ADVERTISEMENT

ಅರೆಸೇನಾ ಪಡೆ ನಿಯೋಜನೆ: ಜಿಲ್ಲಾಧಿಕಾರಿ

ನಕ್ಸಲ್ ಪೀಡಿತ ಪ್ರದೇಶದಲ್ಲಿ 17 ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:38 IST
Last Updated 23 ಏಪ್ರಿಲ್ 2013, 6:38 IST

ಮಡಿಕೇರಿ: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿರುವ 17 ಮತಗಟ್ಟೆಗಳಲ್ಲಿ ಮತದಾನದ ದಿನದಂದು ಅರೆಸೇನಾ ಪಡೆ ನಿಯೋಜಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಂ. ಅನುಚೇತ್ ತಿಳಿಸಿದರು.

ನಗರದ ಕೋಟೆ ಆವರಣದಲ್ಲಿರುವ ವಿಧಾನಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಜಿಲ್ಲೆಯಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪೊಲೀಸ್ ಪಡೆ, ಸೇನಾ ತುಕಡಿಗಳು ನಮಗೆ ಲಭ್ಯವಾಗಿವೆ ಎಂದು ಹೇಳಿದರು.

ಅತಿಸೂಕ್ಷ್ಮ ಮತಗಟ್ಟೆಗಳು: ಜಿಲ್ಲೆಯಲ್ಲಿ 102 ಸೂಕ್ಷ್ಮ ಮತಗಟ್ಟೆಗಳಿವೆ (ಮಡಿಕೇರಿ ವಿಧಾನಸಭಾ ಕ್ಷೇತ್ರ 53, ವಿರಾಜಪೇಟೆ ವಿಧಾನಸಭಾ ಕ್ಷೇತ್ರ 49). 77 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ (ಮಡಿಕೇರಿ 37, ವಿರಾಜಪೇಟೆ 40),  160 ಸಾಮಾನ್ಯ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. ಹಾಗೂ 22 ಮತಗಟ್ಟೆಗಳು ವಲ್ನರಬಲ್(ಮತದಾರರಿಗೆ ಪ್ರಭಾವ ಬೀರುವ ಪ್ರದೇಶ) ಮತಗಟ್ಟೆಗಳೆಂದು  ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸಾದ್ ಮಾಹಿತಿ ನೀಡಿದರು.

ಪ್ರಭಾವ ಬೀರುವ ಪ್ರದೇಶಗಳು: ಮಡಿಕೇರಿ ತಾಲ್ಲೂಕಿನಲ್ಲಿ ಮಡಿಕೇರಿ ನಗರ, ಸಂಪಾಜೆ, ಬೆಟ್ಟಗೇರಿ, ಮೂರ್ನಾಡು, ಚೆಟ್ಟಳ್ಳಿ, ಹಾಕತ್ತೂರು, ನಾಪೋಕ್ಲು, ಕೊಟ್ಟಮುಡಿ, ಕುಂಜಿಲ, ಕಕ್ಕಬ್ಬೆ, ಚೇರಂಬಾಣೆ, ಅಯ್ಯಂಗೇರಿ ಹಾಗೂ ಕರಿಕೆ.

ವಿರಾಜಪೇಟೆ ತಾಲ್ಲೂಕಿನಲ್ಲಿ ಕೊಂಡಂಗೇರಿ, ವಿರಾಜಪೇಟೆ ಪಟ್ಟಣ, ಬಾಳಲೆ, ಗೋಣಿಕೊಪ್ಪ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಪೊನ್ನಂಪೇಟೆ, ಅಮ್ಮತ್ತಿ, ಕಡಂಗ, ನೆಲ್ಯಹುದಿಕೇರಿ, ಸಿದ್ದಾಪುರ ಹಾಗೂ ಪಾಲಿಬೆಟ್ಟ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಹೆಬ್ಬಾಲೆ, ಕುಶಾಲನಗರ, ಕೂಡಿಗೆ, ಸುಂಟಿಕೊಪ್ಪ, ಗರಗಂದೂರು, ಹೊಸತೋಟ, ಗದ್ದೆ ಹಳ್ಳ, ಕಂಬಿಬಾಣೆ ಪ್ರಭಾವ ಬೀರುವ ಪ್ರದೇಶಗಳಾಗಿವೆ ಎಂದು ಅವರು ಹೇಳಿದರು.

ಖಾಸಗಿ ಸಮಾರಂಭ: ಚುನಾವಣೆಗೂ ಖಾಸಗಿ ಸಮಾರಂಭಕ್ಕೂ ಸಂಬಂಧವಿಲ್ಲ. ಆದರೆ, ಇದರಲ್ಲಿ ಯಾವುದೇ ರೀತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆ ಗಳನ್ನು ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಮತದಾನ ಹೆಚ್ಚಿಸಲು ಕ್ರಮ
ಕೇಂದ್ರ ಚುನಾವಣಾ ಆಯೋಗದ ಸೂಚನೆ ಯಂತೆ ಜಿಲ್ಲೆಯಲ್ಲಿ ಮತದಾನ ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನಾಲ್ಕು ಪ್ರಕರಣ ದಾಖಲು
ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಬಾಡೂಟ ಹಂಚಿಕೆ, ಅನುಮತಿ ಇಲ್ಲದೇ ವಾಹನ ಬಳಕೆ ಹಾಗೂ ಅಕ್ರಮ ಮದ್ಯ ವಶಕ್ಕೆ ಸಂಬಂಧಿಸಿದಂತೆ ಈ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ನಗದು ಹಣವನ್ನು ಎಲ್ಲಿಯೂ ವಶಪಡಿಸಿ ಕೊಳ್ಳಲಾಗಿಲ್ಲ.  

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಕಂಡುಬಂದರೆ ಸಾರ್ವಜನಿಕರು 08272-220302, 228200ಕ್ಕೆ ಕರೆ ಮಾಡಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಗಂಭೀರ ವಿಷಯವಾಗಿದ್ದು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಸುರ ಬಾಲಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.