ADVERTISEMENT

ಅಗ್ನಿ ಆಕಸ್ಮಿಕ: ದಹದಹಿಸಿದ ಲಾರಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 19:30 IST
Last Updated 27 ಜೂನ್ 2012, 19:30 IST
ಅಗ್ನಿ ಆಕಸ್ಮಿಕ: ದಹದಹಿಸಿದ ಲಾರಿ
ಅಗ್ನಿ ಆಕಸ್ಮಿಕ: ದಹದಹಿಸಿದ ಲಾರಿ   

ಆನೇಕಲ್: ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ಬುಧವಾರ ವಿದ್ಯುತ್ ತಂತಿ ತಗುಲಿ ಸಂಪೂರ್ಣ ದಹನಗೊಂಡ ಘಟನೆ ಬುಧವಾರ ಸಂಭವಿಸಿತು.

ಅತ್ತಿಬೆಲೆಯಿಂದ ಸರ್ಜಾಪುರದ ಕಡೆ ಹೊರಟಿದ್ದ ಲಾರಿಯು ಸಿಂಡಿಕೇಟ್ ಬ್ಯಾಂಕ್ ಸಮೀಪ ಬರುತ್ತಿದ್ದಂತೆಯೇ ರಸ್ತೆಗೆ ಅಡ್ಡಲಾಗಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಲಾರಿಯಲ್ಲಿದ್ದ ವಸ್ತುಗಳು ತಾಗಿದವು. ಇದರಿಂದ ಬೆಂಕಿ ಉಂಟಾಗಿ ಹೊಗೆ ಬರಲು ಪ್ರಾರಂಭಿಸಿತು. ಇದರ ಅರಿವಿಲ್ಲದೆ ಚಾಲಕ ವಾಹನ ಚಾಲನೆಯಲ್ಲಿ ತೊಡಗಿದ್ದ.

ಲಾರಿಯಿಂದ ಹೊಗೆ ಬರುತ್ತಿರುವುದನ್ನು ಕಂಡ ಜನತೆ ಕೂಗಿಕೊಂಡಾಗ ತಕ್ಷಣವೇ ಆತ ಲಾರಿ ನಿಲ್ಲಿಸಿ ಇಳಿದು ಹೊರಬಂದ. ಬೆಂಕಿಯು ದಿಢೀರನೆ ಇಡೀ ಲಾರಿಯನ್ನೇ ಆವರಿಸಿತು. ಅದರಲ್ಲಿದ್ದ ವಸ್ತುಗಳು ನೋಡ ನೋಡುತ್ತಿದ್ದಂತೆಯೇ ಸುಟ್ಟು ಬೆಂಕಿಗಾಹುತಿಯಾದವು.
 
ತಮಿಳುನಾಡಿನ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಕೆಲ ಸಮಯದಲ್ಲಿ ಕರ್ನಾಟಕದ ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯದಲ್ಲಿ ಜೊತೆಗೂಡಿ ನಂದಿಸಿದರು. ಆದರೆ ಲಾರಿಯಲ್ಲಿದ್ದ ತ್ಯಾಜ್ಯ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದವು.
 
ರಸ್ತೆ ಮಧ್ಯದಲ್ಲಿಯೇ ಈ ಘಟನೆ ಸಂಭವಿಸಿದ್ದರಿಂದ 1ಗಂಟೆಗೂ ಹೆಚ್ಚು ಕಾಲ ಸರ್ಜಾಪುರ-ಅತ್ತಿಬೆಲೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕುತೂಹಲಗೊಂಡ ಜನರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.