ADVERTISEMENT

ಆಟೋಗಳಿಗೆ ಮೀಟರ್ ಅಳವಡಿಕೆ; ನಗರಸಭೆ ಸಹಾಯಧನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಶಿವಮೊಗ್ಗ: ಆಟೋಗಳಿಗೆ ಮೀಟರ್ ಅಳವಡಿಕೆಗೆ ನಗರಸಭೆಯಿಂದ ಸಹಾಯ ಧನ ಒದಗಿಸಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಾಲಯದ ಆದೇಶದಂತೆ ಮೀಟರ್ ಅಳವಡಿಕೆ ಕಡ್ಡಾಯ. ಇದರಿಂದ ಯಾರಿಗೂ ವಿನಾಯ್ತಿ ಇಲ್ಲ.  ನಿಗದಿತ ಅವಧಿಯಲ್ಲಿ ಅಳವಡಿಸಿಕೊಳ್ಳದಿದ್ದರೆ ದಂಡ ಹಾಕಲಾಗುತ್ತದೆ. ಆದ್ದರಿಂದ ಮೀಟರ್ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಆಟೋ ಚಾಲಕರಿಗೆ ಸಲಹೆ  ಮಾಡಿದರು. ನಗರಸಭೆಯಿಂದ ಮೀಟರ್ ಅಳವಡಿಕೆಗೆ ಸಹಾಯಧನ ನೀಡುವಂತೆ ಇದೇ ಸಂದರ್ಭದಲ್ಲಿ ಸೂಚಿಸಿದರು.

ನಗರಸಭಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಆಟೋ ಚಾಲಕರ ಕಲ್ಯಾಣಕ್ಕಾಗಿ ನಗರಸಭೆ ಬಜೆಟ್‌ನಲ್ಲಿ ರೂ 50ಲಕ್ಷ ಅನುದಾನ ತೆಗೆದಿರಿಸಿದೆ. ಪರಿಶಿಷ್ಟ ಜಾತಿ ಮತ್ತು  ವರ್ಗದವರಿಗೆ ರೂ 5 ಸಾವಿರ, ಇತರರಿಗೆ ರೂ 1,500 ಸಹಾಯಧನ ನೀಡಲಾಗುವುದು ಎಂದರು.

ಅಲ್ಲದೆ ನಿವೇಶನ ರಹಿತ ಆಟೋಚಾಲಕರಿಗೆ ನಿವೇಶನ ಕೊಡಿಸುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕುಬೇರಪ್ಪ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಎಸ್. ರಾಮಯ್ಯ, ನಗರಸಭೆ ಆಯುಕ್ತ ಪಿ.ಜಿ. ರಮೇಶ್ ಮತ್ತಿತರ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.