ADVERTISEMENT

ಆರ್ಥಿಕ ದುರ್ಬಲರಿಗೆ ಕಾನೂನು ನೆರವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಕುಷ್ಟಗಿ: ಆರ್ಥಿಕ ದುರ್ಬಲರು, ನಿರ್ಗತಿಕರು ಸೇರಿದಂತೆ ದಾವೆ ನಡೆಸಲು ಸಾಧ್ಯವಿಲ್ಲದವರಿಗೆ ಉಚಿತ ಕಾನೂನು ನೆರವು ಒದಗಿಸಿಕೊಡುವ ವ್ಯವಸ್ಥೆ ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೂ ಇದ್ದು ಅದರ ಪ್ರಯೋಜನ ಪಡೆಯುವಂತೆ ಇಲ್ಲಿಯ ನ್ಯಾಯಾಧೀಶ ವಿ.ವೆಂಕಟೇಶಪ್ಪ ಕರೆ ನೀಡಿದರು.

ಬುಧವಾರ ತಾಲ್ಲೂಕಿನ ಗುಮಗೇರಿ ಗ್ರಾಮದಲ್ಲಿ ನಡೆದ ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು ನೆರವು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕ್ ಅದಾಲತ್ ಮಹತ್ವವನ್ನು ವಿವರಿಸಿ, ಕೆಲ ಕ್ರಿಮಿನಲ್ ಪ್ರಕರಣಗಳು ಮತ್ತು ಎಲ್ಲ ರೀತಿಯ ಸಿವಿಲ್ ಪ್ರಕರಣಗಳನ್ನು ರಾಜಿಸಂಧಾನದಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಇದರಿಂದ ಕೋರ್ಟ್, ಪೊಲೀಸ್ ಠಾಣೆಗಳಿಗೆ ಅಲೆಯುವುದು, ಆರ್ಥಿಕ ವೆಚ್ಚ, ಶ್ರಮ ತಪ್ಪುತ್ತದೆ. ರಾಜಿಸಂಧಾನದಲ್ಲಿ ಸೋಲೇ ಇರುವುದಿಲ್ಲ; ಬದಲಾಗಿ ವಾದಿ ಪ್ರತಿವಾದಿಗಳಿಬ್ಬರಿಗೂ ಗೆಲುವು ಲಭಿಸುತ್ತದೆ ಎಂದರು.

ಸರ್ಕಾರಿ ವಕೀಲ ಎನ್.ಎಸ್.ನಾಯ್ಕ ಇತರರು ಮಾತನಾಡಿದರು. ಆರ್.ಕೆ.ದೇಸಾಯಿ, ನಾಗಪ್ಪ ಸೂಡಿ ವಿವಿಧ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮೇಶ ಗಾಧಾರಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನ್ನಪೂರ್ಣಮ್ಮ ವಾಲ್ಮೀಕಿ, ಅಂಬಮ್ಮ ತಳವಾರ, ವಕೀಲರಾದ ಎಂ.ಎಂ. ಹಿರೇಮಠ, ಬಿ.ಎಂ. ದಂಡಿನ, ಬಿ.ಶರಣಪ್ಪ, ಪರಸಪ್ಪ, ಎ.ಎಚ್.ಪಲ್ಲೇದ, ಪ್ರಗತಿಪರ ರೈತ ಶರಣಗೌಡ, ವೈ.ಜೆ. ಪೂಜಾರ, ಶೇಖದಾದೂ, ಗ್ರಾಮ ಪಂಚಾಯಿತಿ ಸದಸ್ಯರು ವೇದಿಕೆಯಲ್ಲಿದ್ದರು.

ಬಸವರಾಜ ನಿರೂಪಿಸಿದರು. ಯಲ್ಲಮ್ಮ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.