ADVERTISEMENT

ಅನುದಾನ ಬಿಡುಗಡೆಗೆ ಶಿಕ್ಷಕರ ಅಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಬೀದರ್: ವೇತನ ಅನುದಾನ ಬಿಡುಗಡೆ ಮಾಡುವಂತೆ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಅನುದಾನ ರಹಿತ ವಿದ್ಯಾ ಸಂಸ್ಥೆಗಳು ಮತ್ತು ನೌಕರರ ಸಂಘದ ಮುಂದಾಳತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವೇತನ ಕೊಡಿ ಇಲ್ಲವೇ ವಿಷ ಕೊಡಿ ಎಂಬ ಘೋಷಣೆ ಹಾಕಲಾಯಿತು.

ರಾಜ್ಯ ಸರ್ಕಾರ 1987 ರಿಂದ 1994-95 ವರೆಗೆ ಆರಂಭಿಸಲಾಗಿರುವ ಶಿಕ್ಷಣ ಸಂಸ್ಥೆಗಳನ್ನು ವೇತನ ಅನುದಾನಕ್ಕೆ ಒಳಪಡಿಸಿ 2007ರಲ್ಲಿ ಆದೇಶ ಹೊರಡಿಸಿದೆ. ಈಗಾಗಲೇ ಶೇ. 40 ರಷ್ಟು ಶಿಕ್ಷಣ ಸಂಸ್ಥೆಗಳು ವೇತನ ಅನುದಾನ ಪಡೆದಿವೆ. ಇನ್ನುಳಿದ ಸಂಸ್ಥೆಗಳಿಗೆ 2010 ರ ಏಪ್ರಿಲ್ 1 ರಿಂದ ವೇತನ ಅನುದಾನ ದೊರೆಯುವಂತೆ ಕಡಿತ ವಿಲೇವಾರಿ ಮಾಡುವುದಾಗಿಯೂ ಘೋಷಣೆ ಮಾಡಲಾಗಿತ್ತು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ, ಇದೀಗ 1987 ರಿಂದ 1991ರ ಮೇ 30ರ ವರೆಗೆ ಆರಂಭಗೊಂಡಿರುವ ಕೆಲ ಶಾಲೆಗಳನ್ನು ಮಾತ್ರ ವೇತನ ಅನುದಾನಕ್ಕೆ ಒಳಪಡಿಸಲು ಆರ್ಥಿಕ ಇಲಾಖೆ ಸಮ್ಮತಿ ಸೂಚಿಸಿದೆ. ಹೀಗಾಗಿ 1991ರಿಂದ 1994-95ನೇ ಸಾಲಿನಲ್ಲಿ ಪ್ರಾರಂಭಿಸಲಾಗಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ.

ಇದುವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕಲ್ಪಿಸುವುದಾಗಿ ಸರ್ಕಾರ ನೀಡಿದ್ದ ಭರವಸೆಗಳು ಹುಸಿಯಾಗಿವೆ. ಅತಿವೃಷ್ಟಿ ಮತ್ತಿತರ ನೆಪವೊಡ್ಡಿ ಶಿಕ್ಷಕ ಸಮುದಾಯದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಖಾಸಗಿ ಶಾಲೆಗಳ ಶಿಕ್ಷಕರನ್ನು ನಿರ್ಲಕ್ಷಿಸಿದ್ದಲ್ಲಿ ಸೆಪ್ಟೆಂಬರ್ 5 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಂಘದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಯರನಳ್ಳಿ, ಉಪಾಧ್ಯಕ್ಷ ಎಂ.ಡಿ. ಕುಲಕರ್ಣಿ, ಕಾರ್ಯದರ್ಶಿ ಅಶೋಕ ತೆಲಂಗೆ, ಸಹ ಕಾರ್ಯದರ್ಶಿ ಅನಿತಾ ಬಿರಾದಾರ ಮತ್ತಿತರರು ಸೇರಿದಂತೆ ನೂರಾರು ಜನ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.