ADVERTISEMENT

ಆನೆ ಬೇಟೆ ಶಂಕೆ: 6 ಜನ ಸೆರೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST

ಚಾಮರಾಜನಗರ: ತಾಲ್ಲೂಕಿನ ಗಡಿ ಭಾಗದ ಯರಗನಹಳ್ಳಿಯಲ್ಲಿ ಜಮೀನೊಂದರಲ್ಲಿ ಗಂಡಾನೆಯ ಕಳೇಬರವನ್ನು ಸುಟ್ಟು ಹಾಕುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಆರು ಜನ ಆರೋಪಿಗಳನ್ನು ಗುರುವಾರ ಬಂಧಿಸಿದೆ.

ಕೇರಳದ ಮೂಲದ ಮ್ಯಾಥ್ಯೂ ಎಂ. ಜಾರ್ಜ್, ಆ್ಯಂಟನಿ ಪೌಲ್, ವಿತೇಶ್, ರೋಪ್, ಯರಗನಹಳ್ಳಿಯ ಸುನಿಲ್ ಹಾಗೂ ಬೆಳ್ಳೆಗೌಡ ಬಂಧಿತರು. ಆರೋಪಿಗಳಿಂದ ಮೃತ ಆನೆಯ 2 ದಂತ ಹಾಗೂ 2 ಜೀಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
 
20 ವರ್ಷ ಪ್ರಾಯದ ಗಂಡಾನೆ ದೇಹ ಅರ್ಧದಷ್ಟು ಸುಟ್ಟು ಹೋಗಿದೆ. ಹೀಗಾಗಿ, ಆನೆಯು ವಿದ್ಯುತ್ ಸ್ಪರ್ಶದಿಂದ ಸತ್ತಿದೆಯೇ ಅಥವಾ ದಂತಕ್ಕಾಗಿ ಆರೋಪಿಗಳು ಕೊಂದಿದ್ದಾರೆಯೇ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.
 
ಮ್ಯಾಥ್ಯೂ ಎಂ. ಜಾರ್ಜ್ ಗ್ರಾಮದ ಹೊರವಲಯದಲ್ಲಿ ಜಮೀನು ಹೊಂದಿದ್ದಾನೆ. ಬೆಳಿಗ್ಗೆ ಆತನ ಹೊಲದ ಅನತಿ ದೂರಕ್ಕೆ ಆನೆಯ ಕಳೇಬರ  ಸುಟ್ಟು ಹಾಕಲು ಆರೋಪಿಗಳು ಯತ್ನಿಸಿದ್ದಾರೆ. 
 
`ಆನೆಯ ಕಳೇಬರ ಪರಿಶೀಲಿಸಲಾಗಿದೆ. ಅದು ಕಳ್ಳಬೇಟೆಗೆ ತುತ್ತಾಗಿ ಅಸು ನೀಗಿರುವ ಸಾಧ್ಯತೆ ದಟ್ಟವಾಗಿದೆ. ಸೆಸ್ಕ್ ವಿಭಾಗದ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಕುರುಹು ಇಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ' ಎಂದು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ (ಬಿಆರ್‌ಟಿ) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮಾ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ರೂ 6 ಲಕ್ಷ ಮೌಲ್ಯದ ಗಾಂಜಾ ವಶ
ಅಥಣಿ (ಬೆಳಗಾವಿ): ವಿಜಾಪುರ ಮಾರ್ಗವಾಗಿ ಅಥಣಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ 55 ಕೆ.ಜಿ. ಗಾಂಜಾವನ್ನು ಅಬಕಾರಿ ವಿಚಕ್ಷಣಾ ದಳದ ಅಧಿಕಾರಿಗಳು ಗುರುವಾರ ಸಂಜೆ ವಶಪಡಿಸಿಕೊಂಡಿದ್ದಾರೆ. 
 
ಬಡಚಿ ಗ್ರಾಮದ ಸಮೀಪ ದಾಳಿ ನಡೆಸಿ ಗಾಂಜಾ ಸಾಗಿಸುತ್ತಿದ್ದ ಅಥಣಿಯ ಸುಧಾಕರ ಕಾಡದೇವರಮಠ ಮತ್ತು ನಿಂಗನಗೌಡ ಬಿರಾದಾರ ಎಂಬುವವರನ್ನು ದ್ವಿಚಕ್ರ ವಾಹನದ ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.