
ಕಮಲನಗರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸೌಕರ್ಯಗಳಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆಗೆ ಈಡಾಗಿದ್ದಾರೆ.
ರಾಜ್ಯ ಸರ್ಕಾರವು1999ರಲ್ಲಿ ಕಮಲನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಿತು. 6 ಹಾಸಿಗೆಯ ಆಸ್ಪತ್ರೆಯು 30 ಹಾಸಿಗೆ ಆಸ್ಪತ್ರೆಯಾಗಿ ರೂಪುಗೊಂಡಿತು. ಆದರೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ ಅಗತ್ಯ ಸೌಕರ್ಯಗಳು ಸಿಗಲಿಲ್ಲ.
ಇಲ್ಲಿ ಒಬ್ಬರು ವೈದ್ಯಾಧಿಕಾರಿ ಹುದ್ದೆ, ಒಬ್ಬರು ದಂತ ವೈದ್ಯ, ಒಬ್ಬರು ಎಕ್ಸ್‌ರೇ ಟೆಕ್ನಿಷಿಯನ್, ಒಬ್ಬರು ಲ್ಯಾಬ್ ಅಟೆಂಡರ್, ಗ್ರೂಪ್ ಡಿ ಏಳು ನೌಕರರು, ಒಬ್ಬರು ಅಡುಗೆ ಸಿಬ್ಬಂದಿ, ಒಬ್ಬರು ಸ್ಟಾಫ್ ನರ್ಸ್, ಒಬ್ಬರು ಎಸ್‌ಡಿಎ, ಒಬ್ಬರು ಎಫ್‌ಡಿಎ, ಒಬ್ಬರು ಕ್ಲರ್ಕ್ ಕಂ ಟೈಪಿಸ್ಟ್ ಹಾಗೂ ವಾಹನ ಚಾಲಕರ ಒಂದು ಹುದ್ದೆ ಹೀಗೆ ಒಟ್ಟು 19 ಹುದ್ದೆಗಳು ಖಾಲಿ ಇವೆ.
ಇಲ್ಲಿ ಕ್ಷ-ಕಿರಣ ಯಂತ್ರ, ದಂತ ಚಿಕಿತ್ಸೆ ಆಸನ, ಶಸ್ತ್ರಚಿಕಿತ್ಸೆ ಸಲಕರಣೆಗಳಿಲ್ಲದೆ ಪಕ್ಕದ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯವಾಗಿದೆ ಎಂದು ರೋಗಿಗಳು ಹೇಳುತ್ತಾರೆ.
ಜಿಲ್ಲಾ ಆಸ್ಪತ್ರೆಯು 60 ಕಿ.ಮೀ. ದೂರವಾದರೆ, ತಾಲ್ಲೂಕು ಆಸ್ಪತ್ರೆ 30 ಕಿ.ಮೀ ದೂರವಿದೆ. ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಇಲ್ಲಿ ತುರ್ತು ಚಿಕಿತ್ಸಾ ಘಟಕ, ರಕ್ತ ಸಂಗ್ರಹ ಘಟಕ, ಶವ ಪರೀಕ್ಷೆ ಕೋಣೆ ಇರುವುದು ಅವಶ್ಯಕ ಎಂಬುದು ನಾಗರಿಕರ ಅಭಿಪ್ರಾಯ.
ಖಾಲಿ ಹುದ್ದೆ ಭರ್ತಿ ಸೇರಿ ಅಗತ್ಯ ಸೌಕರ್ಯ ಒದಗಿಸುವಂತೆ ಅನೇಕ ಸಲ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ನಾಗರಿಕ ಸೇವಾ ಸಮಿತಿ ಕಾರ್ಯದರ್ಶಿ ವೈಜಿನಾಥ ವಡ್ಡೆ ಆರೋಪಿಸುತ್ತಾರೆ.
ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.