ADVERTISEMENT

ಅವಳಿ ಜಿಲ್ಲೆಗೆ ಬೃಹತ್ ಉಕ್ಕು ಘಟಕ

​ಪ್ರಜಾವಾಣಿ ವಾರ್ತೆ
Published 26 ಜನವರಿ 2011, 19:45 IST
Last Updated 26 ಜನವರಿ 2011, 19:45 IST
ಅವಳಿ ಜಿಲ್ಲೆಗೆ ಬೃಹತ್ ಉಕ್ಕು ಘಟಕ
ಅವಳಿ ಜಿಲ್ಲೆಗೆ ಬೃಹತ್ ಉಕ್ಕು ಘಟಕ   

ವಿಜಾಪುರ: ಜಗತ್ತಿನ ಎರಡನೆಯ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ದಕ್ಷಿಣ ಕೊರಿಯಾದ ‘ಪಾಸ್ಕೊ’ ಸಂಸ್ಥೆಯು ಅವಳಿ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಉಕ್ಕು ಘಟಕ ಸ್ಥಾಪಿಸಲು ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕೃಷ್ಣಾ ನದಿ ಪಕ್ಕದಲ್ಲಿ ಅಂದರೆ ವಿಜಾಪುರ ಜಿಲ್ಲೆಯ ಕೊಲ್ಹಾರ, ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ- ಹುನಗುಂದ ಮಧ್ಯದಲ್ಲಿ ಹಾಗೂ ಗದಗ ಬಳಿ ಸ್ಥಳ ಗುರುತಿಸಲಾಗಿದೆ. ಈ ಸಂಸ್ಥೆಯ ಅಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ನಿವೇಶನ ಅಂತಿಮಗೊಳಿಸಲಿದ್ದಾರೆ ಎಂದು ಬುಧವಾರ ಇಲ್ಲಿ ತಿಳಿಸಿದರು.
ವಾರ್ಷಿಕ ಆರು ದಶಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ ಕಾರ್ಖಾನೆ ಇದಾಗಿದ್ದು, 32 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಭೂಮಿ ಖರೀದಿಗಾಗಿ ಈ ಸಂಸ್ಥೆಯವರು ಈಗಾಗಲೆ 60 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರಕ್ಕೆ ಜಮಾ ಮಾಡಿದ್ದಾರೆ ಎಂದರು.

ವಿಜಾಪುರ ನಗರದಲ್ಲಿ ಎಟ್ಕೊ ಡೆನಿಮ್ ಸಿದ್ಧ ಉಡುಪು ತಯಾರಿಕಾ ಸಂಸ್ಥೆ ಕಾಮಗಾರಿ ಆರಂಭಿಸಿದ್ದು, ವರ್ಷದಲ್ಲಿ ಉತ್ಪಾದನೆ ನಡೆಸಲಿದೆ ಎಂದರು.
ಬಸವನ ಬಾಗೇವಾಡಿ ತಾಲ್ಲೂಕಿನ ಕೂಡಗಿ ಬಳಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದಿಂದ ಸ್ಥಾಪಿಸಲಾಗುತ್ತಿರುವ 4 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಶಪಡಿಸಿಕೊಳ್ಳುವ ಭೂಮಿಯ ಪೈಕಿ ನೀರಾವರಿ ಭೂಮಿಗೆ ಎಕರೆಗೆ ರೂ. 6 ಲಕ್ಷ ಹಾಗೂ ಒಣ ಬೇಸಾಯಕ್ಕೆ 4.75 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಕೆಲ ರೈತರು ಸ್ವ-ಸಂತೋಷದಿಂದ ಭೂಮಿ ನೀಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಒಂದು ಲಕ್ಷ ಎಕರೆ ಭೂ ಬ್ಯಾಂಕ್ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಭೂಮಿ ಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಬೆಲೆ ಹೆಚ್ಚು ನೀಡಬೇಕು ಎಂಬುದಷ್ಟೇ ಅವರ ಕೋರಿಕೆಯಾಗಿದೆ. ಆದರೂ, ಕೆಲವೆಡೆ ರಾಜಕೀಯ ದುರುದ್ದೇಶದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.