ADVERTISEMENT

ಅನಧಿಕೃತ ಪೈಪ್ ಕೀಳಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:30 IST
Last Updated 20 ಆಗಸ್ಟ್ 2012, 19:30 IST
ಅನಧಿಕೃತ ಪೈಪ್ ಕೀಳಿಸಿದ ರೈತರು
ಅನಧಿಕೃತ ಪೈಪ್ ಕೀಳಿಸಿದ ರೈತರು   

ಕಂಪ್ಲಿ: ಗದ್ದೆಹಳಿಗೆ ನೀರು ಹಾಯಿಸಲು ಅನಧಿಕೃತವಾಗಿ ಹಾಕಿಸಿದ್ದ ಪೈಪ್‌ಗಳನ್ನು ಅಚ್ಚುಕಟ್ಟು ಪ್ರದೇಶದ ರೈತರು ನೀರಗಂಟಿಗಳಿಂದ  ಸೋಮವಾರ ಕಿತ್ತು ಹಾಕಿಸಿದರು.

ಸಣಾಪುರ ವಿತರಣಾ ನಾಲೆ ಬಳಿ ಗದ್ದೆಗೆ ಕೆಲವರು ಅನಧಿಕೃತವಾಗಿ ನೀರು ಹಾಯಿಸಿಕೊಳ್ಳಲು ಭೂಮಿ ಒಳಗೆ ಪೈಪುಗಳನ್ನು ಹಾಕಿಕೊಂಡಿದ್ದರು. ಸೋಮವಾರ ಇದನ್ನು ಪತ್ತೆಹಚ್ಚಿದ ಅಚ್ಚುಕಟ್ಟು ಪ್ರದೇಶದ ರೈತರು, ಸಂಬಂಧಪಟ್ಟ  ಎಂಜಿನಿಯರ್ ಮತ್ತು ನೀರಗಂಟಿಗಳ ಗಮನಕ್ಕೆ ತಂದರು.

ರೈತರ ಒತ್ತಾಯದ ಮೇರೆಗೆ ನೀರಗಂಟಿಗಳು ಅನಧಿಕೃತ ಪೈಪ್‌ಗಳನ್ನು ಕಿತ್ತು ವಿತರಣಾ ನಾಲೆಯಲ್ಲಿ ನೀರು ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ಹರಿಯುವಂತೆ ಮಾಡಿದರು.

ನಾಲೆಯ ಮೇಲ್ಭಾಗದ ರೈತರು ಈ ರೀತಿ ಅನಧಿಕೃತ ಪೈಪ್‌ಗಳ ಮೂಲಕ ನೀರು ಪಡೆಯುತ್ತಿದ್ದುದರಿಂದ ಕೆಳಭಾಗದ ರೈತರ ಗದ್ದೆಗೆ ನೀರು ತಲುಪುತ್ತಿರಲಿಲ್ಲ. ಈ ನಾಲೆಯಿಂದ ಸುಮಾರು 1,200 ಎಕರೆಗೆ ನೀರು ಹರಿಯಬೇಕಿದೆ. ರತ್ನಯ್ಯ ಶೆಟ್ಟಿ ತೂಬು ಕೆಳಗಿನ ಸುಮಾರು 500 ಎಕರೆ ಭೂಮಿಗೆ ಈತನಕ ನೀರು ತಲುಪಿಲ್ಲ. ಅನಧಿಕೃತ ಪೈಪ್‌ಗಳ ಮೂಲಕ ನೀರು ಒಯ್ಯುವ ಕುರಿತು ಸಂಬಂಧಿಸಿದ ಎಂಜಿನಿಯರ್, ಅಧಿಕಾರಿಗಳು ಮತ್ತು ನೀರಗಂಟಿಗಳ ಗಮನಕ್ಕೆ ಅನೇಕ ಬಾರಿ ತಂದಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು  ಆರೋಪಿಸಿದರು.

ಅನಧಿಕೃತ ಪೈಪ್‌ಗಳ ಹಾವಳಿಯನ್ನು ತಪ್ಪಿಸಬೇಕು. ಕೊನೆ ಅಂಚಿನ ಭೂಮಿಯವರೆಗೂ ನೀರು ಹರಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ತಾ.ಪಂ.ಸದಸ್ಯ ವೆಂಕಟರಾಮರಾಜು, ರೈತರಾದ ದಿವಾಕರ, ಕೊಡಗಲಿ ವೆಂಕಟನಾರಾಯಣ, ಲಕ್ಷ್ಮಯ್ಯ, ಕೆ.ಚಂದ್ರಶೇಖರ್, ಕೆ.ರಣಧೀರ್, ಕಂಠಂನೇನಿ ರವಿ, ಮಾದಿಪಲ್ಲೆ ಹನುಮಂತರಾಯುಡು, ಮುನ್ನ ಪ್ರಸಾದ್, ಕೆ.ಮೃತ್ಯುಂಜಯ, ಟಿ.ತಾತಾರಾವ್, ಸೀತರಾಮಯ್ಯ, ಚಂದ್ರಮೌಳಿ, ವೆಂಕಟರಮಣ ಬಾಬು, ರಂಗಯ್ಯ, ನಾಗೇಶ್ವರರಾವ್ ಸೇರಿದಂತೆ  ರೈತರು ಆಗ್ರಹಿಸಿದ್ದಾರೆ.
 
ಸಂಭ್ರಮದ ರಂಜಾನ್
ರಾಯಚೂರು: ಮೂವ್ವತ್ತು ದಿನ ಉಪವಾಸ ವೃತ (ರೋಜಾ) ಪೂರೈಸಿದ ಮುಸ್ಲಿಂ ಬಾಂಧವರು ಸೋಮವಾರ ಪವಿತ್ರ ಈದ್ ಉಲ್ ಫಿತರ್ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರಗಳಿಂದ ಆಚರಿಸಿದರು.
ಜಿಲ್ಲೆಯ ವಿವಿಧೆಡೆ ಮುಂಜಾನೆ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 ಜಿಲ್ಲಾ ಕೋರ್ಟ್ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಮುಂಜಾನೆ 9.30ಕ್ಕೆ ನಡೆದ ಸಾಮೂಹಿಕ ವಿಶೇಷ ಪ್ರಾರ್ಥನೆಯಲ್ಲಿ  ಮುಸ್ಲಿಂ ಸಮುದಾಯದ ಅನೇಕರು ಪಾಲ್ಗೊಂಡು ಸುಖ, ಶಾಂತಿ, ಸಮೃದ್ಧಿಗೆ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.