ADVERTISEMENT

ಅಧ್ವಾನ ರಸ್ತೆಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 18:45 IST
Last Updated 13 ನವೆಂಬರ್ 2012, 18:45 IST

ಗೋಣಿಕೊಪ್ಪಲು: ಕೊಡಗಿನಲ್ಲಿ ಹಾಳಾಗಿರುವ ರಸ್ತೆಗಳನ್ನು ತಕ್ಷಣ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮಂಗಳವಾರ ಆಯೋಜಿಸಿದ್ದ ~ಗೋಣಿಕೊಪ್ಪಲಿನಿಂದ ವಿರಾಜಪೇಟೆವರೆಗೆ ಕಾಲ್ನಡಿಗೆ ಜಾಥಾ~ದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ಜನರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬೆಳಿಗ್ಗೆ 9.30ಕ್ಕೆ ಗೋಣಿಕೊಪ್ಪಲಿನಲ್ಲಿ ಆರಂಭಗೊಂಡ ಕಾಲ್ನಡಿಗೆ ಜಾಥಾ ವಿರಾಜಪೇಟೆಯವರೆಗಿನ 16 ಕಿ.ಮೀ. ದೂರವನ್ನು ನಾಲ್ಕು ಗಂಟೆಗಳ ಅವಧಿಯಲ್ಲಿ ಪೂರ್ಣಗೊಳಿಸಿತು. ಜಾಥಾದ ನೇತೃತ್ವವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್, ವಿಧಾನ ಪರಿಷತ್ ಸದಸ್ಯರಾದ ಟಿ.ಜಾನ್, ವಿ.ಆರ್. ಸುದರ್ಶನ್, ಮಾಜಿ ಸಚಿವರಾದ ಸುಮಾ ವಸಂತ್, ಎಂ.ಎಂ. ನಾಣಯ್ಯ, ವೀಣಾ ಅಚ್ಚಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಧರ್ಮಪ್ಪ, ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸಾರಾ ಚೆಂಗಪ್ಪ, ಮುಖಂಡರಾದ ಮಿಟ್ಟು ಚೆಂಗಪ್ಪ, ವಿ.ಪಿ. ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರಿತಾ ಪೂಣಚ್ಚ, ವೆಂಕಟೇಶ್, ಪ್ರಥ್ಯು ಮೊದಲಾದವರು ಜಾಥಾದಲ್ಲಿ ಗಮನ ಸೆಳೆದರು.

ಜಾಥಾ ನಡೆದ ಮಾರ್ಗದುದ್ದಕ್ಕೂ ಪ್ರತಿಭಟನಾಕಾರರು ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನರಿಗೆ ರಸ್ತೆ, ನೀರು, ಮನೆಯಂತಹ ಮೂಲಸೌಕರ್ಯಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕೊಡಗು ಸೇರಿದಂತೆ ರಾಜ್ಯಕ್ಕೆ ಕೇಂದ್ರ 88,000 ಕೋಟಿ ಅನುದಾನ ನೀಡಿದೆ; ಅಭಿವೃದ್ಧಿ ಕಾಮಗಾರಿಗೆ ಈ ಹಣವನ್ನು ಬಳಸದೇ ರಾಜ್ಯದ ಸಚಿವರು ಕೊಳ್ಳೆ ಹೊಡೆದಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.