದ್ಭವಿಸಿದರೆ ಆ ಲಿಂಗಕ್ಕೆ ‘ಸ್ವಯಂಭೂಲಿಂಗ’ ಎಂದು ಹೆಸರು. ಆ ಸ್ವಯಂಭೂ ಉದ್ಭವಲಿಂಗವನ್ನು ಪೂಜಿಸಿದರೆ ಜ್ಞಾನವು ತಾನಾಗೇ ಅಭಿವೃದ್ಧಿಯಾಗುವುದು.

ಚಿನ್ನ–ಬೆಳ್ಳಿ ಮುಂತಾದವುಗಳಲ್ಲಿ ಶುದ್ಧವಾಗಿ ಓಂಕಾರದೊಡನೆ ಲಿಂಗವನ್ನು ಬರೆದು, ಅದರ ಮೇಲೆ ಲಿಂಗಪ್ರತಿಷ್ಠೆ ಮತ್ತು ಆವಾಹನಾದಿಗಳನ್ನು ಮಾಡಿದ ಲಿಂಗಕ್ಕೆ ‘ಬಿಂದುಲಿಂಗ’ ಎಂದು ಹೆಸರು. ಚಲಿಸದಿರುವ ಪರ್ವತಾದಿಗಳು ಬಿಂದುಲಿಂಗಗಳು; ಚಲಿಸುವ ಪ್ರಾಣಿ ಮೊದಲಾದವು ನಾದಲಿಂಗ ಗಳು. ಈ ಚರಾಚರವಸ್ತುಗಳೆಲ್ಲವೂ ಶಿವಸ್ವರೂಪಗಳೆಂದು ತಿಳಿಯಬೇಕು. ಕೈನಿಂದ ಬರೆದಂತಹ ಯಂತ್ರ ಸ್ಥಿರಲಿಂಗ. ಇದರಲ್ಲಿ ಶಿವನನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಬೇಕು. ಆತ್ಮಸ್ವರೂಪಸಿದ್ಧಿಗಾಗಿ ಶುದ್ಧವಾದ ಮಂಡಲದಲ್ಲಿ ಮಂತ್ರಪೂರ್ವಕವಾಗಿ ಸ್ವಹಸ್ತದಿಂದ ಪ್ರತಿಷ್ಠಿಸಿದ ಲಿಂಗಕ್ಕೆ ‘ಪೌರುಷಲಿಂಗ’ ಅಥವಾ ‘ಪ್ರತಿಷ್ಠಿತಲಿಂಗ’ ಎಂದು ಹೆಸರು. ಐಶ್ವರ್ಯ ವಂತರಾದವರು ಶಿಲ್ಪಿಯ ಸಹಾಯದಿಂದ ನಿರ್ಮಿಸಿ ಸ್ಥಾಪಿಸಲ್ಟಟ್ಟ ಲಿಂಗವೆ ಪ್ರಾಕೃತಲಿಂಗ. ಅದು ಪ್ರಕೃತಿಯ ಸಂಬಂಧವಾದ ಲಿಂಗ.

ADVERTISEMENT

ಬಹಳ ಕಾಲವಿರುವಂಥದ್ದು ಪೌರುಷಲಿಂಗ; ವಿರಳ ಕಾಲವಿರುವಂಥದ್ದು ಪ್ರಾಕೃತಲಿಂಗ. ಶರೀರದಲ್ಲಿ ನಾಭಿ, ಜಿಹ್ವಾ, ಮೂಗಿನ ಕೊನೆ, ಮುಖ, ಸೊಂಟ, ಲಲಾಟಸ್ಥಾನ, ಶಿರಸ್ಸುಗಳೆಲ್ಲವೂ ಆಧ್ಯಾತ್ಮಿಕವಾದ ಚರಲಿಂಗಗಳು. ಪರ್ವತವು ಪೌರುಷಲಿಂಗವಾದರೆ, ಭೂಮಿಯು ಪ್ರಾಕೃತಲಿಂಗ. ಅಂದರೆ, ಮರ ಪೌರುಷ ಲಿಂಗವಾದರೆ, ಅಲ್ಲಿ ಚಿಗುರುವ ಎಲೆಗಳು, ಹೂಗಳು ಪ್ರಾಕೃತಲಿಂಗವಾಗುತ್ತೆ. ಅಕ್ಕಿಹಿಟ್ಟು ಮುಂತಾದ ಧಾನ್ಯಗಳಿಂದ ಮಾಡಿದ ಲಿಂಗ ಪ್ರಾಕೃತಲಿಂಗ; ನವಣೆ–ಗೋದಿಗಳಿಂದ ಮಾಡಿದ ಲಿಂಗ ಪೌರುಷಲಿಂಗ. ಚರಲಿಂಗಗಳಲ್ಲಿ ರಸಲಿಂಗವು ಮೊದಲನೆಯದು ಮತ್ತು ಪ್ರಶಸ್ತವಾದುದು. ಬಾಣರೂಪವಾಗಿರುವ ಲಿಂಗವು ಕ್ಷತ್ರಿಯರಿಗೆ ಮಹಾರಾಜ್ಯವನ್ನುಂಟು ಮಾಡು ವುದು. ಚಿನ್ನದಿಂದ ನಿರ್ಮಿಸಿದ ಲಿಂಗವು ಹೆಚ್ಚಾದ ಐಶ್ವರ್ಯವನ್ನುಂಟು ಮಾಡು ವುದು. ಶಿಲೆಯ ಲಿಂಗವು ಶುದ್ಧಿಯನ್ನುಂಟು ಮಾಡುವುದು. ಸ್ಫಟಿಕಮಯವಾದ ಬಾಣಲಿಂಗವು ಎಲ್ಲರಿಗೂ ಶುಭವಾದುದು. ಸ್ತ್ರೀಯರಿಗೆ ಪಾರ್ಥಿವ (ಪೃಥ್ವಿ ಯಲ್ಲಿ ಸಿಗುವ ಶಿಲೆ, ಮಣ್ಣು ಮುಂತಾ ದುವು) ಲಿಂಗವು ಶುಭವಾದುದು. ವಿರಕ್ತರಲ್ಲದವರಿಗೆ ಸ್ಫಟಿಕ ಲಿಂಗವು ಶುಭವಾದುದು. ವಿರಕ್ತರಾದವರಿಗೆ ರಸಲಿಂಗವು ಶುಭವಾದುದು. ಗೃಹಸ್ಥನು ಪಾತ್ರೆಗಳಿಂದಲೇ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ಲಿಂಗವನ್ನು ಮನೆಯಲ್ಲಿ ಬೇರೆಯಾದ ಸಂಪುಟಗಳಲ್ಲಿ ಸ್ಥಾಪಿಸಬೇಕು.

ಸನ್ಯಾಸಿಗಳಿಗೆ ಸೂಕ್ಷ್ಮಲಿಂಗವೇ ಶುಭವಾದುದು. ವಿರಕ್ತರಾದ ಸನ್ಯಾಸಿಗಳು ಕೈಗಳಿಂದಲೇ ಪೂಜಿಸಬೇಕು, ತಾವು ತಿನ್ನುವ ಆಹಾರವನ್ನು ದೇವನಿಗೆ ನಿವೇದಿಸಬೇಕು. ವಿಭೂತಿಯನ್ನು ನಿವೇದಿಸಿ, ಪೂಜೆಯಾದ ನಂತರ ಆ ಲಿಂಗವನ್ನು ಶಿರಸ್ಸಿನಲ್ಲಿ ಧರಿಸಬೇಕು. ಲೋಕಾಗ್ನಿ, ವೇದಾಗ್ನಿ ಮತ್ತು ಶಿವಾಗ್ನಿಗ ಳೆಂದು ಮೂರು ವಿಧದ ವಿಭೂತಿಗಳಿವೆ. ಲೋಕಾಗ್ನಿಯಿಂದ ಆದಂತಹ ವಿಭೂತಿಯನ್ನು ದ್ರವ್ಯಶುದ್ಧಿಗಾಗಿ ಸ್ವೀಕರಿಸಬೇಕು.

ಮಣ್ಣು, ಲೋಹ, ಮರಗಳಿಂದ ಮಾಡಿದ ಪಾತ್ರೆಗಳು. ತಿಲ ಮುಂತಾದ ಧಾನ್ಯಗಳು. ವಸ್ತ್ರ ಮುಂತಾದ ದ್ರವ್ಯಗಳು ಮತ್ತು ತಂಗಳು ಪದಾರ್ಥಗಳೆಲ್ಲವೂ ಭಸ್ಮದಿಂದ ಶುದ್ಧಿಯಾಗುವುವು. ನಾಯಿ ಮುಂತಾದುವುಗಳ ಸ್ಪರ್ಶದಿಂದ ಅಪವಿತ್ರ ವಾದ ವಸ್ತುಗಳೂ ಭಸ್ಮದಿಂದ ಶುದ್ಧಿಯಾಗುವುವು. ನೀರಿನಿಂದ ಕಲಸಿಯಾಗಲೀ ಕಲಸದೆಯಾಗಲೀ ಭಸ್ಮವನ್ನು ಯೋಗ್ಯರೀತಿಯಲ್ಲಿ ಧರಿಸಬೇಕು. ಯಾಗ ಮುಂತಾದ ವೈದಿಕಕರ್ಮಗಳಲ್ಲಿನ ಅಗ್ನಿಯಿಂದಾದ ಭಸ್ಮವನ್ನು ಆ ಕರ್ಮಗಳು ಮುಗಿದ ನಂತರ ಧರಿಸ ಬೇಕು. ಹೋಮಾದಿಕರ್ಮಗಳಲ್ಲಿ ಅಗ್ನಿಯಿಂದಾಗುವ ಭಸ್ಮವು ವೇದಾಗ್ನಿ ಭಸ್ಮವೆನಿಸುವುದು. ಆ ಭಸ್ಮವನ್ನು ಧರಿಸಿದರೆ ನಾವು ಮಾಡಿದ ವೈದಿಕ ಕರ್ಮವು ನಮ್ಮಲ್ಲಿ ಆರೋಪಿಸಲ್ಪಡುವುದು ಎಂದು ಸೂತಮುನಿ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.