ADVERTISEMENT

ಹೆದ್ದಾರಿ ಬದಿಯಲ್ಲಿ ಸಗಟು ಹಣ್ಣಿನ ವ್ಯಾಪಾರ

fruits stall

ಚಿಕ್ಕ ರಾಮು
Published 11 ನವೆಂಬರ್ 2018, 19:45 IST
Last Updated 11 ನವೆಂಬರ್ 2018, 19:45 IST
ಹೆಜ್ಜಾಲ ಬಳಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ನಡೆಯುತ್ತಿರುವ ಸಗಟು ಹಣ್ಣಿನ ವ್ಯಾಪಾರ
ಹೆಜ್ಜಾಲ ಬಳಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ನಡೆಯುತ್ತಿರುವ ಸಗಟು ಹಣ್ಣಿನ ವ್ಯಾಪಾರ   

ದಾಳಿಂಬೆ, ಕಿತ್ತಳೆ, ಸೇಬು, ಮೂಸಂಬಿ, ಪಪ್ಪಾಯ, ಬಾಳೆ ಹಣ್ಣು, ದ್ರಾಕ್ಷಿ, ಪೈನಾಪಲ್‌ ಸೇರಿದಂತೆ ರಾಶಿ ರಾಶಿ ಹಣ್ಣುಗಳು ಅಲ್ಲಿದ್ದವು. ದೇಶದ ನಾನಾ ಮೂಲೆಗಳಲ್ಲಿ ಬೆಳೆಯುವ ವಿವಿಧ ಬಗೆಯ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿದ್ದವು.

ಅದು ಯಾವುದೋ ಬೃಹತ್‌ ಮಳಿಗೆಯಲ್ಲ, ಹಣ್ಣಿನ ಮಾರುಕಟ್ಟೆಯೂ ಅಲ್ಲ. ಬದಲಿಗೆ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಹಣ್ಣಿನ ಸಗಟು ವ್ಯಾಪಾರ.

ಹೆಜ್ಜಾಲ ಬಳಿಯ ಬೆಂಗಡಳೂರು– ಮೈಸೂರು ಹೆದ್ದಾರಿ ಬದಿಯಲ್ಲಿ ಹಣ್ಣಿನ ವ್ಯಾಪಾರಿ ಎಚ್‌. ನಾಗರಾಜು ಅವರು ನಡೆಸುತ್ತಿರುವ ಶ್ರೀಮಾರುತಿ ಹಣ್ಣುಗೈಳ ಮಾರಾಟ ಕೇಂದ್ರ. ಗ್ರಾಹಕರಿಗೆ ಕಡಿಮೆ ದರದಲ್ಲಿ ವಿವಿಧ ಬಗೆಯ ಹಣ್ಣುಗಳು ದೊರೆಯಲಿ ಎಂಬ ಉದ್ದೇಶದಿಂದ ಅವರು ಹಣ್ಣುಗಳ ಸಗಟು ವ್ಯಾಪಾರ ಮಾಡುತ್ತಿದ್ದಾರೆ.

ADVERTISEMENT

‘ರೈತರಿಗೂ ನಷ್ಟವಾಗಬಾರದು. ಗ್ರಾಹಕರಿಗೂ ಹೊರೆಯಾಗಬಾರದು. ಕನಿಷ್ಠ ಲಾಭ ಬಂದರೆ ಸಾಕು’ ಎನ್ನುವ ಧೋರಣೆ ಹೊಂದಿರುವ ನಾಗರಾಜು ಅವರು, ‘ಹಣ್ಣುಗಳನ್ನು ಸೇವಿಸಿ ಗ್ರಾಹಕರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು’ ಎನ್ನುತ್ತಾರೆ. ಇಲ್ಲಿ ಸಗಟು ವ್ಯಾಪಾರದ ಜತೆಗೆ ಗ್ರಾಹಕರಿಗೆ ‘ಫ್ರೂಟ್‌ ಸಲಾಡ್‌’ ನೀಡುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

‘ಮಹಾರಾಷ್ಟ್ರದ ಫಂಡರಾಪುರ, ಸಾಂಗ್ಲಿ, ಅಕ್ರೋರ್ ಮತ್ತು ವಿಜಯಪುರದಲ್ಲಿ ದೊರೆಯುವ ದಾಳಿಂಬೆ, ನಾಗಪುರ, ಅಮರಾವತಿ (ಮಹಾರಾಷ್ಟ್ರ), ಕೊಡಗು, ಊಟಿಯ ಕಿತ್ತಳೆ ಹಣ್ಣುಗಳು. ಬೆಳಂಗಿ, ಸಾಂಗ್ಲಿ, ವಿಜಯಪುರ, ದೇವನಹಳ್ಳಿ, ಸೇಲಂನಲ್ಲಿ ಬೆಳೆಯುವ ದ್ರಾಕ್ಷಿ. ನೆಲ್ಲೂರು, ರಾಜನ್‍ಪೇಟೆ, ಕರ್ನಾಟಕದ ವಿವಿಧ ಭಾಗಗಳಿಂದ ಪಪ್ಪಾಯಿನ್ನು ಇವರು ಇಲ್ಲಿಗೆ ತರಿಸುತ್ತಿದ್ದೇವೆ. ತಮಿಳುನಾಡು ಮತ್ತು ಕರ್ನಾಟಕದ ವಿವಿಧೆಡೆಯ ಕಲ್ಲಂಗಡಿ, ಮೂಡಬಿದಿರೆ, ಕ್ಯಾಲಿಕಟ್, ಶಿರಸಿ, ಬನವಾಸಿಯ ಪೈನಾಪಲ್, ಸಿಮ್ಲಾ, ದೆಹಲಿ, ಕಾಶ್ಮೀರ ಮತ್ತು ವಿದೇಶಿ ಸೇಬು, ವಿಜಯಪುರ, ಸೇಲಂನ ನೆಲ್ಲಿಕಾಯಿ, ರತ್ನಗಿರಿ ಮತ್ತು ದೆಹಲಿಯ ‘ಸ್ಟ್ರಾಬೆರಿ’ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು ಒಂದೆಡೆ ಸಿಗುತ್ತವೆ. ಋತುಮಾನಕ್ಕೆ ತಕ್ಕಂತೆ ಹಣ್ಣುಗಳನ್ನು ಸಗಟು ದರದಲ್ಲಿ ಇಲ್ಲಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಅವರು.

‘ಸೇವಾ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇನೆ. ಈ ಮೊದಲು ಕನಕಪುರ ರಸ್ತೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೆ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅಲ್ಲಿನ ಮಳಿಗೆಯನ್ನು ತೆಗೆಸಲಾಯಿತು. ಸಾವಿರಾರು ರೂಪಾಯಿ ಬಾಡಿಗೆ ಕೊಟ್ಟು ಕಡಿಮೆ ಬೆಲೆಗೆ ಹಣ್ಣುಗಳನ್ನು ಮಾರಲು ಆಗುವುದಿಲ್ಲ ಎಂಬುದನ್ನು ಅರಿತು, ನಾನು ಹೆಜ್ಜಾಲದ ಕಡೆಗೆ ವಲಸೆ ಬಂದಿದ್ದೇನೆ. ಇಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಹಣ್ಣುಗಳನ್ನು ಮಾರುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ವಾರಕ್ಕೆರಡು ಸಾರಿ ಬೆಂಗಳೂರಿಗೆ ಬಂದು ಹೋಗುವ ಮೈಸೂರಿನ ಸೀತಾರಾಮು ಮಾತನಾಡಿ, ‘ಮೈಸೂರು ಮತ್ತು ಬೆಂಗಳೂರಿನಲ್ಲಿ ಹಣ್ಣುಗಳ ಬೆಲೆ ದುಬಾರಿಯಾಗಿದೆ. ಆದರೆ ಇವರಲ್ಲಿ ಕಡಿಮೆ ಬೆಲೆಗೆ ತಾಜಾ ಹಣ್ಣುಗಳು ಸಿಗುತ್ತವೆ. ಹಾಗಾಗಿ ಇಲ್ಲಿಯೇ ಖರೀದಿಸಿಕೊಂಡು ಹೋಗುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಮಾಹಿತಿಗೆ 9880707855

ಚಿಕ್ಕರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.