ADVERTISEMENT

ಅಲೆಗಳ ಆರ್ಭಟ: ದಡಕ್ಕೆ ಮರಳಿದ ದೋಣಿಗಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 19:30 IST
Last Updated 7 ಆಗಸ್ಟ್ 2011, 19:30 IST
ಅಲೆಗಳ ಆರ್ಭಟ: ದಡಕ್ಕೆ ಮರಳಿದ ದೋಣಿಗಳು
ಅಲೆಗಳ ಆರ್ಭಟ: ದಡಕ್ಕೆ ಮರಳಿದ ದೋಣಿಗಳು   

ಕಾರವಾರ: ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿಗಳು ಭಾನುವಾರ ದಡಕ್ಕೆ ಮರಳಿವೆ.

ಗೋವಾ, ಕೇರಳ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಬಂದರುಗಳಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ನೂರಾರು ಯಾಂತ್ರೀಕೃತ ದೋಣಿಗಳು ಇಲ್ಲಿಯ ಬೈತಖೋಲ್ ಮೀನುಗಾರಿಕೆ ಬಂದರಿನಲ್ಲಿ ಆಶ್ರಯ ಪಡೆದಿವೆ.

ಮಳೆಯ ಮೋಡಗಳು ಚಲಿಸುವ ಸಂದರ್ಭದಲ್ಲಿ ಆಗಾಗ ಗಾಳಿ ಬೀಸುವುದರಿಂದ ಸಮುದ್ರದಲ್ಲಿ ದೊಡ್ಡದೊಡ್ಡ ಅಲೆಗಳು ಏಳುತ್ತಿದ್ದು ಬಲೆ ಬೀಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಂತಾಗಿದೆ. ಲಂಗರು ಹಾಕಲು ಬಂದರಿನಲ್ಲಿ ಜಾಗದ ಅಭಾವ ಇರುವುದರಿಂದ ಗೋವಾ ಮತ್ತು ಕೇರಳ ರಾಜ್ಯದ ದೋಣಿಗಳು ಅಲೆತಡೆಗೋಡೆ ಸಮೀಪ ಲಂಗರು ಹಾಕಿವೆ.

ದಡಕ್ಕೆ ಮರಳಿರುವ ದೋಣಿಗಳು ಸಣ್ಣ-ಪುಟ್ಟ ದುರಸ್ತಿಯಲ್ಲಿ ತೊಡಗಿರುವುದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿಗೆ ಕಂಡುಬಂತು.

“ಸಮುದ್ರದಲ್ಲಿ ಗಾಳಿಯ ಅಬ್ಬರಕ್ಕೆ ದೊಡ್ಡದೊಡ್ಡ  ಅಲೆಗಳು ಏಳುತ್ತಿದ್ದು, ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಮಳೆ, ಗಾಳಿಯ ಅಬ್ಬರ ಸಂಪೂರ್ಣ ಕಡಿಮೆ ಆದ ನಂತರ ಮೀನುಗಾರಿಕೆಗೆ ಮರಳುತ್ತೇವೆ” ಎಂದು ಮೀನುಗಾರ ಆನಂದ ಹರಿಕಂತ್ರ  ತಿಳಿಸಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ಜೂ.15 ರಿಂದ ಜುಲೈ 31ರ ವರೆಗೆ ಮೀನು ಗಾರಿಕೆಯನ್ನು ನಿಷೇಧಿಸಲಾಗಿತ್ತು. ಆ.1ರಿಂದ ಮತ್ತೆ ಮೀನುಗಾರಿಕೆ ಪ್ರಾರಂಭವಾಗಿತ್ತು. ಕಳೆದ ಒಂದು ವಾರದ ಅವಧಿಯಲ್ಲಿ ಒಂದೆರಡು ದಿನ ಭಾರಿ ಮತ್ತು ಸತತ ಮಳೆ ಬಿದ್ದಿದ್ದರಿಂದ ಮೀನುಗಾರಿಕೆಗೆ ಅಡ್ಡಿಯಾಗಿತ್ತು.

ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮುಂದುವರಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.