ADVERTISEMENT

ಅರಿವು ಮೂಡಿಸುವ ಕಾನೂನು ಸಾಕ್ಷರತಾ ರಥ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಶೃಂಗೇರಿ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವುದು ಕಾನೂನು ಸಾಕ್ಷರತಾ ರಥದ ಮುಖ್ಯ ಉದ್ದೇಶ ಎಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಸಿ. ವೀರಭದ್ರಯ್ಯ ತಿಳಿಸಿದರು.

ತಾಲ್ಲೂಕಿನ ಕುಂಚೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಚಾರಿ ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು ಮೂಡಿಸುವ ರಥದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನ ವ್ಯಾಪ್ತಿ ವಿಶಾಲವಾಗಿದೆ. ದೈನಂದಿನ ಬದುಕಿನಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಕಾನೂನು ನಿರ್ಧರಿಸುತ್ತದೆ. ಜನನದಿಂದ ಮರಣದವರೆಗೂ ಕಾನೂನಿನ ಅರಿವು ಅಗತ್ಯವಾಗಿದೆ. ಸಮಾಜದಲ್ಲಿ ಹಕ್ಕಿಗಾಗಿ ಹೋರಾಡುವ ಹಲವಾರು ಸಂದರ್ಭಗಳು ಬರುತ್ತವಾದರೂ, ಹಕ್ಕುಗಳನ್ನು ಪಡೆಯಲು ಕಾನೂನಿನ ಅರಿವು ಅತ್ಯಗತ್ಯ ಎಂದರು.

ವಕೀಲರಾದ ಜಿ.ಎಂ. ಸತೀಶ್ ಆಸ್ತಿ ಹಕ್ಕು ಕುರಿತಾಗಿ, ಎಚ್.ಇ. ಮಹೇಶ್ ವಿವಾಹ ವಿಚ್ಛೇದನ ಹಾಗೂ ಜೀವನಾಂಶ ಕುರಿತಾಗಿ ಹಾಗೂ ಚರಣ್‌ನಾಯ್ಕ ಜನನ ಮತ್ತು ಮರಣ ನೋಂದಣಿ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಮೆಣಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಜಗದೀಶ್, ವಕೀಲರ ಸಂಘದ ಅಧ್ಯಕ್ಷೆ ರಾಜೇಶ್ವರಿ, ವಕೀಲರಾದ ಶಶಿಭೂಷಣ್, ಸುರೇಶ್, ಉಮೇಶ್ ಹೆಗ್ಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.