ADVERTISEMENT

ಅಡಿಕೆ ಬೆಂಬಲ ಬೆಲೆಗಾಗಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 19:30 IST
Last Updated 27 ಮಾರ್ಚ್ 2011, 19:30 IST
ಅಡಿಕೆ ಬೆಂಬಲ ಬೆಲೆಗಾಗಿ ಮೆರವಣಿಗೆ
ಅಡಿಕೆ ಬೆಂಬಲ ಬೆಲೆಗಾಗಿ ಮೆರವಣಿಗೆ   

ಕಳಸ: ಅಡಿಕೆಗೆ ಬೆಂಬಲ ಬೆಲೆ ಮತ್ತು ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಲು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸ್ಥಳೀಯ ಶಾಖೆ ಪಟ್ಟಣದಲ್ಲಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಅಡಿಕೆ ಬೆಳೆಗಾರರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಂದಾಯ ನಿರೀಕ್ಷಕ ಅಚ್ಯುತ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ರೈತ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ, ಕಾರ್ಯದರ್ಶಿ ಅಣ್ಣಪ್ಪ, ಪೆರಿಯ ಸ್ವಾಮಿ, ಫೆಲಿಕ್ಸ್ ಮತ್ತಿತರರು ಭಾಗವಹಿಸಿದ್ದರು.

ಕಳಸ ಹೋಬಳಿಯಲ್ಲಿ ಶೇ. 80ರಷ್ಟು ಕೃಷಿಕರು ಅಡಿಕೆ ಬೆಳೆಯುತ್ತಿದ್ದು ಸುಳಿ ಕೊಳೆಯುವ ರೋಗ, ಬೇರುಹುಳದ ಬಾಧೆಯಿಂದ ಇಳುವರಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ವಿಪರೀತ ಮಳೆ, ಕಾರ್ಮಿಕರ ಕೊರತೆ ಮತ್ತು ಕೊಳೆ ರೋಗದಿಂದ ಅಡಿಕೆಯ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 12 ಸಾವಿರ ರೂಪಾಯಿ ಆಗಿದೆ. ತಜ್ಞರ ವರದಿ ಪರಿಶೀಲಿಸಿ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಡಿಕೆ ಬೆಳೆಯುವ ಹಲವೆಡೆ ಹಳದಿ ರೋಗದ ಬಾಧೆಯಿಂದ ತೋಟಗಳು ನಿರ್ನಾಮವಾಗಿದೆ. ಅಂಥಹ ಕೃಷಿಕರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಗೋರಖ್‌ನಾಥ್ ಸಿಂಗ್ ಶಿಫಾರಸು ಮಾಡಿದ್ದಾರೆ. ವರದಿಯ ಶಿಫಾರಸಿನಂತೆ ಎಲ್ಲ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಅಡಿಕೆ ಕೃಷಿಗೆ ಅಗತ್ಯವಾದ ಎಲ್ಲ ಸಲಕರಣೆಗಳನ್ನು ಶೇ 75ರ ಸಹಾಯಧನ ಯೋಜನೆಯಲ್ಲಿ ವಿತರಿಸಬೇಕು ಎಂದೂ ಮನವಿಯಲ್ಲಿ ಪ್ರಧಾನಿಗಳನ್ನು ಕೋರಲಾಗಿದೆ.

ಬಾರದ ಬೆಳೆಗಾರರು: ಕರ್ನಾಟಕ ರಾಜ್ಯ ರೈತ ಸಂಘ ಭಾನುವಾರ ಅಡಿಕೆ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಬೆಳೆಗಾರರು ಭಾಗವಹಿಸದೆ ನಿರಾಸಕ್ತಿ ಪ್ರದರ್ಶಿಸಿದರು. ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಪ್ರತಿಭಟನಾಕಾರರು ಕಾರ್ಮಿಕರಾಗಿದ್ದುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.