ADVERTISEMENT

ಅಕಾಡೆಮಿ ಪ್ರಶಸ್ತಿ ಮೊತ್ತ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಜನವರಿ 2013, 19:59 IST
Last Updated 13 ಜನವರಿ 2013, 19:59 IST
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ `ಕವಿ ಚಕ್ರವರ್ತಿ' ರನ್ನ ಭವನದಲ್ಲಿ ಭಾನುವಾರ ಕರ್ನಾಟಕ ಲಲಿತಕಲಾ ಅಕಾಡೆಮಿಯ 41ನೇ ವಾರ್ಷಿಕ ಚಿತ್ರಕಲಾ ಪ್ರಶಸ್ತಿಯನ್ನು 10 ಕಲಾವಿದರಿಗೆ ವಿತರಿಸಲಾಯಿತು. ಚಿತ್ರದಲ್ಲಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಚಿವ ಗೋವಿಂದ ಕಾರಜೋಳ, ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಮೊದಲಾದವರು ಇದ್ದಾರೆ
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ `ಕವಿ ಚಕ್ರವರ್ತಿ' ರನ್ನ ಭವನದಲ್ಲಿ ಭಾನುವಾರ ಕರ್ನಾಟಕ ಲಲಿತಕಲಾ ಅಕಾಡೆಮಿಯ 41ನೇ ವಾರ್ಷಿಕ ಚಿತ್ರಕಲಾ ಪ್ರಶಸ್ತಿಯನ್ನು 10 ಕಲಾವಿದರಿಗೆ ವಿತರಿಸಲಾಯಿತು. ಚಿತ್ರದಲ್ಲಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಚಿವ ಗೋವಿಂದ ಕಾರಜೋಳ, ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಮೊದಲಾದವರು ಇದ್ದಾರೆ   

ಮುಧೋಳ (ಬಾಗಲಕೋಟೆ): `ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಅಥವಾ ಬಾದಾಮಿಯಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಮುಧೋಳ ಪಟ್ಟಣದ `ಕವಿ ಚಕ್ರವರ್ತಿ' ರನ್ನ ಭವನದಲ್ಲಿ ಭಾನುವಾರ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿಯ 41ನೇ ವಾರ್ಷಿಕ ಚಿತ್ರಕಲಾ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ತಜ್ಞರ ಸಮಿತಿ ನೇಮಿಸಲಾಗುವುದು. ಸಮಿತಿಯ ವರದಿ ಆಧರಿಸಿ ವಿಶ್ವವಿದ್ಯಾಲಯವನ್ನು ಎಲ್ಲಿ ಸ್ಥಾಪಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಸರ್ಕಾರ ರೂ 5 ಕೋಟಿ ಅನುದಾನವನ್ನು ಶೀಘ್ರದಲ್ಲೇ ಮಂಜೂರು ಮಾಡುವುದು ಎಂದು ಅವರು ಹೇಳಿದರು. 

ಪ್ರಶಸ್ತಿ ಮೊತ್ತ ಹೆಚ್ಚಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 13 ವಿವಿಧ ಅಕಾಡೆಮಿಗಳ ಈಗಿರುವ ವಾರ್ಷಿಕ ಪ್ರಶಸ್ತಿ ಮೊತ್ತವನ್ನು  5 ಸಾವಿರದಿಂದ  25 ಸಾವಿರಕ್ಕೆ ಏಪ್ರಿಲ್‌ನಿಂದ ಹೆಚ್ಚಳ ಮಾಡುವುದಾಗಿ ಅವರು ಭರವಸೆ ನೀಡಿದರು.

ಪ್ರಶಸ್ತಿ ಪುರಸ್ಕೃತರು: ಸಿ.ವೇಣುಗೋಪಾಲ ರೆಡ್ಡಿ (ಬೆಂಗಳೂರು), ಸಂತೋಷ್ (ಉಡುಪಿ), ಬಿ.ಉದಯಕುಮಾರ್ (ಹೊಸಪೇಟೆ), ಪ್ರಕಾಶ್ ರಾ. ಭಜಂತ್ರಿ (ವಿಜಾಪುರ), ಶಿವಕುಮಾರ ಎಂ.ಪಾಲ್ಕಿ (ಗುಲ್ಬರ್ಗ), ಕೆ.ಸುಪ್ರೀತ್ ಅಡಿಗ (ಬೆಂಗಳೂರು), ಕೆ.ಸಿ.ಎಸ್. ಪ್ರಸನ್ನ (ತುಮಕೂರು), ಸೂಗೂರೇಶ ಸುಲ್ತಾನಪುರ (ರಾಯಚೂರು), ಕೆ.ಜಗದೀಶ್ ಕುಮಾರ್ (ಬೆಂಗಳೂರು) ಮತ್ತು ರಘು ಎಸ್.(ಬೆಂಗಳೂರು) ಅವರಿಗೆ ಸಚಿವ ಕಾರಜೋಳ ಬಹುಮಾನ ನೀಡಿ ಸನ್ಮಾನಿಸಿದರು.  ಪ್ರಶಸ್ತಿಯು   5 ಸಾವಿರ ನಗದು, ಪ್ರಶಸ್ತಿಪತ್ರ ಮತ್ತು ಕಂಚಿನ ಸ್ಮರಣಿಕೆ ಒಳಗೊಂಡಿದೆ.

ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ, ರಿಜಿಸ್ಟ್ರಾರ್ ಕೆ.ಸುಧೀಂದ್ರ, ಸಂಚಾಲಕ ಡಿ.ಕೆ.ರಂಗನಾಥ, ಜಮಖಂಡಿ ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿ, ಮುಧೋಳ ತಹಶೀಲ್ದಾರ್ ಶಂಕರಗೌಡ ಸೋಮನಾಳ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.