ADVERTISEMENT

ಆಶ್ರಯ ಮನೆ ಸಾಲ ಮನ್ನಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 16:40 IST
Last Updated 23 ಫೆಬ್ರುವರಿ 2011, 16:40 IST

ದಾವಣಗೆರೆ: ಆಶ್ರಯ ಮನೆಗಳ ಸಾಲ ಮನ್ನಾಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪಾಲಿಕೆಗೆ ಬುಧವಾರ ಮುತ್ತಿಗೆ ಹಾಕಲಾಯಿತು.

ರಾಜ್ಯ ಸರ್ಕಾರವು 2010ರ ಡಿ. 31ರ ಒಳಗೆ ಆಶ್ರಯ ಮನೆಗಳ ಸಾಲ ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಕೆಲವರು ಮರು ಪಾವತಿ ಮಾಡಿದ್ದಾರೆ. ಉಳಿದ ಶೇ. 60ರಷ್ಟು ಮಂದಿ ಕಡು ಬಡವರಾಗಿರುವುದರಿಂದ 2011ರ ಮಾರ್ಚ್ 31ರವರೆಗೆ ಬಡ್ಡಿ ರಹಿತವಾಗಿ ಸಾಲ ಮರು ಪಾವತಿಸಲು ಅವಕಾಶ ನೀಡುವುದಾಗಿ ಸಂಬಂಧಿತ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದರೂ ಇದುವರೆಗೆ ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.

ಬೆಲೆ ಏರಿಕೆ ಸಂದರ್ಭದಲ್ಲಿ ಸರ್ಕಾರವು ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಆಶ್ರಯ ಮನೆಗಳ ಮೇಲಿನ ಸಾಲ ಮನ್ನಾ ಘೋಷಣೆ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗದವರ ಮನೆಗಳ ಸಾಲವನ್ನು ಪಾಲಿಕೆಯ ಶೇ. 22.75ರ ಅನುದಾನದಲ್ಲಿ ಮರುಪಾವತಿ ಮಾಡಬೇಕು. ಸಾಲ ಮರು ಪಾವತಿಸಿದವರಿಗೆ ಹಕ್ಕುಪತ್ರ ನೀಡಬೇಕು. ಆಶ್ರಯ ಬಡಾವಣೆಗಳ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸ ಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ನಾಗರಿಕ ಹಿತರಕ್ಷಣಾ ಸಮಿತಿಯ ಮುಖಂಡ ಆರ್.ಎ. ಬಸವನಗೌಡ, ಡಿ.ಎ. ಚಲುವರಾಜು, ಬಿ. ಕಲ್ಲೇಶಪ್ಪ ಇತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.