ADVERTISEMENT

ಅಧಿಕಾರ ನೀಡಿ: ಗ್ರಾ.ಪಂ. ಸದಸ್ಯೆಯರ ಮನವಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಮಧುಗಿರಿ: ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಆಡಳಿತದಲ್ಲಿ ಸುಧಾರಣೆ ತರಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿ ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಪಟ್ಟಣದ ನೃಪತುಂಗಾ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಅನುದಾನ ಹೆಚ್ಚಿಸಬೇಕು, ಬಾಕಿ ಇರುವ ವಿದ್ಯುತ್ ಬಿಲ್ ಬಡ್ಡಿ ಮನ್ನಾ ಮಾಡಬೇಕು. ರೈತರಿಗೆ ವಿಧಿಸಿರುವ ಯೂನಿಟ್ ದರದಂತೆ ಪಂಚಾಯಿತಿಗೂ ಯೂನಿಟ್ ದರ ವಿಧಿಸಬೇಕು, ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರವಧಿ ಹಂಚಿಕೆಗೆ ಅವಕಾಶ ನೀಡದೆ ಕಡ್ಡಾಯಗೊಳಿಸಬೇಕು. ಚುನಾಯಿತ ಸದಸ್ಯರಿಗೆ ಸಭಾ ಭತ್ಯೆ, ಗೌರವಧನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು, ಸರ್ಕಾರಿ ಆದೇಶ, ಸುತ್ತೋಲೆಗಳನ್ನು ಸದಸ್ಯರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಗೌರವ ಧನವನ್ನು ರೂ. 3000, ಉಪಾಧ್ಯಕ್ಷರಿಗೆ ರೂ. 2500, ಸದಸ್ಯರಿಗೆ ರೂ. 1500ಕ್ಕೆ ಹೆಚ್ಚಿಸಬೇಕು. ಬಸವ ಇಂದಿರಾ ಆವಾಜ್ ಯೋಜನೆ ಜೊತೆಗೆ ಆಶ್ರಯ, ಅಂಬೇಡ್ಕರ್, ರಾಜ್ಯ ಸರ್ಕಾರದ ವಸತಿ ಯೋಜನೆ ಜಾರಿಗೆ ತರುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಿರಾ, ಕೊರಟಗೆರೆ, ಮಧುಗಿರಿ ತಾಲ್ಲೂಕಿನ ಇನ್ನೂರಕ್ಕೂ ಹೆಚ್ಚು ಮಹಿಳಾ ಚುನಾಯಿತ ಪ್ರತಿನಿಧಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಪ್ರತಿಭಟನೆ ನೇತೃತ್ವವನ್ನು ಮಧುಗಿರಿ ನಾಗರತ್ನ, ಶಿರಾ ಅನಿತಾಲಕ್ಷ್ಮೀ, ಕಾತ್ಯಾಯಿನಿ, ಅನಿತಾ, ಯಶೋಧ, ಕಮಲ, ಕೊರಟಗೆರೆ ನಿರ್ಮಲಾ, ಮಹದೇವಮ್ಮ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷರಾದ ಶಂಕರಪ್ಪ, ಧ್ರುವಕುಮಾರ್ ಇತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.